1975 ಜೂನ್ 25ರಂದು ತಡರಾತ್ರಿ ಅಲ್ ಇಂಡಿಯಾ ರೇಡಿಯೋದಲ್ಲಿ (all india radio) ಭಾರತದ (india) ಪ್ರಧಾನಿ ಇಂದಿರಾ ಗಾಂಧಿಯವರು (indira gandhi) ರಾಷ್ಟ್ರಪತಿಗಳು ತುರ್ತು ಪರಿಸ್ಥಿತಿಯನ್ನು (Indira Gandhi’s Emergency) ಘೋಷಿಸಿದ್ದಾರೆ ಎಂದು ದೇಶದ ಜನತೆಗೆ ತಿಳಿಸಿದರು. ಇಂದಿರಾ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ಅಕ್ರಮದ ಹಿನ್ನೆಲೆಯಲ್ಲಿ ನ್ಯಾಯಾಲಯ ರದ್ದುಪಡಿಸಿದ ಕೆಲವೇ ದಿನಗಳಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು. ಸಂಸತ್ತಿನ ಕೆಳಮನೆಗೆ ಇಂದಿರಾ ಗಾಂಧಿಯವರ ಆಯ್ಕೆಯನ್ನು ಕೋರ್ಟ್ ಅನೂರ್ಜಿತಗೊಳಿಸಿತು. ಸಂಸತ್ತಿನ ಕಲಾಪದಿಂದ ದೂರವಿರುವಂತೆಯೂ ಇಂದಿರಾ ಗಾಂಧಿಯವರಿಗೆ ಕೋರ್ಟ್ ಸೂಚಿಸಿತು.
21 ತಿಂಗಳುಗಳ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅನೇಕ ನಾಯಕರು ಇಂದಿರಾ ಗಾಂಧಿ ಮತ್ತು ಅವರ ಬೆಂಬಲಿಗರ ವಿರುದ್ಧ ಧ್ವನಿ ಎತ್ತಿದರು. ಅಂತಿಮವಾಗಿ 1977ರ ಮಾರ್ಚ್ ನಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದು ಹಾಕಲಾಯಿತು. ಕಷ್ಟಕರವಾದ ಈ ಅವಧಿಯಲ್ಲಿ ಎಲ್ಲವನ್ನೂ ಎದುರಿಸಿ ಬಲವಾಗಿ ಹೊರಹೊಮ್ಮಿದ 10 ಪ್ರಮುಖ ನಾಯಕರ ಕುರಿತು ಕಿರು ಮಾಹಿತಿ ಇಲ್ಲಿದೆ.
1. ಜಯಪ್ರಕಾಶ್ ನಾರಾಯಣ್
ಲೋಕನಾಯಕ ಅಥವಾ ಜನರ ನಾಯಕ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಜಯಪ್ರಕಾಶ್ ನಾರಾಯಣ್ ಅವರು ಚುನಾವಣಾ ದುಷ್ಕೃತ್ಯಗಳಲ್ಲಿ ಇಂದಿರಾಗಾಂಧಿ ತಪ್ಪಿತಸ್ಥರೆಂದು ಹೈಕೋರ್ಟ್ ತೀರ್ಪು ನೀಡಿದ ಅನಂತರ ರಾಜಕೀಯ ವ್ಯವಸ್ಥೆಯಲ್ಲಿ ಸಂಪೂರ್ಣ ಕ್ರಾಂತಿಗೆ ಕರೆ ನೀಡಿದರು. ಅವರು ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಆದರೆ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟವನ್ನು ಮುನ್ನಡೆಸಿದಾಗ ಜನರಿಂದ ಅಪಾರ ಬೆಂಬಲವನ್ನು ಪಡೆದರು. ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ ನಡೆಸಿದ ಬೃಹತ್ ರ‍್ಯಾಲಿ ಇಂದಿರಾ ಗಾಂಧಿಯವರನ್ನು ಬೆಚ್ಚಿಬೀಳುವಂತೆ ಮಾಡಿತ್ತು.
2. ಮೊರಾರ್ಜಿ ದೇಸಾಯಿ
ತುರ್ತು ಪರಿಸ್ಥಿತಿಯ ಅನಂತರ 1977ರ ಚುನಾವಣೆಯಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಿತು. ದೇಸಾಯಿ ಅವರು ಮುಂದಿನ ಪ್ರಧಾನಮಂತ್ರಿಯಾಗುತ್ತಿದ್ದಂತೆ, ಇಂದಿರಾ ಗಾಂಧಿಯವರು ಹೊರಡಿಸಿದ ಹಲವು ಆದೇಶಗಳನ್ನು ರದ್ದುಗೊಳಿಸಿದರು. ಭವಿಷ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಮತ್ತೊಮ್ಮೆ ಘೋಷಿಸಲು ಕಷ್ಟವಾಗುವಂತೆ ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳನ್ನು ತಂದರು.
3. ಅಟಲ್ ಬಿಹಾರಿ ವಾಜಪೇಯಿ
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಹುತೇಕ ವಿರೋಧ ಪಕ್ಷದ ನಾಯಕರು ಜೈಲು ಪಾಲಾಗಿದ್ದರು. ಅವರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಹಲವಾರು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದರು. ಈ ಸಮಯದಲ್ಲಿ, ಅವರು ತಮ್ಮ ಕವಿತೆಗಳ ಮೂಲಕ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯನ್ನು ಹೇರುವ ನಿರ್ಧಾರವನ್ನು ಟೀಕಿಸಿದರು. ಜನತಾ ಪಕ್ಷದ ಸರ್ಕಾರದಲ್ಲಿ ಅನಂತರ ದೇಶದ ಪ್ರಧಾನಿಯಾದ ವಾಜಪೇಯಿ ಅವರು ಭಾರತದ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದರು.
4. ಎಲ್.ಕೆ. ಅಡ್ವಾಣಿ
ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಎಲ್.ಕೆ. ಅಡ್ವಾಣಿ ಕೂಡ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ್ದಾರೆ. ಆ ಸಮಯದಲ್ಲಿನ ಭಯದ ವಾತಾವರಣವನ್ನು ಉದ್ದೇಶಿಸಿ ಮಾಧ್ಯಮಗಳು ಹೇಗೆ ಕಾರ್ಯನಿರ್ವಹಿಸಿದವು ಎಂದು ಅಡ್ವಾಣಿ ಹೇಳಿರುವುದು ಹೀಗೆ: ಬಾಗಲು ಕೇಳಿದಾಗ ಅವರು ತೆವಳುವುದನ್ನು ಆಯ್ಕೆ ಮಾಡಿದರು ಎಂದು ಅವರು ಕೆಲವು ಮಾಧ್ಯಮಗಳನ್ನು ಟೀಕಿಸಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಡ್ವಾಣಿ ಅವರನ್ನು ಬೆಂಗಳೂರಿನ ಜೈಲಿನಲ್ಲಿ ಇರಿಸಲಾಗಿತ್ತು. ಮುಂದೆ ಅವರು ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಭಾರತದ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
5. ಜಾರ್ಜ್ ಫರ್ನಾಂಡಿಸ್
ಜಾರ್ಜ್ ಫೆರ್ನಾಂಡಿಸ್ ಅವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಂಧನ ತಪ್ಪಿಸಲು ಸ್ಥಳೀಯ ಮೀನುಗಾರ, ಸಿಖ್ ಅಥವಾ ಸಾಧುವಿನಂತೆ ವೇಷ ಧರಿಸಿದ ಕಥೆಗಳು ಎಲ್ಲರಿಗೂ ತಿಳಿದಿವೆ. ಅವರು ಹಲವೆಡೆ ಪ್ರಯಾಣ ಬೆಳೆಸಿ ಇಂದಿರಾ ಗಾಂಧಿಯವರ ಆಡಳಿತದ ವಿರುದ್ಧ ಜನ ಬೆಂಬಲವನ್ನು ಪಡೆದರು. ಅಂತಿಮವಾಗಿ ಅವರನ್ನು ಬಂಧಿಸಲಾಯಿತಾದರೂ ಫರ್ನಾಂಡಿಸ್ ಅನಂತರ ಜೈಲಿನಿಂದಲೇ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು ಬಿಹಾರದ ಮುಜಾಫರ್‌ಪುರ ಕ್ಷೇತ್ರದಲ್ಲಿ ಭಾರಿ ಮತಗಳ ಅಂತರದಿಂದ ಗೆದ್ದರು.
6. ಲಾಲು ಪ್ರಸಾದ್ ಯಾದವ್
ಯುವ ವಯಸ್ಸಿನಲ್ಲೇ ಲಾಲು ಪ್ರಸಾದ್ ಯಾದವ್ ಅವರು ಜೆಪಿ ಚಳವಳಿಯಲ್ಲಿ ಭಾಗವಹಿಸಿದರು. ತುರ್ತು ಪರಿಸ್ಥಿತಿಯ ಅನಂತರದ ಕಾಲದಲ್ಲಿ ಪ್ರಮುಖ ನಾಯಕರಾಗಿ ಹೊರಹೊಮ್ಮಿದರು. ಮುಂದೆ ಅವರು ಬಿಹಾರದ ಮುಖ್ಯಮಂತ್ರಿಯಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದರು. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ ಕಾಲದಲ್ಲಿ ರೈಲ್ವೆ ಸಚಿವರಾಗಿದ್ದರು.
7. ಮುಲಾಯಂ ಸಿಂಗ್ ಯಾದವ್
ಪಕ್ಷದ ಕಾರ್ಯಕರ್ತರು ಮತ್ತು ಅನುಯಾಯಿಗಳಲ್ಲಿ ‘ನೇತಾಜಿ’ ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಮುಲಾಯಂ ಸಿಂಗ್ ಯಾದವ್ ಅವರು ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಜೈಲು ಪಾಲಾಗಿದ್ದರು. ಅನಂತರ, ಅವರು ಉತ್ತರ ಪ್ರದೇಶದ ಪ್ರಮುಖ ನಾಯಕರಲ್ಲಿ ಒಬ್ಬರಾದರು. ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅಕ್ಟೋಬರ್ 2022ರಲ್ಲಿ ಅವರ ನಿಧನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಲಾಯಂ ಸಿಂಗ್ ಯಾದವ್ ಅವರನ್ನು “ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವದ ಪ್ರಮುಖ ಸೈನಿಕ” ಎಂದು ಬಣ್ಣಿಸಿದ್ದರು.
ಇದನ್ನೂ ಓದಿ: Kangana Ranaut: ʻಎಮರ್ಜೆನ್ಸಿʼ ಬಿಡುಗಡೆ ದಿನಾಂಕ ಘೋಷಿಸಿದ ಕಂಗನಾ ರಣಾವತ್
8. ಶರದ್ ಯಾದವ್
ಏಳು ಬಾರಿ ಲೋಕಸಭೆ ಮತ್ತು ನಾಲ್ಕು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದ ಶರದ್ ಯಾದವ್ ಅವರು ಮಾಜಿ ಕೇಂದ್ರ ಸಚಿವರೂ ಆಗಿದ್ದರು. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಘೋಷಣೆಯನ್ನು ವಿರೋಧಿಸಿದ ಪ್ರಮುಖ ನಾಯಕರಲ್ಲಿ ಅವರು ಕೂಡ ಒಬ್ಬರು. ಅವರು ಮೊದಲು 1974ರಲ್ಲಿ ಮಧ್ಯಪ್ರದೇಶದ ಜಬಲ್ಪುರದಿಂದ ಲೋಕಸಭೆಗೆ ಆಯ್ಕೆಯಾದರು. ಯಾದವ್ ಅವರು ಮಂಡಲ್ ಆಯೋಗದ ಶಿಫಾರಸುಗಳ ಅನುಷ್ಠಾನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ.
9. ರಾಮ್ ವಿಲಾಸ್ ಪಾಸ್ವಾನ್
ಬಿಹಾರ ರಾಜಕೀಯದಲ್ಲಿ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ ರಾಮ್ ವಿಲಾಸ್ ಪಾಸ್ವಾನ್, 1975ರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲು ಪಾಲಾದರು. ಎರಡು ವರ್ಷಗಳ ಅನಂತರ 1977ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಪಾಸ್ವಾನ್ ಹಾಜಿಪುರ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿದರು. ಇವರು ಬಿಹಾರ ಮತ್ತು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
10. ರಾಜ್ ನಾರಾಯಣ್
ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ದೊಡ್ಡ ಟೀಕಾಕಾರರಾಗಿದ್ದ ರಾಜ್ ನಾರಾಯಣ್ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಬಂಧಿಸಲ್ಪಟ್ಟು ಜೈಲಿನಲ್ಲಿದ್ದರು. 1971ರ ಚುನಾವಣೆಯ ಸಮಯದಲ್ಲಿ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಲ್ಲಿ ಇಂದಿರಾ ಗಾಂಧಿಯವರ ವಿರುದ್ಧ ಸೋತ ಅನಂತರ, ನಾರಾಯಣ್ ಅವರು ಚುನಾವಣಾ ದುಷ್ಕೃತ್ಯಗಳು ಮತ್ತು ಪ್ರಜಾಪ್ರತಿನಿಧಿ ಕಾಯ್ದೆ, 1951ರ ಉಲ್ಲಂಘನೆಯ ಆರೋಪದ ಮೂಲಕ ಇಂದಿರಾ ಗಾಂಧಿ ಅವರಿಗೆ ನ್ಯಾಯಾಲಯದಲ್ಲಿ ಸವಾಲು ಹಾಕಿದರು. ತುರ್ತು ಪರಿಸ್ಥಿತಿಯ ಅನಂತರ 1977ರ ಚುನಾವಣೆಯಲ್ಲಿ ಅದೇ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಇಂದಿರಾ ಗಾಂಧಿ ಅವರನ್ನು ಸೋಲಿಸಿದರು.