Site icon Vistara News

Naveen Jindal: ಬಿಜೆಪಿ ಸೇರಿದ ಕೆಲ ಹೊತ್ತಲ್ಲೇ ನವೀನ್‌ ಜಿಂದಾಲ್‌, ಗಂಗೋಪಾಧ್ಯಾಯಗೆ ಟಿಕೆಟ್

Naveen Jindal

Industrialist Naveen Jindal Joins BJP Ahead Of Lok Sabha Election 2024

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ದಿನಗಳು ಬಾಕಿ ಇದ್ದು, ಬಿಜೆಪಿಯು ಐದನೇ ಅಭ್ಯರ್ಥಿಗಳ ಪಟ್ಟಿಯನ್ನು ಕೂಡ ಬಿಡುಗಡೆ (BJP Candidates) ಮಾಡಿದೆ. ನಿರೀಕ್ಷೆಯಂತೆಯೇ ಕೆಲವು ಅಚ್ಚರಿಯ ಘೋಷಣೆಗಳನ್ನು ಬಿಜೆಪಿ ಮಾಡಿದೆ. ಅದರಲ್ಲೂ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಕೆಲವೇ ಗಂಟೆಗಳಲ್ಲಿ ಉದ್ಯಮಿ ನವೀನ್‌ ಜಿಂದಾಲ್‌ (Naveen Jindal) ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಅಷ್ಟೇ ಅಲ್ಲ ಕೆಲ ದಿನಗಳ ಹಿಂದಷ್ಟೇ ಕೋಲ್ಕೊತಾ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆ ತೊರೆದು, ಬಿಜೆಪಿ ಸೇರಿದ ಅಭಿಜಿತ್‌ ಗಂಗೋಪಾಧ್ಯಾಯ ಅವರಿಗೂ ಬಿಜೆಪಿ ಟಿಕೆಟ್‌ ನೀಡಿದೆ.

ಹೌದು, ಕಾಂಗ್ರೆಸ್‌ ನಾಯಕ, ಉದ್ಯಮಿ ನವೀನ್‌ ಜಿಂದಾಲ್‌ ಅವರು ಭಾನುವಾರ (ಮಾರ್ಚ್‌ 24) ಸಂಜೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿದರು. ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್‌ ತಾವ್ಡೆ (Vinod Tawde) ಅವರ ನೇತೃತ್ವದಲ್ಲಿ ನವೀನ್‌ ಜಿಂದಾಲ್‌ ಅವರು ಬಿಜೆಪಿ ಸೇರ್ಪಡೆಯಾದರು. ಇದಾದ ಒಂದೆರಡು ಗಂಟೆಯಲ್ಲಿಯೇ ಅವರಿಗೆ ಬಿಜೆಪಿಯು ಹರಿಯಾಣದ ಕುರುಕ್ಷೇತ್ರದಿಂದ ಟಿಕೆಟ್‌ ನೀಡಿದೆ.

ಜಿಂದಾಲ್‌ ಸ್ಟೀಲ್‌ ಹಾಗೂ ಪವರ್‌ ಕಂಪನಿಯ ಚೇರ್ಮನ್‌ ಆಗಿರುವ ನವೀನ್‌ ಜಿಂದಾಲ್‌ ಅವರು ಇದೇ ಕುರುಕ್ಷೇತ್ರದಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. “ನರೇಂದ್ರ ಮೋದಿ ಅವರ ನಾಯಕತ್ವದ, ದೇಶಕ್ಕೆ ನಾನೂ ಕೊಡುಗೆ ನೀಡಬೇಕು ಎಂಬ ಮನೋಭಾವದಿಂದ ಬಿಜೆಪಿ ಸೇರ್ಪಡೆಯಾಗಿದ್ದೇನೆ” ಎಂದು ನವೀನ್‌ ಜಿಂದಾಲ್‌ ಅವರು ಹೇಳಿದರು.

ಕೆಲ ದಿನಗಳ ಹಿಂದಷ್ಟೇ ಕೋಲ್ಕೊತಾ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಯಾಗಿದ್ದ ನ್ಯಾ. ಅಭಿಜಿತ್‌ ಗಂಗೋಪಾಧ್ಯಾಯ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಅಭಿಜಿತ್‌ ಗಂಗೋಪಾಧ್ಯಾಯ ಅವರು ಪಶ್ಚಿಮ ಬಂಗಾಳದ ತಮ್ಲುಕ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ, ಇಬ್ಬರು ಕೇಂದ್ರ ಸಚಿವರಾದ ಅಶ್ವಿನಿ ಕುಮಾರ್‌ ಚೌಬೆ, ವಿ.ಕೆ. ಸಿಂಗ್‌ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿದೆ.

ಅಭಿಜಿತ್‌ ಗಂಗೋಪಾಧ್ಯಾಯ

ಇದನ್ನೂ ಓದಿ: Lok Sabha Election 2024: ಸಿಎಂ ಸಿದ್ದರಾಮಯ್ಯ, ಜಯಪ್ರಕಾಶ್‌ ಹೆಗ್ಡೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಸಂಬಲ್ಪುರ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದ ಪಕ್ಷದ ವಕ್ತಾರ ಸಂಬಿತ್‌ ಪಾತ್ರಾ ಅವರಿಗೆ ಒಡಿಶಾದ ಪುರಿ ಕ್ಷೇತ್ರದಿಂದಲೇ ಮತ್ತೆ ಕಣಕ್ಕಿಳಿಸಲಾಗಿದೆ. ಜಾರ್ಖಂಡ್‌ ಮುಕ್ತಿ ಮೋರ್ಚಾ ಮುಖ್ಯಸ್ಥ ಶಿಬು ಸೊರೇನ್‌ ಅವರ ಸೊಸೆ ಸೀತಾ ಸೊರೇನ್‌ ಅವರಿಗೆ ಜಾರ್ಖಂಡ್‌ನ ಡುಮ್ಕಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version