Site icon Vistara News

INS Mahendragiri: ಭಾರತೀಯ ಯುದ್ಧನೌಕೆ ಮಹೇಂದ್ರಗಿರಿ ಉದ್ಘಾಟನೆ, ಏನೇನಿದೆ?

INS mahendragiri

ಮುಂಬಯಿ: ಭಾರತದ ನೂತನ ಹಾಗೂ 7ನೇ ಯುದ್ಧ ನೌಕೆ ʼಮಹೇಂದ್ರಗಿರಿʼ (INS Mahendragiri) ಇಂದು ಸಾಗರಕ್ಕೆ ಇಳಿದಿದೆ. ಮಳಗಾಂವ್‌ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (ಎಮ್‌ಡಿಎಲ್) ಅಭಿವೃದ್ಧಿಪಡಿಸಿದ ಭಾರತೀಯ ನೌಕಾಪಡೆಯ (Indian Navy) ಈ ಯುದ್ಧನೌಕೆಯನ್ನು (stealth frigate) ಉಪರಾಷ್ಟ್ರಪತಿ (Vice president) ಜಗದೀಪ್ ಧನಕರ್ (Jagdeep Dhankhar) ಉದ್ಘಾಟನೆ ಮಾಡಿದರು.

ʼಮಹೇಂದ್ರಗಿರಿʼ ಎಂಬುದು ಒಡಿಶಾದ ಪೂರ್ವ ಘಟ್ಟಗಳ ಪರ್ವತ ಶಿಖರದ ಹೆಸರಾಗಿದೆ. ಈ ನೌಕೆಯು, ಪ್ರಾಜೆಕ್ಟ್ 17A ಸ್ಟೆಲ್ತ್‌ ಫ್ರಿಗೇಟ್‌ಗಳ (ಸಮರ ನೌಕೆ) ಸರಣಿಯ ಏಳನೇ ಹಡಗು. ಇದರಲ್ಲಿ ಬಹುವರ್ಧಿತ ಸ್ಟೆಲ್ತ್ ವೈಶಿಷ್ಟ್ಯಗಳು, ಸುಧಾರಿತ ಶಸ್ತ್ರಾಸ್ತ್ರಗಳು, ಆಧುನಿಕ ಸೆನ್ಸರ್‌ಗಳು ಮತ್ತು ಸಮರ ಹೆಲಿಕಾಪ್ಟರ್‌ ಉಡಾವಣೆಯ ಪ್ಲಾಟ್‌ಫಾರ್ಮ್ ನಿರ್ವಹಣಾ ವ್ಯವಸ್ಥೆಗಳನ್ನು ಹೊಂದಿದೆ.

INS ಮಹೇಂದ್ರಗಿರಿಯ ಸುಧಾರಿತ ತಾಂತ್ರಿಕ ವೈಶಿಷ್ಟ್ಯಗಳು ನಮ್ಮ ದೇಶೀಯ ರಕ್ಷಣಾ ಸಾಮರ್ಥ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ನಮ್ಮ ಸಮುದ್ರ ಸಾಮ್ರಾಜ್ಯವನ್ನು ಸಂರಕ್ಷಿಸುವ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ. ಭಾರತೀಯ ನೌಕಾಪಡೆಯ ಯುದ್ಧನೌಕೆ ಡಿಸೈನ್ ಬ್ಯೂರೋದಿಂದ ಆಂತರಿಕವಾಗಿ ವಿನ್ಯಾಸಗೊಳಿಸಲಾದ ಪ್ರಾಜೆಕ್ಟ್ 17A ಹಡಗುಗಳು ದೇಶದ ʼಆತ್ಮ ನಿರ್ಭರತೆ’ಯ ಸಾಧನೆಗೆ ಪೂರಕವಾಗಿವೆ. ಇದರಲ್ಲಿ ಅಳವಡಿಸಲಾದ ಶೇಕಡಾ 75ರಷ್ಟು ಉಪಕರಣಗಳು ಮತ್ತು ಸಿಸ್ಟಮ್ ಆರ್ಡರ್‌ಗಳು ಸ್ಥಳೀಯ ಕಿರು ಹಾಗೂ ಮಧ್ಯಮ ಗಾತ್ರ ಕೈಗಾರಿಕೆಗಳದಾಗಿವೆ. ಮಹೇಂದ್ರಗಿರಿಯು ಸ್ವಾವಲಂಬಿ ನೌಕಾ ಪಡೆಯನ್ನು ಸ್ಥಾಪಿಸುವಲ್ಲಿ ಭಾರತ ತೆಗೆದುಕೊಂಡ ಗಮನಾರ್ಹ ದಾಪುಗಾಲುಗಳಿಗೆ ಇದು ಸಾಕ್ಷಿಯಾಗಿದೆ ಎಂದು ನೌಕಾಪಡೆ ಹೇಳಿದೆ.

ಕಳೆದ ತಿಂಗಳು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೋಲ್ಕತ್ತಾದ ಹೂಗ್ಲಿ ನದಿಯ ದಡದಲ್ಲಿರುವ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ ಲಿಮಿಟೆಡ್‌ನಲ್ಲಿ (GRSE) ಭಾರತೀಯ ನೌಕಾಪಡೆಯ ಸುಧಾರಿತ ಸ್ಟೆಲ್ತ್ ಫ್ರಿಗೇಟ್ INS ವಿಂಧ್ಯಗಿರಿಯನ್ನು ಉದ್ಘಾಟಿಸಿದ್ದರು. ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆದ ಮುರ್ಮು ಅವರು ಭಾರತೀಯ ನೌಕಾಪಡೆಗಾಗಿ ʼಪ್ರಾಜೆಕ್ಟ್ 17 ಆಲ್ಫಾ’ ಭಾಗವಾಗಿ ನಿರ್ಮಿಸಲಾದ ಆರನೇ ಹಡಗಾದ INS ವಿಂಧ್ಯಗಿರಿಯನ್ನು ಕಾರ್ಯಾಚರಣೆಗೆ ಮುಕ್ತಗೊಳಿಸಿದರು. ಈ ಯೋಜನೆಯಲ್ಲಿ ಮೊದಲ ಐದು ಹಡಗುಗಳನ್ನು 2019 ಮತ್ತು 2022ರ ನಡುವೆ ತರಲಾಗಿತ್ತು.

ಮಾರ್ಗದರ್ಶಿ ಕ್ಷಿಪಣಿ ಯುದ್ಧನೌಕೆಗಳಾಗಿರುವ ಈ P17A ಹಡಗುಗಳ ಉದ್ದ 149 ಮೀಟರ್, ಮತ್ತು ಸುಮಾರು 6,670 ಟನ್‌ ತೂಕ ಹೊಂದಿವೆ. ಅವರು 28 ನಾಟ್‌ಗಳ (51.85 kmph) ಗರಿಷ್ಠ ವೇಗದಲ್ಲಿ ಪ್ರಯಾಣಿಸುತ್ತವೆ. ಈ ಹಡಗುಗಳು ಎಲ್ಲಾ ಮೂರು ಆಯಾಮಗಳ (ಆಕಾಶ, ಭೂಮಿ ಮತ್ತು ನೀರು) ಬೆದರಿಕೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿವೆ.

ಇದನ್ನೂ ಓದಿ: ಮಾನವರಹಿತ ವೈಮಾನಿಕ ವಾಹನ ತಪಸ್‌ ಯಶಸ್ವಿ ಹಾರಾಟ; ಇದು ಕಾರವಾರ ನೌಕಾನೆಲೆಯ ಸಾಧನೆ!

Exit mobile version