Site icon Vistara News

Terrorists Killed: ಕಾಶ್ಮೀರದಲ್ಲಿ ಒಳನುಸುಳಲು ಯತ್ನ; ಇಬ್ಬರು ಉಗ್ರರನ್ನು ನರಕಕ್ಕೆ ಕಳುಹಿಸಿದ ಯೋಧರು

Kashmir Encounter

ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಛ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (LoC) ಬಳಿ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರನ್ನು ಯೋಧರು (Terrorists Killed) ಹತ್ಯೆಗೈದಿದ್ದಾರೆ. ಸೋಮವಾರ (ಆಗಸ್ಟ್‌ 7) ಬೆಳಗಿನ ಜಾವ 2 ಗಂಟೆ ಸುಮಾರಿಗೆ ಪೂಂಛ್‌ನ ದೆಗ್ವಾರ್‌ ಟೆರ್ವಾನ್‌ ಪ್ರದೇಶದಲ್ಲಿ ಉಗ್ರರು ಒಳನುಸುಳಲು ಯತ್ನಿಸಿದ್ದು, ಆಗ ಯೋಧರು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಹತ್ಯೆಗೈದಿದ್ದಾರೆ.

“ದೆಗ್ವಾರ್‌ ಟೆರ್ವಾನ್‌ನಲ್ಲಿ ರಾತ್ರೋರಾತ್ರಿ ಉಗ್ರರು ಗಡಿ ನಿಯಂತ್ರಣ ರೇಖೆ ದಾಟಿ ಭಾರತವನ್ನು ಪ್ರವೇಶಿಸಲು ಯತ್ನಿಸಿದ್ದಾರೆ. ಇದನ್ನು ತಿಳಿದು ಯೋಧರು ಕಾರ್ಯಾಚರಣೆ ನಡೆಸಿದ್ದಾರೆ. ಇದೇ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಮುನ್ನಡೆ ಸಾಧಿಸಿದ ಯೋಧರು ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ. ಪ್ರದೇಶದ ಸುತ್ತಲೂ ಯೋಧರು ಸುತ್ತುವರಿದಿದ್ದು, ಕಾರ್ಯಾಚರಣೆ ಮುಂದುವರಿಸಿದ್ದಾರೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರೂ ಉಗ್ರರು ಯಾವ ಉಗ್ರ ಸಂಘಟನೆಗೆ ಸೇರಿದವರು ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಳೆದ 24 ಗಂಟೆಯಲ್ಲಿ ಉಗ್ರರು ಎರಡು ಬಾರಿ ಗಡಿ ರೇಖೆ ದಾಟಿ ಬರಲು ಯತ್ನಿಸಿದ್ದಾರೆ. ಭಾನುವಾರವೂ (ಆಗಸ್ಟ್‌ 7) ಕುಪ್ವಾರ ಪ್ರದೇಶದಲ್ಲಿ ಗಡಿ ದಾಟಲು ಯತ್ನಿಸಿದ್ದ ಒಬ್ಬ ಉಗ್ರನನ್ನು ಯೋಧರು ಹೊಡೆದುರುಳಿಸಿದ್ದರು. ಈಗ ಮತ್ತೊಮ್ಮೆ ಉಗ್ರರ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ.

ಇದನ್ನೂ ಓದಿ: Kulgam Encounter: ಕಾಶ್ಮೀರದಲ್ಲಿ ಎನ್‌ಕೌಂಟರ್ ವೇಳೆ ಮೂವರು ಯೋಧರು ಹುತಾತ್ಮ;‌ ಉಗ್ರರಿಗಾಗಿ ತೀವ್ರ ಶೋಧ

ಆಗಸ್ಟ್‌ 5ರಂದು ಕುಲ್ಗಾಮ್‌ ಜಿಲ್ಲೆಯಲ್ಲಿ ಉಗ್ರರ ಗುಂಡಿಗೆ ಮೂವರು ಯೋಧರು ಹುತಾತ್ಮರಾಗಿದ್ದರು. ಉಗ್ರರು ಅಡಗಿರುವ ಕುರಿತು ಮಾಹಿತಿ ಲಭ್ಯವಾಗುತ್ತಲೇ ಶುಕ್ರವಾರ (ಜುಲೈ 4) ಸಂಜೆಯಿಂದಲೇ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಆರಂಭಿಸಿತ್ತು. ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದು, ತಡರಾತ್ರಿವರೆಗೆ ಶೋಧ ನಡೆದಿತ್ತು. ಬೆಳಗಿನ ಜಾವ ಸೇನೆ ಹಾಗೂ ಉಗ್ರರ ಮಧ್ಯೆ ಗುಂಡಿನ ಚಕಮಕಿ ಆರಂಭವಾಗಿ ಮೂವರು ಯೋಧರು ಹುತಾತ್ಮರಾಗಿದ್ದರು.

Exit mobile version