Site icon Vistara News

INDIA Meeting: ಇಂದು ‘ಇಂಡಿಯಾ’ ಸಭೆ; ಸೀಟು ಹಂಚಿಕೆ, ಚುನಾವಣೆ ರಣತಂತ್ರ ಸೇರಿ ಏನಿದೆ ಅಜೆಂಡಾ?

INDIA bloc leaders will meet today virtually

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಶತಾಯ ಗತಾಯ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಬೇಕು ಎಂಬ ದೃಢ ನಿಶ್ಚಯದಿಂದ ರಚಿಸಿರುವ ಇಂಡಿಯಾ ಒಕ್ಕೂಟದ ಸಭೆಯು (INDIA Meeting) ಬುಧವಾರ (ಸೆಪ್ಟೆಂಬರ್‌ 13) ನಡೆಯಲಿದೆ. ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ನಿವಾಸದಲ್ಲಿ ಬುಧವಾರ ಸಂಜೆ ಸಭೆ ನಡೆಯಲಿದ್ದು, ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇಂಡಿಯಾ ಮೈತ್ರಿಕೂಟದ ನಾಯಕರ ಮಧ್ಯೆಯೇ ಸಮನ್ವಯತೆ ಸಾಧಿಸಲು ರಚಿಸಿರುವ 14 ಸದಸ್ಯರ ಸಮನ್ವಯ ಸಮಿತಿಯ ಸಭೆ ಇದಾಗಿದ್ದು, ಸಮಿತಿಯ ಎಲ್ಲ ಸದಸ್ಯರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಯಲ್ಲಿ ಆಯಾ ಪಕ್ಷಗಳು ಸ್ಪರ್ಧಿಸಬೇಕಾದ ಸೀಟುಗಳ ಹಂಚಿಕೆ, ರಾಜಸ್ಥಾನ, ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ರಣತಂತ್ರ, ಮೈತ್ರಿಕೂಟದಲ್ಲಿ ಇನ್ನಷ್ಟು ಒಗ್ಗಟ್ಟು ಮೂಡಿಸುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ.

INDIA alliance leaders meeting

ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಅವರು ಹೇಳಿಕೆ ನೀಡಿದ ಬಳಿಕ ಇಂಡಿಯಾ ಒಕ್ಕೂಟದ ನಾಯಕರಲ್ಲಿಯೇ ಭಿನ್ನಾಭಿಪ್ರಾಯ ಮೂಡಿದೆ. ಹಾಗೆಯೇ, ಸನಾತನ ಧರ್ಮದ ವಿರುದ್ಧ ಹೋರಾಟ ನಡೆಸಲೆಂದೇ ಇಂಡಿಯಾ ಒಕ್ಕೂಟವನ್ನು ರಚಿಸಲಾಗಿದೆ ಎಂದು ಡಿಎಂಕೆಯ ಮತ್ತೊಬ್ಬ ಸಚಿವ ಹೇಳಿರುವುದು ಕೂಡ ಒಕ್ಕೂಟದಲ್ಲಿ ಹಲವು ಪಕ್ಷಗಳಿಗೆ ಇರಿಸು ಮುರಿಸು ಉಂಟಾಗಿದೆ. ಹಾಗಾಗಿ, ಒಗ್ಗಟ್ಟಿನ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: Bypolls Results 2023: 7 ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ ಪ್ರಾಬಲ್ಯ, ಚಾಂಡಿ ಉಮ್ಮನ್‌ಗೆ ಜಯ, ಇಂಡಿಯಾ ಒಕ್ಕೂಟಕ್ಕೆ ಹಿನ್ನಡೆ

ಅಭಿಷೇಕ್‌ ಬ್ಯಾನರ್ಜಿ ಗೈರು?

ಮತ್ತೊಂದೆಡೆ ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ನೇಮಕದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು, ಸೆಪ್ಟೆಂಬರ್‌ 13ರಂದು ವಿಚಾರಣೆಗೆ ಹಾಜರಾಗುವಂತೆ ತೃಣಮೂಲ ಕಾಂಗ್ರೆಸ್‌ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರಿಗೆ ಸಮನ್ಸ್‌ ನೀಡಿದೆ. ಹಾಗಾಗಿ, ಇಂಡಿಯಾ ಒಕ್ಕೂಟದ ಸಮನ್ವಯ ಸಮಿತಿ ಸದಸ್ಯರಾಗಿರುವ ಅಭಿಷೇಕ್‌ ಬ್ಯಾನರ್ಜಿ ಅವರು ಬುಧವಾರದ ಸಭೆಗೆ ಗೈರಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Exit mobile version