ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ 2024ರ ಜನವರಿ 14ರ ಮಕರಸಂಕ್ರಾಂತಿಯಂದು ಶ್ರೀರಾಮನ ವಿಗ್ರಹವನ್ನು (ರಾಮ ಲಲ್ಲಾ) ಪ್ರತಿಷ್ಠಾಪನೆ ಮಾಡಲಾಗುವುದು ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಶುಕ್ರವಾರ (Ram mandir) ತಿಳಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು, ಮುಂದಿನ ವರ್ಷ ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಸಿದ್ಧವಾಗಲಿದೆ ಎಂದು ಘೋಷಣೆ ಮಾಡಿರುವ ಬೆನ್ನಲ್ಲೇ ಚಂಪತ್ ರಾಯ್ ಅವರು ಈ ವಿಷಯ ತಿಳಿಸಿದ್ದಾರೆ.
ಈಗಾಗಲೇ ನಿರ್ಧರಿಸಿರುವಂತೆ 2024ರ ಜನವರಿ 14ರ ಮಕರ ಸಂಕ್ರಾಂತಿಗೆ ದೇವಾಲಯದಲ್ಲಿ ರಾಮ ಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಹಾಗೂ ಬಳಿಕ ಭಕ್ತರಿಗೆ ದೇಗುಲವು ತೆರೆದುಕೊಳ್ಳಲಿದೆ ಎಂದು ಚಂಪತ್ ರಾಯ್ ತಿಳಿಸಿದ್ದಾರೆ. ಬಾಲ ರಾಮನ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ. ಹೀಗಿದ್ದರೂ, ಪ್ರತಿಮೆಯ ಗಾತ್ರ, ಸ್ವರೂಪದ ಬಗ್ಗೆ ನಿಖರ ಮಾಹಿತಿ ಬಹಿರಂಗವಾಗಿಲ್ಲ. ಹೊಸ ಪ್ರತಿಮೆ 9 ಅಡಿ ಎತ್ತರ ಇರಲಿದ್ದು, ಭಕ್ತರಿಗೆ 35 ಅಡಿ ದೂರದಿಂದಲೂ ದರ್ಶನ ಪಡೆಯಲು ಸಾಧ್ಯವಾಗಲಿದೆ ಎಂದು ವರದಿಯಾಗಿದೆ.