Site icon Vistara News

ಶೀನಾ ಬೋರಾ ಕೊಲೆ ಕೇಸ್‌: ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಗೆ ಜಾಮೀನು

Indrani Mukherjea

ದೇಶವನ್ನೇ ಬೆಚ್ಚಿಬೀಳಿಸಿದ್ದ ಶೀನಾ ಬೋರಾ ಕೊಲೆ ಕೇಸ್‌ ಪ್ರಮುಖ ಆರೋಪಿ, ಆಕೆಯ ತಾಯಿ ಇಂದ್ರಾಣಿ ಮುಖರ್ಜಿಗೆ ಇಂದು ಸುಪ್ರೀಂಕೋರ್ಟ್‌ ಜಾಮೀನು ನೀಡಿದೆ. ʼಆರೂವರೆ ವರ್ಷಗಳಿಂದ ಇಂದ್ರಾಣಿ ಮುಖರ್ಜಿ ಜೈಲಿನಲ್ಲಿದ್ದಾರೆ. ಇಂದ್ರಾಣಿ ಜೈಲಿನಲ್ಲಿ ಕಳೆದ ಸಮಯ ಬಹಳ ದೀರ್ಘವಾಯಿತು. ಹೀಗಾಗಿ ಅವರಿಗೆ ನಾವಿಂದು ಜಾಮೀನು ಮಂಜೂರು ಮಾಡುತ್ತಿದ್ದೇವೆʼ ಎಂದು ಸುಪ್ರೀಂಕೋರ್ಟ್‌ ಹೇಳಿದೆ. 2012ರಲ್ಲಿ ನಡೆದ ಶೀನಾ ಬೋರಾ ಹತ್ಯೆ ಪ್ರಕರಣದಡಿ 2015ರಲ್ಲಿ ಇಂದ್ರಾಣಿ ಮುಖರ್ಜಿ ಬಂಧಿತರಾಗಿದ್ದಾರೆ. ಅಂದಿನಿಂದಲೂ ಜೈಲಿನಲ್ಲಿಯೇ ಇರುವ ಮಾಜಿ ಮಾಧ್ಯಮ ಕಾರ್ಯನಿರ್ವಾಹಕ ಅಧಿಕಾರಿ ಇಂದ್ರಾಣಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ, ಇಷ್ಟು ವರ್ಷ ಸಿಕ್ಕಿರಲಿಲ್ಲ. ಇದೀಗ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ನಾಗೇಶ್ವರ್‌ ರಾವ್‌ ನೇತೃತ್ವದ ಪೀಠ ಇಂದ್ರಾಣಿಗೆ ಜಾಮೀನು ನೀಡಿದೆ. ಈ ಕೇಸ್‌ ಬಹುತೇಕವಾಗಿ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ನಿಂತಿದೆ. ಹಾಗೇ, ಇದರ ವಿಚಾರಣೆ ಸದ್ಯಕ್ಕಂತೂ ಮುಗಿಯುವ ಯಾವುದೇ ಲಕ್ಷಣವೂ ಇಲ್ಲ. ಹೀಗಾಗಿ ಜಾಮೀನು ನೀಡುತ್ತಿರುವುದಾಗಿ ತಿಳಿಸಿದೆ.

ಈ ಹತ್ಯೆ ಪ್ರಕರಣದಲ್ಲಿ ಒಟ್ಟು ಎಷ್ಟು ಸಾಕ್ಷಿಗಳಿದ್ದಾರೆ ಎಂದು ನ್ಯಾಯಮೂರ್ತಿಗಳು ರೋಹ್ಟಗಿ ಅವರನ್ನು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ವಕೀಲರು, ವಿಚಾರಣೆಗೆ ಒಳಪಡಬೇಕಾದ ಸಾಕ್ಷಿಗಳೇ ಸುಮಾರು 185 ಇವೆ. ಕಳೆದ ಒಂದೂವರೆ ವರ್ಷದಿಂದ ಯಾರೊಬ್ಬರನ್ನೂ ವಿಚಾರಣೆ ಮಾಡಿಲ್ಲ. ಇನ್ನು ಇಂದ್ರಾಣಿ ಪತಿ ಪೀಟರ್‌ ಮುಖರ್ಜಿ (2017ರಲ್ಲಿ ಇವರಿಬ್ಬರೂ ಬೇರೆಯಾಗಿದ್ದಾರೆ) ಈಗಾಗಲೇ ಜಾಮೀನು ಸಿಕ್ಕಿದೆ. ಈಕೆಯ ಆರೋಗ್ಯವೂ ಹಾಳಾಗಿದೆ. ಮಾನಸಿಕವಾಗಿಯೂ ಕುಗ್ಗಿದ್ದಾರೆ. ಇನ್ನೂ 10ವರ್ಷಗಳಾದರೂ ಕೇಸ್‌ಗೊಂದು ಅಂತ್ಯ ಸಿಗುವಂತೆ ಕಾಣುತ್ತಿಲ್ಲ ಎಂದು ಹೇಳಿದ್ದರು.

2012ರಲ್ಲಿ ಶೀನಾ ಬೋರಾ ಮೃತದೇಹ ಜಮ್ಮು-ಕಾಶ್ಮೀರದ ದಾಲ್‌ ಲೇಕ್‌ ಬಳಿ ಪತ್ತೆಯಾಗಿತ್ತು. ಈ ಕೇಸ್‌ ಇತ್ತೀಚೆಗೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು ಜೈಲಿನಲ್ಲಿದ್ದ ಇಂದ್ರಾಣಿ ಮುಖರ್ಜಿ ಸಿಬಿಐಗೆ ಬರೆದ ಪತ್ರದಿಂದ. ಶೀನಾ ಬೋರಾ ಇನ್ನೂ ಬದುಕಿದ್ದಾಳೆ. ಈಕೆ ಜಮ್ಮು-ಕಾಶ್ಮೀರದಲ್ಲಿ ಇರುವುದಾಗಿ ನನ್ನೊಂದಿಗೆ ಜೈಲಿನಲ್ಲಿರುವ ಸಹಕೈದಿಯೊಬ್ಬರು ತಿಳಿಸಿದ್ದಾರೆ. ಇದನ್ನು ಪರಿಶೀಲಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಆದರೆ ಸಿಬಿಐ ಈ ಆಯಾಮದ ತನಿಖೆ ಕೈಗೆತ್ತಿಕೊಳ್ಳಲು ನಿರಾಕರಿಸಿತ್ತು. ಕೋರ್ಟ್‌ನಿಂದ ಸೂಚನೆ ಬಂದ ವಿನಃ ನಾವು ಮುಂದುವರಿಯುವುದಿಲ್ಲ ಎಂದು ಹೇಳಿತ್ತು.2022ರ ಜನವರಿಯಲ್ಲಿ ಇಂದ್ರಾಣಿ ಮುಖರ್ಜಿ ಜಾಮೀನಿಗೆ ಮನವಿ ಮಾಡಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. 2021ರ ನವೆಂಬರ್‌ ತಿಂಗಳಲ್ಲಿ ಬಾಂಬೆ ಹೈಕೋರ್ಟ್‌ ಇಂದ್ರಾಣಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಅವರು ಸರ್ವೋಚ್ಛ ನ್ಯಾಯಾಲಯಕ್ಕೆ ಸ್ಪೆಶಲ್‌ ಲೀವ್‌ ಪಿಟಿಶನ್‌ ಸಲ್ಲಿಸಿದ್ದರು.

ಇದನ್ನೂ ಓದಿ | ಕುಡುಕನ ಕಾಟ: ಬೆಂಗಳೂರಿಗೆ ಬರುತ್ತಿದ್ದ ವಿಮಾನವನ್ನು ಮುಂಬೈಲಿ ಇಳಿಸಿದ ಪೈಲಟ್‌

ಅಂದಹಾಗೇ, ಈ ಶೀನಾ ಬೋರಾ ಪ್ರಕರಣ ತುಂಬ ಸಂಕೀರ್ಣವಾದ ಕೇಸ್‌ ಆಗಿದೆ. ಇಂದ್ರಾಣಿ ಮುಖರ್ಜಿಗೆ ಮೊದಲ ಪತಿ ಸಿದ್ಧಾರ್ಥ್‌ ದಾಸ್‌ರಿಂದ ಹುಟ್ಟಿದ ಮಗಳು ಈ ಶೀನಾ ಬೋರಾ. ಬಳಿಕ ಇಂದ್ರಾಣಿ ಸಿದ್ಧಾರ್ಥ್‌ರನ್ನು ಬಿಟ್ಟು, 1993ರಲ್ಲಿ ಸಂಜೀವ್‌ ಖನ್ನಾ ಎಂಬಾತನನ್ನು ಮದುವೆಯಾಗುತ್ತಾರೆ. ಬಳಿಕ ಆತನನ್ನೂ ಬಿಟ್ಟು 2002ನೇ ಇಸ್ವಿಯಲ್ಲಿ ಪೀಟರ್‌ ಮುಖರ್ಜಿಯವರೊಂದಿಗೆ ವಿವಾಹವಾಗುತ್ತಾರೆ. ಈ ಪೀಟರ್‌ ಮುಖರ್ಜಿಗೆ ಮೊದಲ ಪತ್ನಿಯಿಂದ ಹುಟ್ಟಿದ ಮಗ ರಾಹುಲ್‌ ಮುಖರ್ಜಿ ಮತ್ತು ಶೀನಾ ಬೋರಾ ಪ್ರೀತಿಸಲು ಶುರು ಮಾಡುತ್ತಾರೆ. ಇಂದ್ರಾಣಿ ಇದನ್ನು ಬಲವಾಗಿ ವಿರೋಧಿಸುತ್ತಾಳೆ. ಈ ಮಧ್ಯೆ ಶೀನಾ ತನ್ನ ಮಗಳು ಎಂಬ ವಿಚಾರವನ್ನು ಇಂದ್ರಾಣಿ ಮುಚ್ಚಿಟ್ಟು, ತನ್ನ ತಂಗಿ ಎಂದೇ ನಂಬಿಸಿದ್ದರು. ಇದೇ ವಿಚಾರವಾಗಿ ಶೀನಾ, ಇಂದ್ರಾಣಿಗೆ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಳು. ಒಟ್ಟಾರೆ ಎಲ್ಲದಕ್ಕೂ ಅಂತ್ಯವೆಂಬಂತೆ ಶೀನಾ ಬೋರಾ ಹತ್ಯೆಯಾಗಿತ್ತು. ಈ ಕೊಲೆಯನ್ನು ಇಂದ್ರಾಣಿ ತಮ್ಮ ಎರಡನೇ ಪತಿ ಸಂಜಯ್‌ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್‌ವರ್‌ ರೈ ಸಹಾಯದಿಂದ ಮಾಡಿದ್ದಾರೆ ಎಂಬ ಆರೋಪದಡಿ 2015ರಲ್ಲಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ | ಮುಂಬೈನಲ್ಲಿ ಕೊರೋನಾ ಹೊಸ ರೂಪಾಂತರಿ ಪತ್ತೆ!: ಮಹಿಳೆಯಲ್ಲಿ ಕಾಣಿಸಿಕೊಂಡ XE

Exit mobile version