Site icon Vistara News

IndiGo Flight: ವಿಮಾನ ಹಾರಾಟ ವಿಳಂಬ ಎಂದು ಪೈಲಟ್‌ಗೆ ಹೊಡೆದ ಪ್ರಯಾಣಿಕ; ವಿಡಿಯೊ ಇಲ್ಲಿದೆ

IndiGo Flight Passenger

IndiGo passenger assaults pilot on Delhi-Goa flight over delay; detained

ನವದೆಹಲಿ: ಭಾರಿ ಮಳೆ, ಚಂಡಮಾರುತ ಸೇರಿ ಯಾವುದೇ ರೀತಿಯಲ್ಲಿ ಹವಾಮಾನ ವೈಪರೀತ್ಯ ಉಂಟಾದರೆ ವಿಮಾನಗಳ ಹಾರಾಟ ವಿಳಂಬವಾಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ಪೇಚಾಡುವುದು ಕೂಡ ಅಷ್ಟೇ ಸಾಮಾನ್ಯ. ಹೀಗೆ, ಭಾನುವಾರ (ಜನವರಿ 14) ದಟ್ಟ ಮಂಜಿನಿಂದಾಗಿ ವಿಮಾನದ ಹಾರಾಟ ವಿಳಂಬವಾಗಿಯಿತು ಎಂದು ಇಂಡಿಗೋ ವಿಮಾನದ (IndiGo Flight) ಪ್ರಯಾಣಿಕನೊಬ್ಬ ಪೈಲಟ್‌ (Pilot) ಮೇಲೆಯೇ ಹಲ್ಲೆ ನಡೆಸಿದ್ದಾನೆ. ಈ ವಿಡಿಯೊ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಭಾನುವಾರ ಬೆಳಗಿನ ಜಾವ ಇಂಡಿಗೋ ವಿಮಾನವು ದೆಹಲಿಯಿಂದ ಗೋವಾಗೆ ಹೊರಡಬೇಕಿತ್ತು. ಆದರೆ, ದೆಹಲಿಯಲ್ಲಿ ದಟ್ಟ ಮಂಜು ಕವಿದ ಕಾರಣ ವಿಮಾನದ ಹಾರಾಟ ವಿಳಂಬವಾಗಿದೆ. ಸುಮಾರು 13 ತಾಸು ಪ್ರಯಾಣಿಕರು ವಿಮಾನದಲ್ಲಿಯೇ ಕಾದು ಕುಳಿತಿದಿದ್ದಾರೆ. ಇದೇ ವೇಳೆ ವಿಮಾನದ ಪೈಲಟ್‌ ಎಲ್ಲ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ವಿಮಾನ ಹಾರಾಟ ವಿಳಂಬವಾಗಿರುವ ಕುರಿತು ಹೇಳುತ್ತಿದ್ದರು. ಆದರೆ, ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಪೈಲಟ್‌ ಮೇಲೆ ಎರಗಿ, ಪೈಲಟ್‌ಗೆ ಹಲ್ಲೆ ನಡೆಸಿದ್ದಾನೆ. “ವಿಮಾನ ಹಾರಿಸಿದರೆ ಹಾರಿಸು, ಇಲ್ಲ ಸುಮ್ಮನಿರು” ಎಂದು ವ್ಯಕ್ತಿಯು ಗದರಿದ್ದಾನೆ.

ವಿಮಾನ ಪ್ರಯಾಣಿಕನು ಪೈಲಟ್‌ ಮೇಲೆಯೇ ಹಲ್ಲೆ ನಡೆಸಿದ ಕೂಡಲೇ ವಿಮಾನದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. “ಇದೇನು ಮಾಡುತ್ತಿದ್ದೀರಿ” ಎಂದು ಗಗನಸಖಿಯು ಪ್ರಯಾಣಿಕನ ಮೇಲೆ ಗದರಿದ್ದಾರೆ. ಇಷ್ಟಾದರೂ ಪ್ರಯಾಣಿಕನು ಪೈಲಟ್‌ಗೆ ಬೈದಿದ್ದಾನೆ. ಒಂದಷ್ಟು ಸಿಬ್ಬಂದಿಯು ವ್ಯಕ್ತಿಯನ್ನು ಸಮಾಧಾನಪಡಿಸಿ ಕೂರಿಸಿದ್ದಾರೆ. ಇದಾದ ಬಳಿಕ ಇಂಡಿಗೋ ವಿಮಾನಯಾನ ಸಂಸ್ಥೆಯು ದೂರು ದಾಖಲಿಸಿದ್ದು, ಹಲ್ಲೆ ನಡೆಸಿದ ಪ್ರಯಾಣಿಕನನ್ನು ಬಂಧಿಸಲಾಗಿದೆ. ಹಲ್ಲೆ ಮಾಡಿದ ಪ್ರಯಾಣಿಕನನ್ನು ಸಾಹಿಲ್‌ ಕಟಾರಿಯಾ ಎಂದು ಗುರುತಿಸಲಾಗಿದೆ. ಈತನು ಅನೂಪ್‌ ಕುಮಾರ್‌ ಎಂಬ ಪೈಲಟ್‌ ಮೇಲೆ ಹಲ್ಲೆ ನಡೆಸಿದ್ದಾನೆ.

ಇದನ್ನೂ ಓದಿ: Air India: ವಿಮಾನದಲ್ಲಿ ‘ವೆಜ್‌’ ಪ್ಯಾಸೆಂಜರ್‌ ಊಟದಲ್ಲಿ ಸಿಕ್ಕ ಮೂಳೆಗಳು; ಮುಂದೇನಾಯ್ತು?

ವಿಮಾನದ ಪೈಲಟ್‌ ಸೇರಿ ಯಾವುದೇ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ನಮ್ಮ ಸಂಸ್ಥೆಯು ಖಂಡಿಸುತ್ತದೆ. ಹಾಗಾಗಿ, ಪೈಲಟ್‌ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ. ದೆಹಲಿಯ ಇಂದಿರಾ ಗಾಂಧಿ ಇಂಟರ್‌ನ್ಯಾಷನಲ್‌ ವಿಮಾನ ನಿಲ್ದಾಣದ ಮೂಲಕ ದೆಹಲಿ ಪೊಲೀಸರಿಗೆ ದೂರು ದಾಖಲಿಸಲಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಾದ ಬಳಿಕ ಆರೋಪಿಯು ಕ್ಷಮೆಯಾಚಿಸಿದ್ದಾನೆ ಎಂದು ತಿಳಿದುಬಂದಿದೆ. ಆದರೂ, ವಿಮಾನಯಾನ ಸಂಸ್ಥೆಯು ಈತನನ್ನು ನೋ ಫ್ಲೈ (ಹಾರಾಟಕ್ಕೆ ಅನುಮತಿ ಇಲ್ಲದವರ ಪಟ್ಟಿ) ಲಿಸ್ಟ್‌ಗೆ ಸೇರಿಸಲು ತೀರ್ಮಾನಿಸಿದೆ ಎನ್ನಲಾಗಿದೆ. ಅಲ್ಲದೆ, ಸೋಮವಾರವೂ ದೆಹಲಿಯಲ್ಲಿ ದಟ್ಟ ಮಂಜು ಕವಿದ ಕಾರಣ 40ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗಿದೆ. ಇನ್ನೂ ಕೆಲವು ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version