Site icon Vistara News

Rahul Gandhi: ಇಡೀ ಭಾರತದ ಎಕ್ಸ್‌ರೇ ತೆಗೆಯಬೇಕು ಎಂದ ರಾಹುಲ್‌ ಗಾಂಧಿ; ಹೀಗೆ ಹೇಳಿದ್ದೇಕೆ?

Rahul Gandhi

ಭೋಪಾಲ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ದೇಶದ ಹಲವು ರಾಜ್ಯಗಳಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ (Bharat Jodo Nyay Yatra) ಕೈಗೊಳ್ಳುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ನ್ಯಾಯ ಯಾತ್ರೆ ವೇಳೆ ಜನರೊಂದಿಗೆ ಮಾತುಕತೆ ನಡೆಸುವ ಜತೆಗೆ ಜನರ ಪ್ರಶ್ನೆಗಳಿಗೆ ಉತ್ತರಗಳನ್ನೂ ನೀಡುತ್ತಿದ್ದಾರೆ. ಹೀಗೆ, ಮಧ್ಯಪ್ರದೇಶದಲ್ಲಿ ನ್ಯಾಯ ಯಾತ್ರೆ ಕೈಗೊಳ್ಳುವ ವೇಳೆ ವ್ಯಕ್ತಿಯ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, “ಇಡೀ ಭಾರತದ ಎಕ್ಸ್‌ರೇ ತೆಗೆಯಬೇಕು” ಎಂದು ಹೇಳಿದ್ದಾರೆ. ಈ ವಿಡಿಯೊ (Viral Video ಈಗ ಭಾರಿ ವೈರಲ್‌ ಆಗಿದೆ.

ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ ಕೈಗೊಳ್ಳುತ್ತಿರುವ ರಾಹುಲ್‌ ಗಾಂಧಿ ಅವರಿಗೆ, ವ್ಯಕ್ತಿಯೊಬ್ಬರು ಒಂದು ಪ್ರಶ್ನೆ ಕೇಳಿದರು. “ದೇಶದಲ್ಲಿ ಒಬಿಸಿಗಳ ಸಹಭಾಗಿತ್ವ ಹೇಗೆ ಹೆಚ್ಚಾಗುತ್ತದೆ” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಾಹುಲ್‌ ಗಾಂಧಿ, “ನಿಮಗೆ ಗಾಯವಾದರೆ ನೀವೇನು ಮಾಡುತ್ತೀರಿ? ಆಸ್ಪತ್ರೆಗೆ ಹೋಗುತ್ತೀರಿ. ಆಗ ನಿಮಗೆ ವೈದ್ಯರು ಎಕ್ಸ್‌ರೇ ತೆಗೆಯಬೇಕು ಎಂಬುದಾಗಿ ಹೇಳುತ್ತಾರೆ. ಅದರಂತೆ, ನೀವು ಎಕ್ಸ್‌ರೇ ತೆಗೆಸಿದಾಗ ಸಮಸ್ಯೆಯ ಪ್ರಮಾಣ ಗೊತ್ತಾಗುತ್ತದೆ. ಅದರಂತೆ, ಇಡೀ ಭಾರತವನ್ನು ಜಾತಿ ಜನಗಣತಿ ಮೂಲಕ ಎಕ್ಸ್‌ರೇ ತೆಗೆಯಬೇಕು” ಎಂದು ಹೇಳಿದರು.

“ಭಾರತವೀಗ ಮಾಹಿತಿ, ಅಂಕಿ-ಅಂಶಗಳ ಯುಗದಲ್ಲಿ ಜೀವಿಸುತ್ತಿದೆ. ಹಾಗಾಗಿ, ದೇಶಾದ್ಯಂತ ಜಾತಿ ಜನಗಣತಿ ನಡೆಯಬೇಕು. ಇದರಿಂದ ದೇಶದಲ್ಲಿ ಹಿಂದುಳಿದವರು ಎಷ್ಟಿದ್ದಾರೆ, ದಲಿತರು, ಆದಿವಾಸಿಗಳು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದು ತಿಳಿಯುತ್ತದೆ. ಅಷ್ಟೇ ಅಲ್ಲ, ಮುಕೇಶ್‌ ಅಂಬಾನಿ, ಗೌತಮ್‌ ಅದಾನಿ ಸೇರಿ ಎಲ್ಲರೂ ಎಷ್ಟು ಆಸ್ತಿ ಹೊಂದಿದ್ದಾರೆ ಎಂಬುದು ತಿಳಿಯುತ್ತದೆ. ಇದರಿಂದ ದೇಶದಲ್ಲಿ ಒಬಿಸಿ, ದಲಿತರ ಸಹಭಾಗಿತ್ವ, ಅವರಿಗೆ ಯೋಜನೆಗಳ ಉಪಯೋಗ ಸಿಗಲು ನೆರವಾಗುತ್ತದೆ” ಎಂದು ತಿಳಿಸಿದರು.

ಇದನ್ನೂ ಓದಿ: ಎಂಎಸ್‌ಪಿಗೂ, ಎಂಆರ್‌ಪಿಗೂ ವ್ಯತ್ಯಾಸ ತಿಳಿಯದ ರಾಹುಲ್‌ ಗಾಂಧಿ; ನೀವೇ ವಿಡಿಯೊ ನೋಡಿ

ಕಾಂಗ್ರೆಸ್‌ ಆಡಳಿತಕ್ಕೆ ಬಂದರೆ ಜಾತಿಗಣತಿ

“ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಾತಿ ಜನಗಣತಿ ಕೈಗೊಳ್ಳಲಾಗುತ್ತದೆ. ಕಾಂಗ್ರೆಸ್‌ ಮೊದಲಿನಿಂದಲೂ ಕ್ರಾಂತಿಕಾರಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಿದೆ. ನಾವೇನಾದರೂ ಅಧಿಕಾರಕ್ಕೆ ಬಂದರೆ, ಯಾರು ಎಷ್ಟು ಸಂಖ್ಯೆಯಲ್ಲಿ ಇದ್ದಾರೆ, ಯಾರ ಬಳಿ ಎಷ್ಟು ಆಸ್ತಿ ಇದೆ ಎಂದು ತಿಳಿದುಕೊಂಡು, ಒಬಿಸಿಯವರ ಏಳಿಗೆಗೆ ದುಡಿಯುತ್ತೇವೆ. ನಾವು ಸ್ವಾತಂತ್ರ್ಯ, ಶ್ವೇತ ಕ್ರಾಂತಿ, ಕಂಪ್ಯೂಟರ್‌ ಕ್ರಾಂತಿಗಾಗಿ ಹೋರಾಡಿದ್ದೇವೆ. ಈಗ ಜಾತಿ ಜನಗಣತಿಗಾಗಿಯೂ ಹೋರಾಡುತ್ತೇವೆ. ದೇಶದ ಎಕ್ಸ್‌ರೇ ಹಾಗೂ ಎಂಆರ್‌ಐ ಆಗುವವರೆಗೆ ಸುಮ್ಮನಿರುವುದಿಲ್ಲ” ಎಂದು ರಾಹುಲ್‌ ಗಾಂಧಿ ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version