ಒಟ್ಟಾವ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ಕುರಿತಂತೆ ಕೆನಡಾದಲ್ಲಿ ಖಲಿಸ್ತಾನಿಗಳು ಸಂಭ್ರಮಾಚರಣೆ ಮಾಡಿದ್ದು, ಕೇಂದ್ರ ಸರ್ಕಾರ ಖಂಡನೆ ವ್ಯಕ್ತಪಡಿಸಿದೆ. ಆಪರೇಷನ್ ಬ್ಲ್ಯೂಸ್ಟಾರ್ ಕೈಗೊಂಡು 39 ವರ್ಷ ತುಂಬುವ ಕೆಲವೇ ದಿನಗಳು ಮೊದಲು ಅಂದರೆ, ಜೂನ್ 4ರಂದು ಖಲಿಸ್ತಾನಿ ಬೆಂಬಲಿಗರು ಒಂಟಾರಿಯೋದ ಗ್ರೇಟರ್ ಟೊರೊಂಟೊ ಪ್ರದೇಶದಲ್ಲಿ ಇಂದಿರಾ ಗಾಂಧಿ (Indira Gandhi) ಹತ್ಯೆ ಕುರಿತು ಸಂಭ್ರಮಾಚರಣೆ ಮಾಡಿದ್ದಾರೆ.
ಇಂದಿರಾ ಗಾಂಧಿ ಮೇಲೆ ಗುಂಡಿನ ದಾಳಿ ನಡೆಸುವ ಸ್ತಬ್ಧಚಿತ್ರದ ಮೆರವಣಿಗೆ, ಅದರ ಸಂಭ್ರಮಾಚರಣೆ ಮಾಡಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗಿವೆ. ಹಾಗಾಗಿ ಘಟನೆ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೆನಡಾದಲ್ಲಿ ಪ್ರತ್ಯೇಕವಾದಿಗಳು, ತೀವ್ರವಾದಿಗಳು ಹಾಗೂ ಹಿಂಸೆಗೆ ಪ್ರಚೋದನೆ ನೀಡುವವರಿಗೆ ಏಕೆ ಜಾಗ ನೀಡಲಾಗಿದೆಯೋ ಗೊತ್ತಿಲ್ಲ. ಇದು ಎರಡೂ ರಾಷ್ಟ್ರಗಳ ಸಂಬಂಧದಿಂದ ಒಳ್ಳೆಯ ದೃಷ್ಟಿಯಲ್ಲ” ಎಂದು ಹೇಳಿದ್ದಾರೆ.
ಜೈಶಂಕರ್ ತಿರುಗೇಟು
#WATCH | EAM Dr S Jaishankar speaks on reports of late PM Indira Gandhi's assassination celebration in Canada; says, "…I think there is a bigger issue involved…Frankly, we are at a loss to understand other than the requirements of vote bank politics why anybody would do… pic.twitter.com/VsNP82T1Fb
— ANI (@ANI) June 8, 2023
ಕ್ರಮಕ್ಕೆ ಆಗ್ರಹಿಸಿದ ಕಾಂಗ್ರೆಸ್
ಇಂದಿರಾ ಗಾಂಧಿ ಹತ್ಯೆಯ ಸಂಭ್ರಮಾಚರಣೆ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಜೈಶಂಕರ್ ಅವರಿಗೆ ಕಾಂಗ್ರೆಸ್ ಆಗ್ರಹಿಸಿದೆ. “ಇಂದಿರಾ ಗಾಂಧಿ ಹತ್ಯೆಯನ್ನು ಸಂಭ್ರಮಾಚರಣೆ ಮಾಡಿರುವುದು ಖಂಡನೀಯ. ಕೇಂದ್ರ ಸರ್ಕಾರ ಇದರ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದು ಯಾರ ಪರ ನಿಲ್ಲುವುದು ಎಂಬುದಕ್ಕಿಂತ ಭಾರತದ ಗೌರವದ ಪ್ರಶ್ನೆಯಾಗಿದೆ. ತೀವ್ರವಾದವನ್ನು ಎಲ್ಲರೂ ಖಂಡಿಸಬೇಕು ಹಾಗೂ ಸರಿಯಾದ ಕ್ರಮ ತೆಗೆದುಕೊಳ್ಳಬೇಕು” ಎಂದು ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Priyanka Gandhi: ಅಜ್ಜಿ ಇಂದಿರಾ ಗಾಂಧಿ ಭೇಟಿ ನೀಡಿ 45 ವರ್ಷಗಳ ಬಳಿಕ ಶೃಂಗೇರಿಗೆ ಬಂದ ಪ್ರಿಯಾಂಕಾ ಗಾಂಧಿ
ಏಕೆ ಸಂಭ್ರಮಾಚರಣೆ?
ಖಲಿಸ್ತಾನಿಗಳು ಪ್ರತ್ಯೇಕವಾದಿಗಳಾಗಿದ್ದು, ಈಗಲೂ ಪ್ರತ್ಯೇಕವಾದವನ್ನು ಪ್ರಚೋದಿಸುತ್ತಿದ್ದಾರೆ. 1984ರಲ್ಲಿ ಪ್ರತ್ಯೇಕವಾದಿ ಜರ್ನೈನ್ ಸಿಂಗ್ ಭಿಂದ್ರನ್‌ವಾಲೆ ಹಾಗೂ ಆತನ ಸಹಚರರು ಅಮೃತಸರದ ಸ್ವರ್ಣಮಂದಿರವನ್ನು ಆವರಿಸಿಕೊಂಡಿದ್ದರು. ಇವರ ವಿರುದ್ಧ ಆಪರೇಷನ್ ಬ್ಲ್ಯೂಸ್ಟಾರ್‌ಗೆ ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಆದೇಶಿಸಿದ್ದರು. ಆಪರೇಷನ್ ಬ್ಲ್ಯೂಸ್ಟಾರ್‌ನ ಸೇಡಿಗಾಗಿ ಇಂದಿರಾ ಗಾಂಧಿ ಅವರನ್ನು ಸಿಖ್ ಬಾಡಿಗಾರ್ಡ್‌ಗಳೇ ಹತ್ಯೆ ಮಾಡಿದ್ದರು. ಇದರ ಹಿನ್ನೆಲೆಯಲ್ಲಿ ಖಲಿಸ್ತಾನಿಗಳು ಇಂದಿರಾ ಗಾಂಧಿ ಹತ್ಯೆಯನ್ನು ಸಂಭ್ರಮಾಚರಿಸಿದ್ದಾರೆ.