ನವ ದೆಹಲಿ: ದೀಪಾವಳಿ ಸಮಯದಲ್ಲೇ ಬ್ರಿಟನ್ನಲ್ಲೊಂದು ಮಹತ್ವದ ಬದಲಾವಣೆಯಾಗಿದೆ. ಭಾರತ ಮೂಲದ ರಿಷಿ ಸುನಕ್ ಯುಕೆಯ ಪ್ರಧಾನಿ ಹುದ್ದೆಗೆ ಏರಿದ್ದಾರೆ. ಬ್ರಿಟನ್ ಪ್ರಧಾನಿಯಾದ ಮೊದಲ ಅನಿವಾಸಿ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ ಸೇರಿ, ಭಾರತದ ಅನೇಕ ರಾಜಕೀಯ ನಾಯಕರು, ಗಣ್ಯರು ಸುನಕ್ಗೆ ಶುಭಾಶಯ ತಿಳಿಸಿದ್ದಾರೆ.
ಈ ಮಧ್ಯೆ ರಿಷಿ ಸುನಕ್ಗೆ ಅವರ ಮಾವ (ಪತ್ನಿಯ ತಂದೆ), ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅಭಿನಂದನೆ ಸಲ್ಲಿಸಿದ್ದು, ‘ರಿಷಿಗೆ ಶುಭ ಹಾರೈಕೆ. ಅವರ ಯಶಸ್ಸು, ಸಾಧನೆ ಬಗ್ಗೆ ನಮಗೆ ತುಂಬ ಹೆಮ್ಮೆಯಾಗುತ್ತದೆ. ಬ್ರಿಟನ್ ಜನರಿಗಾಗಿ ಅವರು ಅತ್ಯುತ್ತಮ ಆಡಳಿತ ನೀಡುತ್ತಾರೆ ಎಂಬ ಭರವಸೆ ನಮಗೆ ಇದೆ’ ಎಂದು ನಾರಾಯಣಮೂರ್ತಿ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ. ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ನಾರಾಯಣಮೂರ್ತಿಯವರ ಮೊದಲ ಪ್ರತಿಕ್ರಿಯೆ ಇದು.
ಈಗೆರಡು ತಿಂಗಳ ಹಿಂದೆ ಬೋರಿಸ್ ಜಾನ್ಸನ್ ಅವರು ಯುಕೆ ಪ್ರಧಾನಿ ಸ್ಥಾನದಿಂದ ಕೆಳಗಿಳಿದಾಗ ರಿಷಿ ಸುನಕ್ ಅವರೇ ಅಲ್ಲಿನ ಪ್ರಧಾನಿಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅದೇ ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರುಸ್ ಅವರು ಹುದ್ದೆಗೇರಿದ್ದರು. ಪ್ರಧಾನಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ರಿಷಿ ಸುನಕ್ ಅವರು ಲಿಜ್ ಟ್ರುಸ್ಗಿಂತ 20 ಸಾವಿರ ಕಡಿಮೆ ಮತ ಪಡೆದು ಸೋತಿದ್ದರು. ಆದರೆ ಲಿಜ್ ಟ್ರುಸ್ ಪ್ರಧಾನಿಯಾದ ಮೇಲೆ ಬ್ರಿಟನ್ ಆರ್ಥಿಕತೆ ಮತ್ತಷ್ಟು ಕುಸಿದಿತ್ತು. ಅವರ ವಿರುದ್ಧ ಪಕ್ಷದ ಒಳಗೇ ಬಂಡಾಯ ಹೆಚ್ಚಾಗಿತ್ತು. ಹೀಗಾಗಿ ಟ್ರುಸ್ ಅಧಿಕಾರ ಕಳೆದುಕೊಂಡರು. ದೀಪಾವಳಿಯಂದೇ ರಿಷಿ ಸುನಕ್ಗೆ ಅತ್ಯಂತ ಮಹತ್ವದ ಹುದ್ದೆ ದಕ್ಕಿದೆ.
ರಿಷಿ ಸುನಕ್ಗೆ 42 ವರ್ಷ. ಇವರು ಆಕ್ಸ್ಫರ್ಡ್ ಮತ್ತು ಸ್ಟ್ಯಾಂಡ್ಫೋರ್ಡ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ. ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿಯನ್ನು 2009ರಲ್ಲಿ ಮದುವೆಯಾಗಿದ್ದಾರೆ. ಇವರಿಗೆ ಅನುಷ್ಕಾ ಮತ್ತು ಕೃಷ್ಣಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಇದನ್ನೂ ಓದಿ: Rishi Sunak | ರಿಷಿ ಸುನಕ್ ಎದುರು ಬೆಟ್ಟದಷ್ಟು ಸವಾಲು, ಇವುಗಳನ್ನು ಬಗೆಹರಿಸಬೇಕು ಮೊದಲು