ತಿರುವನಂತಪುರಂ: ಎಷ್ಟೋ ಬಾರಿ ಜೀವನದಲ್ಲಿ ಎಲ್ಲವೂ ಇದ್ದರೂ ನಿರುತ್ಸಾಹ ಕಾಡುತ್ತಿರುತ್ತದೆಯಲ್ಲವೇ. ಎಲ್ಲ ಸರಿಯಾಗಿಯೇ ಇದ್ದರೂ ಏನನ್ನೂ ಮಾಡುವ ಹುರುಪಿಲ್ಲದೆ ಸುಮ್ಮನೆ ಕುಳಿತುಬಿಟ್ಟಿರುತ್ತೇವೆ. ಆದರೆ ಕೇರಳದ ಶೆರಿನ್ ಶಹಾನ್ ಹಾಗಲ್ಲ. ಬದುಕು ಕಟ್ಟಿಕೊಳ್ಳಬೇಕು ಎನ್ನುವ ಸಮಯದಲ್ಲಿ ಕಾಲುಗಳು ಸ್ವಾಧೀನವನ್ನೇ ಕಳೆದುಕೊಂಡರೂ ಲೆಕ್ಕಿಸದ ಆಕೆ ಇದೀಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕುಟುಂಬಕ್ಕೇ ಕೀರ್ತಿ (Inspiring Story) ತಂದುಕೊಟ್ಟಿದ್ದಾಳೆ.
ಕೇರಳದ ವಯನಾಡಿನ ಕಂಬಲಕ್ಕಾಡಿನ ಮುಸ್ಲಿಂ ಕುಟುಂಬವದು. ಶರಿನ್ ಮನೆಯ ನಾಲ್ಕನೆಯ ಹೆಣ್ಣು ಮಗಳು. ಆಕೆಯ ಇಬ್ಬರು ಅಕ್ಕಂದಿರು ಎಸ್‌ಎಸ್‌ಎಲ್‌ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದರೆ, ಒಬ್ಬಳು ಮಾತ್ರ ಪದವಿ ಮುಗಿಸಿ, ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ತಂದೆ 2015ರಲ್ಲೇ ತೀರಿಕೊಂಡಿದ್ದರು. 2017ರಲ್ಲಿ ಪದವಿ ಮುಗಿಸಿ ತನ್ನ ಮನೆಯ ಟೆರೇಸ್ ಮೇಲಿದ್ದಾಗ ಅಲ್ಲಿಂದ ಬಿದ್ದು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರು.
ಇದನ್ನೂ ಓದಿ: Viral Photo : ನಾಯಿಗಳ ಗ್ರೂಪ್ ಫೋಟೋ! ಇದು ಮತ್ತಾರಿಂದಲೂ ಸಾಧ್ಯವಾಗದ ಕೆಲಸ
ಶಯಾನಾ ಸರಿ ಸುಮಾರು ಒಂದೂವರೆ ವರ್ಷ ಬೆಡ್‌ರೆಸ್ಟ್‌ನಲ್ಲೇ ಕಳೆದಿದ್ದರು. ಆಗ ಅವರಿಗೆ ಜೀವನವೇ ಕಮರಿ ಹೋದಂತೆ ಭಾಸವಾಗಿತ್ತಂತೆ. ಆದರೆ ತನಗೆ ತಾನೇ ಆತ್ಮಸ್ಥೈರ್ಯ ತುಂಬಿಕೊಂಡ ಶಯಾನಾ ವೀಲ್‌ಚೇರ್ ಹತ್ತಿ ವಿದ್ಯಾಭ್ಯಾಸ ಆರಂಭಿಸಿದರು. ಯುಜಿಸಿ-ನೆಟ್ ಪರೀಕ್ಷೆ ಬರೆದು ಅದರಲ್ಲಿ ಪಾಸ್ ಆದ ಮೇಲೆ ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾದರು.
ನಂತರ ಅವರು 2020ರಲ್ಲಿ ತಿರುವನಂತಪುರಂನಲ್ಲಿ ಐಎಎಸ್ ಅಕಾಡೆಮಿಯೊಂದನ್ನು ಸೇರಿಕೊಂಡರು. ಡಾ.ಜಾಬಿನ್ ಕೊಟ್ಟಾರಂ ಅವರ ಆ ಅಕಾಡೆಮಿಯಲ್ಲಿ ವಿಕಲಾಂಗರಿಗೆಂದೇ ಬಟರ್‌ಫ್ಲೈ ಹೆಸರಿನ ಹೊಸದೊಂದು ಕಾರ್ಯಕ್ರಮ ನಡೆಸಿ ಅವರನ್ನು ಐಎಎಸ್ ಪರೀಕ್ಷೆ ಸಿದ್ಧಗೊಳಿಸಲಾಯಿತು. ಆ ಕಾರ್ಯಕ್ರಮದಲ್ಲಿದ್ದ 25 ಜನರಲ್ಲಿ ಕೊನೆಯದಾಗಿ ಸೇರಿಕೊಂಡವರು ಶಯಾನಾ. ಆದರೆ ಅವರಲ್ಲಿ ಮೊದಲನೆಯದಾಗಿ ಯುಪಿಎಸ್‌ಸಿ ತೇರ್ಗಡೆಯಾದವರು ಅವರೇ.
ಜೀವನದಲ್ಲಿ ಕಷ್ಟಗಳು ಬಂದವು. ಆದರೆ ಅವೆಲ್ಲವನ್ನೂ ಮೀರಿ ಏನಾದರೂ ಸಾಧಿಸಬೇಕು ಎಂದು ಹಠ ಹಿಡಿದೆ. ನಮ್ಮ ಊರಿನಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದವರಿಗೆ ಎಷ್ಟರ ಮಟ್ಟಿಗೆ ಗೌರವ ಸಿಗುತ್ತದೆ ಎನ್ನುವುದನ್ನು ನೋಡಿದ್ದೆ. ಅದು ನನಗೂ ಬೇಕೆನ್ನುವ ಬಯಕೆಯಿಂದ ಪ್ರಯತ್ನಿಸಿ ಇದು ಸಾಧಿಸಿದ್ದೇನೆ ಎನ್ನುತ್ತಾರೆ ಶಯಾನ.