ನವದೆಹಲಿ: ಕೇಂದ್ರ ಸರ್ಕಾರ ಹೊಸ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ಜಾರಿಗೆ ಗೊಳಿಸಿದ ನಂತರ ಬಿಹಾರ, ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್, ತೆಲಂಗಾಣ ಸೇರಿ ಸುಮಾರು ಎಂಟು ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ (Agnipath Protest)ನಡೆಯಿತು. ಅಗ್ನಿಪಥ್‌ನಲ್ಲಿ ಯುವಕರಿಗೆ ಉದ್ಯೋಗ ಭರವಸೆಯಿಲ್ಲ. ಹಾಗಾಗಿ ಈ ಯೋಜನೆ ಹಿಂಪಡೆಯಬೇಕು ಎಂದು ಇವರೆಲ್ಲ ಆಗ್ರಹಿಸಿದರು. ಈ ಪ್ರತಿಭಟನಾಕಾರರು ಅಗ್ನಿಪಥ್ ವಿರೋಧಿಸಲು ಅಸ್ತ್ರವನ್ನಾಗಿ ಬಳಸಿಕೊಂಡಿದ್ದು ರೈಲು ಧ್ವಂಸ ಮಾರ್ಗವನ್ನು. ರೈಲುಗಳಿಗೆ ಬೆಂಕಿ ಹಚ್ಚಿದರು, ಹಾಳುಗೆಡವಿದರು, ರೈಲು ಸಂಚಾರ ನಿರ್ಬಂಧಿಸಿದರು. ಇವರ ಕಾರಣಕ್ಕೆ ಒಂದು ದಿನ 500ಕ್ಕೂ ಹೆಚ್ಚು ರೈಲುಗಳು ಸಂಚಾರ ಮಾಡಲಿಲ್ಲ. ಹೀಗಾಗಿ ಅದಾಗಲೇ ಟಿಕೆಟ್ ಮಾಡಿಸಿದ್ದ ಪ್ರಯಾಣಿಕರ ಟಿಕೆಟ್ ರದ್ದು ಮಾಡಿ, ಅವರಿಗೆ ಹಣವನ್ನೂ ವಾಪಸ್ ನೀಡಬೇಕಾಯಿತು. ಈ ಎಲ್ಲ ಕಾರಣಕ್ಕೆ ಇದೀಗ ರೈಲ್ವೆ ಇಲಾಖೆಗೆ ಬರೋಬ್ಬರಿ 1000 ಕೋಟಿ ರೂಪಾಯಿ ನಷ್ಟವಾಗಿದೆ. ಕಳೆದೊಂದು ದಶಕದಲ್ಲಿ ಈ ಪರಿ ನಷ್ಟವನ್ನು ರೈಲ್ವೆ ಇಲಾಖೆ ನೋಡಿರಲಿಲ್ಲ ಎಂದು ಹೇಳಲಾಗಿದೆ.
ಅಗ್ನಿಪಥ್ ಯೋಜನೆ ಜಾರಿಯಾದ ಬಳಿಕ ನಿರಂತರವಾಗಿ ನಾಲ್ಕು ದಿನಗಳ ಕಾಲ ಪ್ರತಿಭಟನೆ ನಡೆಯಿತು. ಈ ನಾಲ್ಕು ದಿನಗಳಲ್ಲಿ 10ಕ್ಕೂ ಹೆಚ್ಚು ರೈಲುಗಳು ಪ್ರತಿಭಟನಾಕಾರರ ಆಕ್ರೋಶಕ್ಕೆ ಧ್ವಂಸಗೊಂಡಿವೆ. ಬೆಂಕಿಗೆ ಬೂದಿಯಾಗಿವೆ. ಇವೆಲ್ಲ ಸೇರಿ 700 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ಹಾಗೇ, ರೈಲು ಸಂಚಾರ ನಿಲ್ಲಿಸಿದ್ದಕ್ಕೆ, ಪ್ರಯಾಣಿಕರ ಟಿಕೆಟ್ ರದ್ದುಗೊಳಿಸಿ, ಹಣಪಾವತಿ ಮಾಡಿದ್ದರಿಂದ 60 ಕೋಟಿ ರೂ.ಗೂ ಹೆಚ್ಚು ಲಾಸ್ ಆಗಿದೆ. ಅಗ್ನಿಪಥ್ ವಿರೋಧಿ ಹೋರಾಟದಿಂದ ಒಟ್ಟಾರೆ ಉಂಟಾದ ನಷ್ಟ ಸಾವಿರ ಕೋಟಿ ರೂಪಾಯಿ. ಭಾರತೀಯ ರೈಲ್ವೆ ಕಳೆದ ಒಂದು ದಶಕದಲ್ಲಿ ಇಷ್ಟು ಪ್ರಮಾಣದ ಹಾನಿಯನ್ನು ನೋಡಿರಲಿಲ್ಲ.
ಇದನ್ನೂ ಓದಿ: ಹೊಸ ಮಾದರಿಯ ಯುದ್ಧ ಎದುರಿಸಲು ಅಗ್ನಿಪಥ್ ಅಸ್ತ್ರ; ಎನ್‌ಎಸ್‌ಎ ಅಜಿತ್ ದೋವಲ್ ಪ್ರತಿಪಾದನೆ
ಒಂದು ರೈಲಿನ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಅಗತ್ಯವಿದೆ. ಒಂದು ಸಾಮಾನ್ಯ ಭೋಗಿ ನಿರ್ಮಿಸಲು 80 ಲಕ್ಷ ರೂ, ಸ್ಲೀಪರ್ ಕೋಚ್‌ಗೆ 1.25ಕೋಟಿ ರೂ. ಮತ್ತು ಒಂದು ಎಸಿ ಕೋಚ್ ನಿರ್ಮಿಸಲು 3.5 ಕೋಟಿ ರೂಪಾಯಿ ಬೇಕು. ಹಾಗೇ, ಒಂದು ರೈಲು ಎಂಜಿನ್‌ಗೆ 20 ಕೋಟಿ ರೂ. ಅಗತ್ಯ. ಈ ಲೆಕ್ಕಾಚಾರದಲ್ಲಿ ಹೇಳುವುದಾದರೆ 12 ಬೋಗಿಗಳುಳ್ಳ ಪ್ರಯಾಣಿಕರ ರೈಲು ತಯಾರು ಮಾಡಲು 40 ಕೋಟಿ ರೂ. ಅಗತ್ಯವಿದ್ದರೆ, 24 ಕೋಚ್‌ಗಳುಳ್ಳ ಟ್ರೇನ್‌ಗೆ ಸರ್ಕಾರ 70 ಕೋಟಿ ರೂ. ವ್ಯಯಿಸುತ್ತದೆ. ಐಷಾರಾಮಿ ರೈಲುಗಳ ನಿರ್ಮಾಣಕ್ಕೆ ಇನ್ನೂ ಹೆಚ್ಚಿನ ಹಣ ಬೇಕಾಗುತ್ತದೆ. ಆದರೆ ಈ ಪ್ರತಿಭಟನಾಕಾರರು ದೊಣ್ಣೆ ಹಿಡಿದು ಅತ್ಯಂತ ಸುಲಭವಾಗಿ ಧ್ವಂಸ ಮಾಡಿದ್ದಾರೆ. ಬೆಂಕಿ ಹಚ್ಚಿ ಕ್ಷಣದಲ್ಲಿ ಬೋಗಿಗಳನ್ನು ಬೂದಿ ಮಾಡಿಬಿಟ್ಟಿದ್ದಾರೆ.
ಅದೇನೋ ಯಾವುದೇ ಪ್ರತಿಭಟನೆ-ಹೋರಾಟದಲ್ಲಿ ಇತ್ತೀಚೆಗೆ ರೈಲುಗಳನ್ನೇ ಮೊದಲ ಟಾರ್ಗೆಟ್ ಮಾಡಲಾಗುತ್ತಿದೆ. ಸ್ವಲ್ಪ ದಿನಗಳ ಹಿಂದೆ ಆರ್‌ಆರ್‌ಬಿ-ಎನ್‌ಟಿಪಿಸಿ ಪರೀಕ್ಷೆ (ರೈಲ್ವೆ ನೇಮಕಾತಿ ಮಂಡಳಿಗಳ ತಾಂತ್ರಿಕೇತರ ಜನಪ್ರಿಯ ವರ್ಗಗಳ ಪರೀಕ್ಷೆ) ಫಲಿತಾಂಶದ ವಿರುದ್ಧ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದಾಗಲೂ ರೈಲುಗಳನ್ನೇ ಧ್ವಂಸ ಮಾಡಲಾಗಿತ್ತು. ಆಗಲೂ ಬೆಂಕಿ ಹಚ್ಚಲಾಗಿತ್ತು. ಈ ಹಿಂದೆ 2020-21ರಲ್ಲಿ ಇದೇ ಮಾದರಿಯ ಪ್ರತಿಭಟನೆಗಳ ಕಾರಣಕ್ಕೆ 467.20 ಕೋಟಿ ರೂ.ನಷ್ಟ ಅನುಭವಿಸಿದ್ದರೆ, 2019-20ರ ಸಾಲಿನಲ್ಲಿ 100ಕೋಟಿ ರೂ. ಲಾಸ್ ಆಗಿತ್ತು.
ಇದನ್ನೂ ಓದಿ: ʼಇ ಡಿ ವಿಷಯ ಬಿಡಿ, ಅಗ್ನಿಪಥ್ ಹೋರಾಟಕ್ಕೆ ಸಜ್ಜಾಗಿʼ; ಕಾಂಗ್ರೆಸ್ಸಿಗರಿಗೆ ರಾಹುಲ್ ಗಾಂಧಿ ಕರೆ