ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (jammu and kashmir) ಶ್ರೀನಗರದಲ್ಲಿ ಇಂದು ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (International Yoga Day 2024) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಬಳಿಕ ಅಲ್ಲಿನ ಜನರ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Post Yoga selfies in Srinagar! Unparalled vibrancy here, at the Dal Lake. pic.twitter.com/G9yxoLUkpX
— Narendra Modi (@narendramodi) June 21, 2024
ಈ ಬಾರಿ ನಿರಂತರ ಮಳೆಯಿಂದಾಗಿ ಕಾರ್ಯಕ್ರಮವನ್ನು ಒಳಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು. ಯೋಗದ ನಂತರ ಸ್ಥಳೀಯ ಮಹಿಳೆಯರೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಅವರ ಜತೆ ಸೆಲ್ಫಿ ಕೂಡ ಕ್ಲಿಕ್ಕಿಸಿದ್ದಾರೆ.
ಯೋಗ ಪ್ರದರ್ಶನ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಯೋಗವು ಜ್ಞಾನ ಮಾತ್ರವಲ್ಲ ವಿಜ್ಞಾನವು ಕೂಡ ಆಗಿದೆ, ಇಂದು ಮಾಹಿತಿ ಸಂಪನ್ಮೂಲಗಳ ಪ್ರವಾಹವೇ ಇದೆ ಅಂತಹ ಪರಿಸ್ಥಿತಿಯಲ್ಲಿ ಒಂದು ವಿಷಯದ ಮೇಲೆ ಕೇಂದ್ರೀಕರಿಸುವುದು ಕಷ್ಟವಾಗುತ್ತಿದೆ, ಇದರ ಪರಿಹಾರವು ಯೋಗದಲ್ಲಿದೆ. ವಿಶ್ವದಾದ್ಯಂತ ಯೋಗಾಭ್ಯಾಸ ಮಾಡುವವರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಯೋಗದ ಮೂಲಕ ನಾವು ಹೆಚ್ಚಿನ ಶಕ್ತಿಯನ್ನು ಪಡೆಯಬಹುದು ಎಂದು ಹೇಳಿದರು.
ಯೋಗ ದಿನದಂದು ದೇಶದ ಜನರಿಗೆ ಮತ್ತು ವಿಶ್ವದ ಮೂಲೆ ಮೂಲೆಗಳಲ್ಲಿ ಯೋಗ ಮಾಡುವ ಜನರಿಗೆ ನಾನು ಶುಭಾಶಯಗಳನ್ನು ಹೇಳುತ್ತೇನೆ. ಅಂತಾರಾಷ್ಟ್ರೀಯ ಯೋಗ ದಿನವು 10 ವರ್ಷಗಳ ಐತಿಹಾಸಿಕ ಪ್ರಯಾಣವನ್ನು ಪೂರ್ಣಗೊಳಿಸಿದೆ. 2014ರಲ್ಲಿ ನಾನು ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರಸ್ತಾಪಿಸಿದೆ. ಭಾರತದ ಈ ಪ್ರಸ್ತಾಪವನ್ನು 177 ರಾಷ್ಟ್ರಗಳು ಬೆಂಬಲಿಸಿದವು. ಅಂದಿನಿಂದ ಯೋಗ ದಿನವು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ” ಎಂದು ಮೋದಿ ನುಡಿದರು.
“ನಾನು ವಿದೇಶದಲ್ಲಿರುವಾಗ ಜಾಗತಿಕ ನಾಯಕರು ಯೋಗದ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಾರೆ. ನಾವು 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ, ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಲು ನಾನು ಪ್ರತಿಯೊಬ್ಬರನ್ನು ಕೋರುತ್ತೇನೆ” ಎಂದು ಅವರು ಕರೆ ನೀಡಿದರು.
ಶ್ರೀನಗರದ ಶೇರ್-ಎ-ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ (SKICC) ನಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಯ ನೇತೃತ್ವವನ್ನು ಪ್ರಧಾನಿ ಮೋದಿ ವಹಿಸಿದರು. 30 ನಿಮಿಷಗಳ ಕಾಲ ನಡೆಯುವ ಯೋಗಾಭ್ಯಾಸ ಕಾರ್ಯಕ್ರಮ ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿತ್ತು. ದಾಲ್ ಸರೋವರದ ದಡದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಧಾರಾಕಾರ ಮಳೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಕಾರ್ಯಕ್ರಮವೂ ತಡವಾಗಿ, ಒಳಾಂಗಣ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಆಯುಷ್ ಸಚಿವ ಪ್ರತಾಪ್ರರಾವ್ ಗಣಪತರಾವ್ ಜಾಧವ್ ಸೇರಿದಂತೆ ಇತರರು ಭಾಗವಹಿಸಿದರು.
“ಈ ವರ್ಷ ಫ್ರಾನ್ಸ್‌ನ 101 ವರ್ಷದ ಮಹಿಳಾ ಯೋಗ ಶಿಕ್ಷಕಿಗೆ ಪದ್ಮಶ್ರೀ ನೀಡಲಾಗಿದೆ. ಅವರು ಎಂದಿಗೂ ಭಾರತಕ್ಕೆ ಬಂದಿರಲಿಲ್ಲ. ಆದರೆ ಅವರು ಯೋಗದ ಬಗ್ಗೆ ಜಾಗೃತಿ ಮೂಡಿಸಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಇಂದು ಯೋಗದ ಕುರಿತು ಪ್ರಪಂಚದಾದ್ಯಂತ ಸಂಶೋಧನೆ ನಡೆಸಲಾಗುತ್ತಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುತ್ತಿವೆ” ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: International Yoga Day 2024: ಸಶಸ್ತ್ರ ಪಡೆಗಳಿಂದ ಮೈಕೊರೆಯುವ ಹಿಮ ಪರ್ವತದಲ್ಲೂ ಯೋಗ ದಿನಾಚರಣೆ; ವಿಡಿಯೊ ನೋಡಿ