ನವದೆಹಲಿ: ಕರ್ನಾಟಕದಲ್ಲಿ ಎರಡು (ಚೆನ್ನೈ-ಮೈಸೂರು ಹಾಗೂ ಬೆಂಗಳೂರು ಧಾರವಾಡ) ಸೇರಿದಂತೆ ದೇಶಾದ್ಯಂತ 25 ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು (Vande Bharat) ಸಂಚರಿಸುತ್ತಿವೆ. ಹೆಚ್ಚಿನ ವೇಗ, ಅತ್ಯಾಧುನಿಕ ಸೌಕರ್ಯಗಳಿಂದಲೇ ಹೆಸರುವಾಸಿಯಾಗಿರುವ ವಂದೇ ಭಾರತ್ ರೈಲುಗಳು ಜನರನ್ನು ಹೆಚ್ಚು ಆಕರ್ಷಿಸಿವೆ. ಇದರ ಬೆನ್ನಲ್ಲೇ, ದೇಶದಲ್ಲಿ ವಂದೇ ಭಾರತ್ ಸ್ಲೀಪರ್ ಕೋಚ್ ಹಾಗೂ ವಂದೇ ಭಾರತ್ ಮೆಟ್ರೋ ರೈಲುಗಳ ಸೇವೆ ಕೂಡ ಆರಂಭಿಸಲು ಭಾರತೀಯ ರೈಲ್ವೆ (Indian Railways) ತೀರ್ಮಾನಿಸಿದೆ.
ಸ್ಲೀಪರ್ ಕೋಚ್‌ಗಳ ವೈಶಿಷ್ಟ್ಯವೇನು?
ಸ್ಲೀಪರ್ ಕೋಚ್ ವಂದೇ ಭಾರತ್ ರೈಲುಗಳು ಹಾಗೂ ಮೆಟ್ರೋ ರೈಲುಗಳ ಸೇವೆ ಕುರಿತು ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಜನರಲ್ ಮ್ಯಾನೇಜರ್ ಬಿ.ಜಿ. ಮಲ್ಯ ಮಾಹಿತಿ ನೀಡಿದ್ದಾರೆ. “ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳ ಸೇವೆಯು ಇದೇ ಹಣಕಾಸು ವರ್ಷದಲ್ಲಿ ಜನರಿಗೆ ಲಭ್ಯವಾಗಿದೆ. ಈಗಾಗಲೇ ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳ ತಯಾರಿಕೆ ಆರಂಭವಾಗಿದೆ. 2024ರ ಮಾರ್ಚ್‌ನಲ್ಲಿ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಾಗುತ್ತದೆ” ಎಂದು ಮಾಹಿತಿ ನೀಡಿದ್ದಾರೆ.
#WATCH | Indian Railways to launch sleeper version of Vande Bharat Express
— ANI (@ANI) September 16, 2023
B G Mallya, General Manager of Integral Coach Factory says, "We'll be launching the sleeper version of the Vande within this financial year. We'll also be launching the Vande Metro in this financial year.… pic.twitter.com/49q61cScIb
“ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳು ದೂರದ ಸಂಚಾರಕ್ಕೆ ಹೆಚ್ಚು ಅನುಕೂಲವಾಗಲಿವೆ. ಇವುಗಳನ್ನು ರಾತ್ರಿ ಓಡಿಸಲು ತೀರ್ಮಾನಿಸಲಾಗಿದ್ದು, ದೂರದೂರುಗಳಿಗೆ ರಾತ್ರಿ ಪ್ರಯಾಣಿಸುವವರಿಗೆ ಅನುಕೂಲವಾಗಲಿವೆ. ಅಲ್ಲದೆ, 22 ಕೋಚ್‌ಗಳು (ಬೋಗಿಗಳು) ಇರುವ ನಾನ್ ಎ.ಸಿ, ಲೋಕೊಮೋಟಿವ್ ಎಂಜಿನ್‌ನ ರೈಲುಗಳಿಗೆ ಅಕ್ಟೋಬರ್‌ನಲ್ಲಿ ಚಾಲನೆ ನೀಡಲಾಗುತ್ತದೆ” ಎಂದು ಕೂಡ ಬಿ.ಜಿ. ಮಲ್ಯ ತಿಳಿಸಿದ್ದಾರೆ.
ಇದನ್ನೂ ಓದಿ: Vande Bharat: ಚೆನ್ನೈ-ಮೈಸೂರು ವಂದೇ ಭಾರತ್ ರೈಲಿನ ವೇಗ ಹೆಚ್ಚಳ; ಈ ಊರಿನ ಜನರಿಗೆ ಅರ್ಧ ಗಂಟೆ ಸೇವ್
ವಂದೇ ಭಾರತ್ ಮೆಟ್ರೋ
ವಂದೇ ಭಾರತ್ ಮೆಟ್ರೋ ರೈಲುಗಳ ಸೇವೆಯನ್ನೂ ಆರಂಭಿಸುವುದು ಭಾರತೀಯ ರೈಲ್ವೆಯ ಗುರಿಯಾಗಿದೆ. ಮಹಾನಗರಗಳಿಂದ ಉಪನಗರಗಳಿಗೆ ತೆರಳುವ, ಕಡಿಮೆ ಅಂತರದ ಪ್ರಯಾಣಕ್ಕಾಗಿ ವಂದೇ ಭಾರತ್ ಮೆಟ್ರೋ ರೈಲುಗಳ ಸೇವೆಯನ್ನು ಆರಂಭಿಸಲಾಗುತ್ತಿದೆ. 2024ರ ಜನವರಿಯಲ್ಲಿ ವಂದೇ ಭಾರತ್ ಮೆಟ್ರೋ ರೈಲಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಯಾವ ನಗರಗಳಲ್ಲಿ ಚಾಲನೆ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ದೇಶದಲ್ಲಿ ಮೊದಲ ಬಾರಿಗೆ 2019ರ ಫೆಬ್ರವರಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಿದೆ.