ನವ ದೆಹಲಿ: ಭಾರತ ಮತ್ತು ಅಮೆರಿಕದ ಸೇನೆ ಜಂಟಿಯಾಗಿ ಹಿಮಾಲಯದಲ್ಲಿ ಗಡಿ ನಿಯಂತ್ರಣ ರೇಖೆ (Line of Actual Control) ಸಮೀಪ ನಡೆಸುತ್ತಿರುವ ಸಮರಾಭ್ಯಾಸಕ್ಕೆ ಚೀನಾ ಆಕ್ಷೇಪಿಸಿದೆ.
ಚೀನಾ-ಭಾರತ ಗಡಿಗೆ ಸಮೀಪದಲ್ಲಿ ಅಮೆರಿಕ ಮತ್ತು ಭಾರತದ ಸೇನೆಯ ಜಂಟಿ ಸಮರಾಭ್ಯಾಸದಿಂದ 1993 ಮತ್ತು 1996ರಲ್ಲಿ ಭಾರತ-ಚೀನಾ ನಡುವಣ ಒಪ್ಪಂದವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಚೀನಾದ ವಿದೇಶಾಂಗ ವಕ್ತಾರ ಜಾವೊ ಲಿಜಿಯಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಉತ್ತರಾಖಂಡ್‌ನಲ್ಲಿ ಭಾರತೀಯ ಸೇನೆಯ ಅಸ್ಸಾಂ ರೆಜಿಮೆಂಟ್ ಹಾಗೂ ಅಮೆರಿಕದ ಸೇನಾ ಪಡೆಯ ಯೋಧರು ಜಂಟಿಯಾಗಿ ಯುದ್ಧಾಭ್ಯಾಸವನ್ನು ನಡೆಸುತ್ತಿದ್ದಾರೆ. ಎಲ್‌ಎಸಿಯಿಂದ 100 ಮೀಟರ್ ಅಂತರದಲ್ಲಿ ಈ ಅಭ್ಯಾಸ ನಡೆಯುತ್ತಿದೆ. ಇದಕ್ಕೆ ಚೀನಾ ತಕರಾರು ಮಾಡಿದೆ.
ಚೀನಾ ಆರೋಪಕ್ಕೆ ತಿರುಗೇಟು ನೀಡಿರುವ ಭಾರತ, ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವ ಹಕ್ಕು ಚೀನಾಕ್ಕಿಲ್ಲ ಎಂದಿದೆ.