ನವ ದೆಹಲಿ: ಆಸ್ಟ್ರೇಲಿಯಾದ ಕ್ವೀನ್ಲ್ಯಾಂಡ್ ಬೀಚ್ನಲ್ಲಿ ಯುವತಿಯೊಬ್ಬಳನ್ನು ಹತ್ಯೆಗೈದು ಭಾರತಕ್ಕೆ ಬಂದಿದ್ದ ರಜ್ವಿಂದರ್ ಸಿಂಗ್ (38)ನನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈತ ವೃತ್ತಿಯಲ್ಲಿ ನರ್ಸ್ ಆಗಿದ್ದ. 2018ರಲ್ಲಿ ಕ್ವೀನ್ಸ್ಲ್ಯಾಂಡ್ ಬೀಚ್ನಲ್ಲಿ ಯುವತಿಯನ್ನು ಹತ್ಯೆ ಮಾಡಿದ್ದ. ಅದಾಗಿ ಎರಡು ದಿನಗಳ ಬಳಿಕ ಭಾರತಕ್ಕೆ ಬಂದಿದ್ದ. ತನ್ನ ಕೆಲಸ, ಪತ್ನಿ-ಮಕ್ಕಳನ್ನೆಲ್ಲ ಆಸ್ಟ್ರೇಲಿಯಾದಲ್ಲೇ ಬಿಟ್ಟು ಓಡಿಬಂದಿದ್ದ.
2018ರ ಅಕ್ಟೋಬರ್ 21ರಂದು ಟೋಯಾಹ್ ಕಾರ್ಡಿಂಗ್ಲೆ ಎಂಬುವಳು ಕ್ವೀನ್ಸ್ಲ್ಯಾಂಡ್ ಬೀಚ್ನಲ್ಲಿ ತನ್ನ ನಾಯಿಯೊಂದಿಗೆ ವಾಕ್ ಮಾಡಿಕೊಂಡು ಹೋಗುತ್ತಿದ್ದಳು. ಆಕೆಯನ್ನು ರಜ್ವಿಂದರ್ ಸಿಂಗ್ ಹತ್ಯೆಗೈದಿದ್ದ. ಬಳಿಕ ಭಾರತಕ್ಕೆ ಬಂದಿದ್ದ ಈತನ ತಲೆಗೆ ಕ್ವೀನ್ಸ್ಲ್ಯಾಂಡ್ ಪೊಲೀಸರು 1 ಮಿಲಿಯನ್ಗಳಷ್ಟು ಆಸ್ಟ್ರೇಲಿಯನ್ ಡಾಲರ್ (ಸುಮಾರು 5 ಕೋಟಿ ರೂಪಾಯಿ) ಬಹುಮಾನ ಘೋಷಿಸಿದ್ದರು. ಇತ್ತೀಚಿನ ವರ್ಷಗಳೇ ಕ್ವೀನ್ಸ್ಲ್ಯಾಂಡ್ ಪೊಲೀಸರು ಯಾವುದೇ ಕ್ರಿಮಿನಲ್ ತಲೆಗೂ ಇಷ್ಟು ದೊಡ್ಡಮೊತ್ತದ ಬಹುಮಾನ ಘೋಷಣೆ ಮಾಡಿರಲಿಲ್ಲ.
ರಜ್ವಿಂದರ್ ಸಿಂಗ್ ಮೂಲತಃ ಪಂಜಾಬ್ನ ಅಮೃತ್ಸರ್ನ ಬಟಾರ್ ಕಲಾನ್ನವನು. ಇಲ್ಲಿಂದ ಆಸ್ಟ್ರೇಲಿಯಾಕ್ಕೆ ಹೋಗಿ ನೆಲೆಸಿದ್ದ. ಅಲ್ಲಿಯೇ ನರ್ಸ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ. ಟೋಯಾಹ್ರನ್ನು ಹತ್ಯೆ ಮಾಡಿದ ನಂತರ ಅಕ್ಟೋಬರ್ 23ರ 2018ರಂದು ರಜ್ವಿಂದರ್ ಸಿಂಗ್ ಸಿಡ್ನಿಯಿಂದ ಭಾರತಕ್ಕೆ ಹಾರಿದ್ದ ಎಂದು ತಿಳಿದುಬಂದಿದೆ. ಅವನು ಭಾರತಕ್ಕೆ ಹೋಗಿದ್ದನ್ನು ಅವರೂ ದೃಢಪಡಿಸಿದ್ದಾರೆ ಎಂದು ಕ್ವೀನ್ಸ್ಲ್ಯಾಂಡ್ ಪೊಲೀಸರು ತಿಳಿಸಿದ್ದಾರೆ. ಇನ್ನು ಆರೋಪಿಯನ್ನು ಆಸ್ಟ್ರೇಲಿಯಾಕ್ಕೆ ಗಡೀಪಾರು ಮಾಡಲು ಕ್ರಮ ಕೈಗೊಳ್ಳಿ ಎಂದು ಆಸ್ಟ್ರೇಲಿಯಾ ಸರ್ಕಾರ ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಭಾರತ ಸರ್ಕಾರಕ್ಕೆ ಮನವಿ ಮಾಡಿತ್ತು. ನವೆಂಬರ್ ತಿಂಗಳಲ್ಲಷ್ಟೇ ಭಾರತ ಸರ್ಕಾರ ಅದಕ್ಕೆ ಅನುಮೋದನೆ ನೀಡಿತ್ತು. ಇದೀಗ ಹಂತಕ ಅರೆಸ್ಟ್ ಆಗಿದ್ದಾನೆ.
ಇದನ್ನೂ ಓದಿ: Viral Video | ಸರಸರ ಬಂದು ಚಪ್ಪಲಿಯನ್ನು ಬಾಯಲ್ಲಿ ಕಚ್ಚಿಕೊಂಡು ಪೊದೆಯೊಳಗೆ ಸರಿದು ಹೋದ ಹಾವು!