ನವದೆಹಲಿ: 1984ರಲ್ಲಿ ಅಮೃತಸರದ ಸ್ವರ್ಣಮಂದಿರದಲ್ಲಿದ್ದ ಖಲಿಸ್ತಾನಿ ಉಗ್ರರನ್ನು ಸದೆಬಡಿಯಲು ನಡೆಸಿದ ಆಪರೇಷನ್ ಬ್ಲ್ಯೂ ಸ್ಟಾರ್‌ನಲ್ಲಿ ಹತನಾದ ಉಗ್ರ ಜರ್ನೈಲ್ ಸಿಂಗ್ ಬಿಂದ್ರನ್‌ವಾಲೆಯ ಕುರಿತು ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕುಲದೀಪ್ ಸಿಂಗ್ ಬ್ರಾರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. “ಬಿಂದ್ರನ್‌ವಾಲೆಯು ಉಗ್ರಗಾಮಿಯಾಗಿ ಬೆಳೆಯಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi)” ಅವರೇ ಕಾರಣ” ಎಂದು ಎಎನ್‌ಐ ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ.
“ಯಾರಿಗೂ ಕಾರ್ಯಾಚರಣೆ ಬೇಕಾಗಿರಲಿಲ್ಲ. ಆದರೆ, ಏನು ಮಾಡುವುದು? ರಾಜಕೀಯ ಉದ್ದೇಶಕ್ಕಾಗಿ ಇಂದಿರಾ ಗಾಂಧಿ ಅವರೇ ಬಿಂದ್ರನ್‌ವಾಲೆಯು ದೊಡ್ಡ ಹಂತಕನಾಗಿ ಬೆಳೆಯಲು ಬಿಟ್ಟರು. ಯಾವಾಗ, ಬಿಂದ್ರನ್‌ವಾಲೆಯು ಕಂಟಕ ಎನಿಸತೊಡಗಿದನೋ, ಆತನ ಉಪಟಳ ಹೆಚ್ಚಾಯಿತೋ, ಇಂದಿರಾ ಗಾಂಧಿ ಅವರು ಅನಿವಾರ್ಯವಾಗಿ ಆತನನ್ನು ಮುಗಿಸಲು ಆದೇಶಿಸಿದರು” ಎಂದು ಕೆ.ಎಸ್.ಬ್ರಾರ್ ತಿಳಿಸಿದ್ದಾರೆ.
ಇದನ್ನೂ ಓದಿ: Indira Gandhi killers | ಇಂದಿರಾ ಗಾಂಧಿ ಹಂತಕರ ಪುಣ್ಯತಿಥಿಯಲ್ಲಿ ಅಕಾಲಿ ದಳದ ನಾಯಕ ಬಾದಲ್ ಭಾಗಿ!
“ಪಂಜಾಬ್‌ನಲ್ಲಿ ಬಿಂದ್ರನ್‌ವಾಲೆಯ ಉಪಟಳ ಜಾಸ್ತಿಯಾಯಿತು. 1980-84ರ ಅವಧಿಯಲ್ಲಿ ಪಂಜಾಬ್ ಮೇಲೆ ಆತ ನಿಯಂತ್ರಣ ಸಾಧಿಸಿದ. ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಪ್ರತ್ಯೇಕ ಖಲಿಸ್ತಾನದ ಬೇಡಿಕೆ ಹೆಚ್ಚಾಯಿತು. ಯುವಕರನ್ನು ಆತ ಪ್ರಚೋದಿಸತೊಡಗಿದ. ಇದರಿಂದಾಗಿ, ಇಂದಿರಾ ಗಾಂಧಿಯವರು ಆಪರೇಷನ್ ಬ್ಲ್ಯೂಸ್ಟಾರ್‌ಗೆ ಆದೇಶಿಸಿದರು” ಎಂಬುದಾಗಿ ಮಾಹಿತಿ ನೀಡಿದರು.
ಅಕಾಲಿದಳದ ರಾಜಕೀಯ ಏಳಿಗೆ ಸಹಿಸದ ಇಂದಿರಾ ಗಾಂಧಿ ಅವರು ಸಿಖ್ ಧಾರ್ಮಿಕ ನಾಯಕನಾಗಿದ್ದ ಬಿಂದ್ರನ್‌ವಾಲೆಯನ್ನು ಬೆಳೆಸಿದರು. ಅಕಾಲಿದಳವನ್ನು ಒಡೆಯಲು ಆತನ ಉಪಟಳ ಸಹಿಸಿಕೊಂಡಿದ್ದರು. ಆದರೆ, ಬಿಂದ್ರನ್‌ವಾಲೆಯು ಬಂಡೆದ್ದನು. ಪ್ರತ್ಯೇಕ ಖಲಿಸ್ತಾನದ ಬೇಡಿಕೆ ಮುಂದಿಟ್ಟ. ಸ್ವರ್ಣಮಂದಿರದಲ್ಲಿ ಉಗ್ರರ ನೆಲೆ ಸ್ಥಾಪಿಸಿ, ಖಲಿಸ್ತಾನಿ ಉಗ್ರರ ಪಡೆ ಕಟ್ಟಿದ. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಸಮರ ಸಾರಿದ ಎಂದು ತಿಳಿದುಬಂದಿದೆ. ಈಗ ಬ್ರಾರ್ ಅವರೇ ಈ ಕುರಿತು ಮಾಹಿತಿ ನೀಡಿದ್ದಾರೆ. 1984ರ ಜೂನ್ 1ರಿಂದ ಜೂನ್ 8ರ ಅವಧಿಯಲ್ಲಿ ಆಪರೇಷನ್ ಬ್ಲ್ಯೂಸ್ಟಾರ್ ನಡೆಸಲಾಯಿತು.