ಪ್ರತ್ಯೇಕ ಖಲಿಸ್ತಾನಿ ಹೋರಾಟಗಾರರ (Khalistani Supporters) ಉಪಟಳ, ಪ್ರತಿಭಟನೆ ವಿದೇಶಗಳಲ್ಲಿ ಹೆಚ್ಚುತ್ತಿದೆ. ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿ ಪ್ರತ್ಯೇಕಾವಾದಿಗಳು ಭಾರತೀಯ ವಿದ್ಯಾರ್ಥಿಯೊಬ್ಬನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ. ಸಿಡ್ನಿಯ ಪಶ್ಚಿಮ ಉಪನಗರವಾದ ವೆಸ್ಟ್ಮೀಡ್ ಎಂಬಲ್ಲಿ ಶುಕ್ರವಾರ ವಿದ್ಯಾರ್ಥಿ ಮೇಲೆ ದಾಳಿ ಮಾಡಲಾಗಿದೆ. ದಾಳಿಗೆ ಒಳಗಾದ ಹುಡುಗ ತಾನು ಭಾರತೀಯ ವಿದ್ಯಾರ್ಥಿ (Indian Student) ಎಂದು ಅಲ್ಲಿನ ಮಾಧ್ಯಮಕ್ಕೆ ಹೇಳಿಕೊಂಡಿದ್ದಾನೆ.
‘ನಾನು ಇಲ್ಲಿ ವಿದ್ಯಾಭ್ಯಾಸದ ಜತೆ ಡ್ರೈವರ್ ಕೆಲಸವನ್ನೂ ಮಾಡಿಕೊಂಡಿದ್ದೇನೆ. ಮುಂಜಾನೆ 5.30ರ ಹೊತ್ತಿಗೆ ಕೆಲಸಕ್ಕೆ ಹೋಗುತ್ತಿದ್ದೆ. ಅಂದರೆ ನಾನು ವಾಸವಿದ್ದ ಜಾಗದಿಂದ 50 ಮೀಟರ್ಗಳಷ್ಟು ದೂರದಲ್ಲಿ ಪಾರ್ಕ್ ಮಾಡಲಾಗಿದ್ದ ಕಾರಿನ ಬಳಿ ತೆರಳುತ್ತಿದ್ದೆ. ಅದೇ ವೇಳೆ 4-5 ಖಲಿಸ್ತಾನಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಮುಖದ ಎಡಭಾಗಕ್ಕೆ ರಾಡ್ನಿಂದ ಹೊಡೆದಿದ್ದಾರೆ. ಅವರು ನನ್ನ ಮೇಲೆ ದಾಳಿಗೆ ಮುಂದಾಗುತ್ತಿದ್ದಂತೆ ಬೇಗನೇ ಹೋಗಿ ಕಾರಿನ ಡ್ರೈವಿಂಗ್ ಸೀಟ್ನಲ್ಲಿ ಕುಳಿತೆ. ಆದರೆ ಕಾರಿನ ಬಾಗಿಲು ತೆರೆದ ಅವರು, ಮುಖದ ಮೇಲೆ ಹೊಡೆದರು’ ಎಂದು ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: Khalistani Terrorists: ಲಂಡನ್ ಹೈಕಮಿಷನ್ ಎದುರು ಖಲಿಸ್ತಾನಿಗಳ ಪ್ರತಿಭಟನೆ; ಪೊಲೀಸರಿಗೆ ಅಂಜಿ ಓಡಿದ ಉಗ್ರರು
ಈ ಗುಂಪಿನ ಜನರು ಒಂದೇ ಸಮನೆ ಖಲಿಸ್ತಾನಿ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದರು. ನನ್ನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಮತ್ತೊಂದಷ್ಟು ಮಂದಿ ವಿಡಿಯೊ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಹುಡುಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತೀಚೆಗೆ ಕೆನಡಾ, ಯುಕೆ, ಆಸ್ಟ್ರೇಲಿಯಾ, ಯುಎಸ್ಗಳಲ್ಲಿ ಖಲಿಸ್ತಾನಿಗಳ ಪುಂಡಾಟ ಮಿತಿಮೀರಿದೆ. ಆ ದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳು, ಹೈಕಮೀಷನ್ಗಳು, ಭಾರತೀಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಯುಎಸ್ನ ಕ್ಯಾಲಿಫೋರ್ನಿಯಾದ ಸ್ಯಾನ್ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸ ಕಚೇರಿಗೆ ಖಲಿಸ್ತಾನಿಗಳು ಬೆಂಕಿ ಹಚ್ಚಿದ್ದರು.