ನವ ದೆಹಲಿ: ನೆರೆರಾಷ್ಟ್ರ ಪಾಕಿಸ್ತಾನದಿಂದ ಒಳನುಸುಳಿದ್ದವನೊಬ್ಬನನ್ನು ಭಾರತೀಯ ಗಡಿ ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಈತ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು, ಪಂಜಾಬ್ ಗಡಿಯಲ್ಲಿ ಇಂದು ಮುಂಜಾನೆ ಸಮಯದಲ್ಲಿ ಒಳನುಸುಳಿದ್ದ.
ಪಂಜಾಬ್ನ ಗುರುದಾಸ್ಪುರದ ಅಜ್ನಾಲಾ ವಲಯದ ಗಡಿ ಭಾಗದಲ್ಲಿರುವ ಚನ್ನಾ ಪೋಸ್ಟ್ ಸಮೀಪ ಮುಂಜಾನೆ 8ಗಂಟೆ ಹೊತ್ತಿಗೆ ಈತ ಕೈಯಲ್ಲಿ ಅಸ್ತ್ರಗಳನ್ನು ಹಿಡಿದುಕೊಂಡು ಬೇಲಿ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ನಂತರ ಅಲ್ಲಿಂದ ಒಳನುಸುಳಿ ಭಾರತದ ಭೂಭಾಗಕ್ಕೆ ಬಂದಿದ್ದ. ಕೂಡಲೇ ಅಲರ್ಟ್ ಆದ ಗಡಿಭದ್ರತಾ ಪಡೆ ಸಿಬ್ಬಂದಿ ಗುಂಡು ಹೊಡೆದಿದ್ದಾರೆ.
ಅಂದಹಾಗೇ, ಇವನ ಬಳಿ ಸಿಕ್ಕಿದ್ದು ಅತ್ಯಾಧುನಿಕವಾದ ಪಂಪ್ ಆ್ಯಕ್ಷನ್ ಶಾಟ್ಗನ್ ಎಂದು ಹೇಳಲಾಗಿದೆ. ಅಂದರೆ ಗನ್ ಟ್ರಿಗರ್ನ್ನು ಒಂದು ಸಲ ಒತ್ತಿದರೆ ಹಲವು ಗುಂಡುಗಳು ಹಾರುವಂಥದ್ದು. 2022ರಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂಜಾಬ್ ಗಡಿಯಲ್ಲಿ ಒಳನುಸುಳಿದ್ದ ಇಬ್ಬರು ಪಾಕಿಸ್ತಾನಿಗಳನ್ನು ಬಿಎಸ್ಎಫ್ ಸಿಬ್ಬಂದಿ ಕೊಂದು ಹಾಕಿದ್ದರು. ಹಾಗೇ, 23 ನುಸುಳುಕೋರರನ್ನು ಬಂಧಿಸಿದ್ದರು. 2023ರಲ್ಲಿ ಇದು ಮೊದಲ ಒಳನುಸುಳುವಿಕೆ ಪ್ರಕರಣವಾಗಿದೆ.
ಇದನ್ನೂ ಓದಿ: Taliban shames Pakistan | 71ರ ಯುದ್ಧದಲ್ಲಿ ಭಾರತಕ್ಕೆ ಶರಣಾದ ಚಿತ್ರ ತೋರಿಸಿ ಪಾಕಿಸ್ತಾನವನ್ನು ಅಣಕಿಸಿದ ತಾಲಿಬಾನ್!