ಲಖನೌ: ಇತ್ತೀಚೆಗೆ ಅಮೆರಿಕದಲ್ಲಿ ಭಾರತೀಯ ಮೂಲದ ದಂಪತಿ, ಅವರ ಮಗು ಮತ್ತು ಅವರ ಸಂಬಂಧಿ ಸೇರಿ ನಾಲ್ವರನ್ನು ಹತ್ಯೆ ಮಾಡಲಾಗಿತ್ತು. ಅದರ ಬೆನ್ನಲ್ಲೇ ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನಿಗೆ ಚೂರಿ ಇರಿತವಾಗಿದೆ. ಚೆನ್ನೈನ ಐಐಟಿ ಮದ್ರಾಸ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದು, ಸಿಡ್ನಿಯಲ್ಲಿರುವ ನ್ಯೂ ಸೌತ್ ವೇಲ್ಸ್ ಯೂನಿವರ್ಸಿಟಿಯಲ್ಲಿ ಪಿಎಚ್ಡಿ ಮಾಡುವ ಸಲುವಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ 28 ವರ್ಷದ ಯುವಕ ಶುಭಮ್ ಜಾರ್ಜ್ ಹಲ್ಲೆಗೆ ಒಳಗಾದ ಯುವಕ. ಆ ದುಷ್ಕರ್ಮಿ ಶುಭಮ್ಗೆ ಒಟ್ಟು 11 ಬಾರಿ ಚಾಕುವಿನಿಂದ ಇರಿದಿದ್ದಾನೆ. ಸದ್ಯ ಶುಭಮ್ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಹಾಯ ಮಾಡಿ ಎಂದು ಆತನ ಕುಟುಂಬದವರು ಪ್ರಧಾನಿ ಮೋದಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಶುಭಮ್ ಮೂಲತಃ ಉತ್ತರ ಪ್ರದೇಶದ ಆಗ್ರಾದವನು. ಕುಟುಂಬವೆಲ್ಲ ಇಲ್ಲೇ ನೆಲೆಸಿದೆ. ಸೆಪ್ಟೆಂಬರ್ 1ರಂದು ಸಿಡ್ನಿಗೆ ಹೋಗಿದ್ದ. ಅಕ್ಟೋಬರ್ 6ರಂದು ರಾತ್ರಿ 10.30ರ ಹೊತ್ತಿಗೆ ಎಟಿಎಂಗೆ ಹೋಗಿ ಹೊರಬಂದ ನಂತರ ವ್ಯಕ್ತಿಯೊಬ್ಬ ಆತನನ್ನು ಅಡ್ಡಗಟ್ಟಿದ್ದ. ಹಣವನ್ನೆಲ್ಲ ಕೊಡುವಂತೆ ಆಗ್ರಹಿಸಿದ. ಆದರೆ ಶುಭಮ್ ಅದಕ್ಕೆ ಒಪ್ಪಿಗೆ ಕೊಡಲಿಲ್ಲ. ಆಗ ದುಷ್ಕರ್ಮಿ ಕ್ರೋಧದಿಂದ ಶುಭಮ್ಗೆ ಇರಿದಿದ್ದ. ಆತನ ಮುಖ, ಎದೆ, ಹೊಟ್ಟೆಗೆಲ್ಲ ಸಿಕ್ಕಾಪಟೆ ಇರಿದಿದ್ದಾನೆ.
ಅಕ್ಟೋಬರ್ 6ರಂದು ಈ ಘಟನೆ ನಡೆದಿದ್ದರೂ ಉತ್ತರ ಪ್ರದೇಶದಲ್ಲಿ ಇರುವ ಕುಟುಂಬದವರಿಗೆ ಈ ಬಗ್ಗೆ ಗೊತ್ತಾಗಿದ್ದು ಅಕ್ಟೋಬರ್ 8ರಂದು. ಅಂದು ಶುಭಮ್ಗೆ ಆತನ ತಂದೆ ರಾಮನಿವಾಸ್ ಗಾರ್ಗ್ ಕರೆ ಮಾಡಿದ್ದರು. ಆದರೆ ಆತ ಆಸ್ಪತ್ರೆಯಲ್ಲಿ ಇದ್ದುದರಿಂದ ಸ್ವೀಕರಿಸಿರಲಿಲ್ಲ. ಹೀಗಾಗಿ ಆತಂಕಗೊಂಡ ತಂದೆ, ಶುಭಮ್ ಸ್ನೇಹಿತನಿಗೆ ಕರೆ ಮಾಡಿದ್ದಾರೆ. ಆಗಲೇ ವಿಷಯ ಗೊತ್ತಾಗಿದೆ. ಶುಭಮ್ ಅಪಾಯದಲ್ಲಿದ್ದಾನೆ ಎಂದು ಗೊತ್ತಾದ ತಕ್ಷಣ ಆತನ ಕುಟುಂಬದವರು ವೀಸಾಕ್ಕೆ ಮನವಿ ಮಾಡಿದ್ದರು. ಶುಭಮ್ ಸೋದರನನ್ನು ಸಿಡ್ನಿಗೆ ಕಳಿಸುವುದು ಅವರ ಇಚ್ಛೆಯಾಗಿತ್ತು. ಆದರೆ ಇಂದು ಆ ಕುಟುಂಬಕ್ಕೆ ವೀಸಾ ಸಿಕ್ಕಿದೆ ಎನ್ನಲಾಗಿದೆ. ಇನ್ನು ತಾವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ದಾಳಿ ಮಾಡಿದವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವವರಿಗೂ ಬಿಡುವುದಿಲ್ಲ ಎಂದು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹೈಕಮಿಷನ್ ಕೂಡ ಹೇಳಿದೆ.
ಶುಭಮ್ಗೆ ಈಗಾಗಲೇ ಹಲವು ಸರ್ಜರಿಗಳು ಆಗಿವೆ. ಈ ಬಗ್ಗೆ ಆತನ ಸೋದರಿ ಕಾವ್ಯಾ ಗಾರ್ಗ್ ಟ್ವೀಟ್ ಮಾಡಿ ‘ನನ್ನ ಸೋದರನ ಸ್ಥಿತಿ ಗಂಭೀರವಾಗಿದೆ. ಆತನಿಗೆ ಸಹಾಯ ಮಾಡಬೇಕು. ಈ ವಿಚಾರದಲ್ಲಿ ನಮಗೆ ಸರ್ಕಾರಗಳು ನೆರವು ನೀಡಬೇಕು ಎಂದು ಬಯಸುತ್ತೇವೆ ಎಂದಿದ್ದಾರೆ. ಹಾಗೇ, ಪ್ರಧಾನಿ ಮೋದಿ, ಕೇಂದ್ರ ವಿದೇಶಾಂಗ ಇಲಾಖೆ ಸಚಿವ ಎಸ್. ಜೈಶಂಕರ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರನ್ನು ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ |ಮೌಲ್ಯಗಳನ್ನು ಬೋಧನೆ ಮಾಡದೆ ಅವುಗಳನ್ನೇ ಬದುಕಿದ ಮಹಾ ಗುರು ಪ್ರೊ. ಎಚ್. ನರಸಿಂಹಯ್ಯ