ನವದೆಹಲಿ: ಖಾಸಗಿ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ ಕೆಲಸ ಮಾಡುತ್ತಿರುವ ಪೈಲಟ್‌ವೊಬ್ಬರು(IndiGo Pilot), ವಿಮಾನ ಹಾರಾಟ ನಡೆಸುವಾಗ `ಕಿರ್ಪಾನ್’ (Kirpan) ಕೊಂಡೊಯ್ಯಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ (Central Government) ನಿರ್ದೇಶನ ಕೋರಿ ಬಾಂಬೆ ಹೈಕೋರ್ಟ್‌ಗೆ (Bombay High Court) ಅರ್ಜಿ ಸಲ್ಲಿಸಿದ್ದಾರೆ. ಕಿರ್ಪಾನ್ ಎಂಬುದು ಬಾಗಿದ ಸಣ್ಣ ಚಾಕು ಆಗಿದ್ದು, ಕೆಲವೊಮ್ಮೆ ಇದನ್ನು ಧರಿಸಲಾಗುತ್ತದೆ. ಸಿಖ್ ಖಾಲ್ಸಾದ ಐದು ವಿಶಿಷ್ಟ ಚಿಹ್ನೆಗಳಲ್ಲಿ ಕಿರ್ಪಾನ್ ಕೂಡ ಒಂದಾಗಿದೆ.
ಇಂಡಿಗೋವನ್ನು ನಿರ್ವಹಿಸುವ ಇಂಟರ್ ಗ್ಲೋಬ್ ಏವಿಯೇಷನ್ ಸಂಸ್ಥೆಯ ಪೈಲಟ್ ಆಗಿರುವ ಅಂಗದ್ ಸಿಂಗ್ ಅವರು ಹೈಕೋರ್ಟ್‌ನ ನಾಗ್ಪುರ ಪೀಠಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಭಾರತೀಯ ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿದ ಧಾರ್ಮಿಕ ಸ್ವಾತಂತ್ರ್ಯದ ಭಾಗವಾಗಿ ಕಿರ್ಪಾನ್ ಹೊಂದುವ ಹಕ್ಕಿದೆ ಎಂದು ವಾದಿಸಿದ್ದಾರೆ. ನ್ಯಾಯಮೂರ್ತಿಗಳಾದ ನಿತಿನ್ ಸಾಂಬ್ರೆ ಮತ್ತು ಅಭಯ್ ಮಂತ್ರಿ ಅವರ ವಿಭಾಗೀಯ ಪೀಠವು ಸೋಮವಾರ ಕೇಂದ್ರ ಸರ್ಕಾರ ಮತ್ತು ವಿಮಾನಯಾನ ಸಂಸ್ಥೆಗಳಿಗೆ ತಮ್ಮ ಉತ್ತರಗಳನ್ನು ನೀಡುವಂತೆ ನೋಟಿಸ್ ಜಾರಿ ಮಾಡಿದೆ.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು 2024ರ ಜನವರಿ 24ಕ್ಕೆ ಮುಂದೂಡಿದೆ. ಪೈಲಟ್ ಅಂಗದ ಸಿಂಗ್ ಪರ ವಕೀಲ ಸಾಹಿಲ್ ಶ್ಯಾಮ್ ದೇವಾನಿ ಅವರು ನಾಗರಿಕ ವಿಮಾನಯಾನ ಸಚಿವಾಲಯವು ವಿಧಿಸಿರುವ ನಿರ್ಬಂಧಗಳನ್ನು ಮಾರ್ಚ್ 12, 2022 ರಂತೆ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಹೇಳಿದರು. ಯಾಕೆಂದರೆ, ಸರ್ಕಾರವು ಸಿಖ್ ಪ್ರಯಾಣಿಕರಿಗೆ ಅನುಮತಿ ನೀಡುವ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ನಿರ್ದಿಷ್ಟ ಗಾತ್ರದ ಕಿರ್ಪಾನ್ ಅನ್ನು ಒಯ್ಯಲು ಅವಕಾಶವನ್ನು ಕಲ್ಪಿಸಿದೆ ಎಂಬ ಮಾಹಿತಿಯನ್ನು ಕೋರ್ಟ್ ಗಮನಕ್ಕೆ ತಂದರು.
ಆದಾಗ್ಯೂ, ವಿಮಾನ ನಿಲ್ದಾಣಗಳು ಅಥವಾ ವಿಮಾನಯಾನ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು (ಸಿಖ್ ಧರ್ಮಕ್ಕೆ ಸೇರಿದವರು ಸೇರಿದಂತೆ) ಕಿರ್ಪಾನ್ ತಮ್ಮ ಹತ್ತಿರ ಇಟ್ಟುಕೊಳ್ಳಲು ಅನುಮತಿಸುವುದಿಲ್ಲ. ಇದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅಲ್ಲದೆ, ಪ್ರಯಾಣಿಕರಿಗೆ ವಿಮಾನದಲ್ಲಿ ಕಿರ್ಪಾನ್ ಕೊಂಡೊಯ್ಯಲು ಅವಕಾಶ ಮಾಡಿಕೊಡುತ್ತದೆ. ಆದರೆ ವಿಮಾನಯಾನ ಸಿಬ್ಬಂದಿಗೆ ಅದೇ ಹಕ್ಕನ್ನು ನೀಡದಿರುವುದು ಹಿಂದಿನ ತರ್ಕ ಅರ್ಥವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Sikh Leaders | ಶಿಂಧೆ ಬಣಕ್ಕೆ ನೀಡಿದ ಚಿಹ್ನೆಗೆ ಸಿಖ್ ಸಮುದಾಯ ಆಕ್ಷೇಪ, ಕಾರಣ ಏನು?