ನವ ದೆಹಲಿ: ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಅನ್ನು ಎಲ್ಲ ೧೮-೭೫ ವಯೋಮಾನದ ಎಲ್ಲ ವಯಸ್ಕರಿಗೆ ಉಚಿತವಾಗಿ ವಿತರಿಸುವ ೭೫ ದಿನಗಳ ಅಭಿಯಾನ ಇಂದಿನಿಂದ ಆರಂಭವಾಗಲಿದೆ.
ಕೋವಿಡ್-೧೯ ಲಸಿಕೆಯ ಈ ಮೂರನೇ ಡೋಸ್ ಅನ್ನು ತೆಗೆದುಕೊಳ್ಳಲು ಅರ್ಹರಿರುವ ಭಾರತೀಯರ ಪೈಕಿ ೯೨% ಮಂದಿ ಅಥವಾ ೫೯.೪ ಕೋಟಿ ಇನ್ನೂ ಲಸಿಕೆ ತೆಗೆದುಕೊಂಡಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಅಭಿಯಾನ ಮಹತ್ವ ಪಡೆದಿದೆ.
ಬೂಸ್ಟರ್ ಡೋಸ್ ಅನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಕವಾಗಿ ವಿತರಿಸಲು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗೆ ೬೦ ವರ್ಷ ಮೇಲ್ಪಟ್ಟ ಹಿರಿಯರಿಗೆ ಮಾತ್ರ ಬೂಸ್ಟರ್ ಡೋಸ್ ಉಚಿತವಾಗಿತ್ತು. ಉಳಿದವರಿಗೆ ಏಪ್ರಿಲ್‌ನಿಂದ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದ್ದರೂ, ಉಚಿತವಾಗಿರಲಿಲ್ಲ. ಏಪ್ರಿಲ್ ಬಳಿಕ ೧೮ ವರ್ಷ ಮೇಲ್ಪಟ್ಟವರಲ್ಲಿ ಕೇವಲ ೮% ಮಂದಿ ಮಾತ್ರ ಬೂಸ್ಟರ್ ಡೋಸ್ ಪಡೆದಿದ್ದರು. ಇದು ಕಳವಳಕಾರಿ ಸಂಗತಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ೭೫ ದಿನಗಳ ಕಾಲ “ಕೋವಿಡ್ ಲಸಿಕೆ ಅಮೃತ ಮಹೋತ್ಸವʼ ಹೆಸರಿನಲ್ಲಿ ಅಭಿಯಾನ ನಡೆಯಲಿದ್ದು ಸೆಪ್ಟೆಂಬರ್ ೩೦ರ ತನಕ ನಡೆಯಲಿದೆ.
ಇದನ್ನೂ ಓದಿ:ನಿಮಗೆ 18 ವರ್ಷ ಆಗಿದೆಯೆ? ಜುಲೈ 15ರಿಂದ ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ಉಚಿತ