Site icon Vistara News

Snake bite: ರಕ್ಷಿಸಿದವನ ಪ್ರಾಣಕ್ಕೆ ಎರವಾದ ನಾಗಪ್ಪ; ಹಾವು ಕಡಿದು ಉರಗ ಪ್ರೇಮಿ ಸಾಯುವ ವಿಡಿಯೊ ವೈರಲ್

snake bite

snake bike

ಇಂದೋರ್‌: ಇತ್ತೀಚೆಗಷ್ಟೇ ಶೂ ಒಳಗೆ ಅಡಗಿ ಕುಳಿತ ಹಾವಿನ ಸುದ್ದಿ ಸದ್ದು ಮಾಡಿತ್ತು. ಇದೀಗ ವ್ಯಕ್ತಿಯೊಬ್ಬ ಚಲಿಸುತ್ತಿರುವ ಬೈಕ್‌ನಲ್ಲಿ ನಾಗರಹಾವಿನ ಕಡಿತಕ್ಕೆ(snake bite) ಒಳಗಾಗಿ ಮೃತಪಟ್ಟಿದ್ದು, ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ(social media) ಹರಿದಾಡುತ್ತಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದ್ದು, ಮನೀಶ್‌ ಎನ್ನುವ ವ್ಯಕ್ತಿ ಮೃತಪಟ್ಟಿದ್ದಾನೆ. ಈತ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ದುರಂತ ನಡೆದಿದೆ. ಈತನ ಸ್ನೇಹಿತ ಬೈಕ್‌ ಚಲಾಯಿಸುತ್ತಿದ್ದರೆ ಈತ ಹಿಂದೆ ಕುಳಿತ್ತಿದ್ದ.

ಏನಿದು ಘಟನೆ?

ಮನೀಶ್‌ ನಾಗರಹಾವನ್ನು ಸೆರೆ ಹಿಡಿದಿದ್ದ. ಬಳಿಕ ಅದನ್ನು ಎರಡೂ ಕೈಯಲ್ಲಿ ಹಿಡಿದು ಬೈಕ್‌ ಹಿಂದೆ ಕುಳಿತಿದ್ದ. ಬೈಕ್‌ ಸಂಚರಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಮನೀಶ್‌ನ ಹಿಡಿತ ಸಡಿಲವಾಗಿತ್ತು. ಆ ಸಂದರ್ಭದಲ್ಲಿ ಹಾವು ಅವನ ಕೈಗೆ ಕಚ್ಚಿತ್ತು. ಕೂಡಲೇ ಗೆಳೆಯ ಬೈಕ್‌ ಅನ್ನು ನಿಲ್ಲಿಸಿದ್ದ. ಮನೀಶ್‌ ಬೈಕ್‌ನಿಂದ ಕೆಳಗೆ ಇಳಿದು ಕುಸಿದು ಬೀಳುತ್ತಿರುವ ದೃಶ್ಯ ಸಿಸಿ ಟವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಮನೀಶ್‌ ಹಾವು ಹಿಡಿಯುವುದರಲ್ಲಿ ಪರಿಣಿತ. ಹೀಗಾಗಿ  ನಾಗರಹಾವೊಂದು ಹಿಡಿದಿದ್ದ. ಜನ ಸಂಚಾರ ಸ್ಥಳದಿಂದ ದೂರ ಸಾಗಿಸಲು ಬರೀ ಕೈಯಲ್ಲೇ ಹಿಡಿದು ತೆರಳುತ್ತಿರುವಾಗ ಈ ಘಟನೆ ನಡೆದಿದೆ. ಈಗಾಗಲೇ ಈ ವಿಡಿಯೊವನ್ನು 6 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೊ ನೋಡಿ ಹಲವರು ಕಮೆಂಟ್‌ ಮೂಲಕ ಶಾಕ್‌ ವ್ಯಕ್ತಪಡಿಸಿದ್ದಾರೆ.

ಇದೇ ರೀತಿಯ ಘಟನೆ ತಮಿಳುನಾಡಿನ ವೆಲ್ಲೂರ್‌ನಲ್ಲಿಯೂ ನಡೆದಿದೆ. ಗುಡಿಯಾಟ್ಟಮ್‌ ನಗರದ ಸಮೀಪದ ಹಳ್ಳಿಯೊಂದರಲ್ಲಿ 6 ವರ್ಷದ ಬಾಲಕ ಹಾವು ಕಡಿತಕ್ಕೊಳಗಾಗಿ ಅಸುನೀಗಿದ್ದಾನೆ. ಷಷ್ಮುಗವೇಲ್‌ ಮೃತ ಬಾಲಕ. ಸ್ಥಳೀಯ ಖಾಸಗಿ ಶಾಲೆಯೊಂದರ ಒಂದನೇ ತರಗತಿಯಲ್ಲಿ ಓದುತ್ತಿದ್ದ ಆತನಿಗೆ ಸಂಜೆ ಹಾವು ಕಡಿದಿತ್ತು. ಸಂಜೆ 6 ಗಂಟೆ ಸುಮಾರಿಗೆ ಷಣ್ಮುಗವೇಲ್‌ ಕರಿಬೇವು ಸೊಪ್ಪು ತರಲು ಹೋಗಿದ್ದಾಗ ಈ ಅವಘಡ ನಡೆದಿದೆ. ಬಾಲಕ ತುಂಬಾ ಹೊತ್ತಾದರೂ ಬಾರದಿರುವುದನ್ನು ಗಮನಿಸಿದ ಮನೆಯವರು ಹುಡುಕಿಕೊಂಡು ಹೋದಾಗ ಇದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Viral Video: ಗಣೇಶ ಪೆಂಡಾಲ್​​ನಲ್ಲಿ ಡ್ಯಾನ್ಸ್‌ ಮಾಡುತ್ತಿದ್ದಂತೆ ಹಾರಿ ಹೋಯ್ತು ಯುವಕನ ಪ್ರಾಣ

ಇಂದೋರ್‌ ಮತ್ತು ಗುಡಿಯಾಟ್ಟಮ್‌ ಹಾವು ಕಡಿತದ ಘಟನೆಗಳಲ್ಲಿ ಸುತ್ತಮುತ್ತಲಿನ ಜನರು ತಕ್ಷಣ ಕಾರ್ಯ ಪ್ರವೃತ್ತರಾದರೂ ಇಬ್ಬರ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಸದ್ಯ ಎರಡೂ ಘಟನೆಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶೂ ಒಳಗೆ ಹಾವು

ಹಾವೊಂದು ಶೂ ಒಳಗೆ ಅಡಗಿ ಕುಳಿತುಕೊಳ್ಳುವ ದೃಶ್ಯ ಇತ್ತೀಚೆಗೆ ಭಾರೀ ವೈರಲ್‌ ಆಗಿತ್ತು. ವ್ಯಕ್ತಿಯೊಬ್ಬರು ಶೂ ಎತ್ತಿ ಕ್ಯಾಮೆರಾದ ಹತ್ತಿರ ತಂದು ಹಾವು ಹೇಗೆ ಅದರೊಳಗೆ ಅಡಗಿ ಕೂತಿದೆ ಎನ್ನುವುದನ್ನು ತೋರಿಸುವ ವಿಡಿಯೊ ಅದಾಗಿತ್ತು. ಇದನ್ನು ನೋಡಿ ನೆಟ್ಟಿಗರು ಬಿಚ್ಚಿಬಿದ್ದಿದ್ದರು. ಇನ್ನು ಮುಂದೆ ಶೂ ಧರಿಸುವಾಗ ಎರಡೆರಡು ಬಾರಿ ಪರಿಶೀಲಿಸಿ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದರು. ಆ ಘಟನೆ ಮಾಸುವ ಮುನ್ನವೇ ಈ ದುರಂತ ನಡೆದಿದೆ.

Exit mobile version