Site icon Vistara News

iPhone production : ಚೀನಾದಿಂದ ಐಫೋನ್‌ ಉತ್ಪಾದನೆ ಶಿಫ್ಟ್‌, ಫಾಕ್ಸ್‌ಕಾನ್‌ನಿಂದ ಬೆಂಗಳೂರಿನಲ್ಲಿ ಭಾರಿ ಭೂಮಿ ಖರೀದಿ

iPhone

ಬೆಂಗಳೂರು: ಆ್ಯಪಲ್‌ ಕಂಪನಿಯ ಐಫೋನ್‌ ಉತ್ಪಾದನೆಯ ಪ್ರಮುಖ ಗುತ್ತಿಗೆದಾರ ಕಂಪನಿ ಫಾಕ್ಸ್‌ಕಾನ್‌ ಬೆಂಗಳೂರಿನ ಹೊರ ವಲಯದಲ್ಲಿ 1.3 ಕೋಟಿ ಚದರ ಅಡಿ ಭೂಮಿಯನ್ನು ಖರೀದಿಸಿದೆ. ಚೀನಾದಿಂದ ಹೊರಗೆ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿರುವುದಾಗಿ ತೈವಾನ್‌ ಮೂಲದ ಫಾಕ್ಸ್‌ಕಾನ್‌ ತಿಳಿಸಿದೆ. ( iPhone production ) ತೈವಾನ್‌ ಮೂಲದ ಎಲೆಕ್ಟ್ರಾನಿಕ್ಸ್‌ ದಿಗ್ಗಜ ಫಾಕ್ಸ್‌ಕಾನ್‌ (Foxconn), ಬೆಂಗಳೂರಿನ ದೇವನಹಳ್ಳಿಯಲ್ಲಿ 1.3 ಚದರ ಅಡಿ ( 13 million square foot) ಜಾಗವನ್ನು ಖರೀದಿಸಿದೆ.

ಚೀನಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಠಿಣ ಕೋವಿಡ್‌ ನಿಯಮಾವಳಿಗಳು ಜಾರಿಯಾಗಿರುವುದರಿಂದ ಹಾಗೂ ಚೀನಾ-ಅಮೆರಿಕ ನಡುವಣ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆ್ಯಪಲ್‌ ಕಂಪನಿಯು ಚೀನಾದಿಂದ ಹೊರಗೆ ಉತ್ಪಾದನೆಯನ್ನು ಹೆಚ್ಚಿಸಲು ಉದ್ದೇಶಿಸಿದೆ. ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಇದೆ.

ಫಾಕ್ಸ್‌ಕಾನ್‌ ಕಂಪನಿಯು ಭೂಮಿ ಖರೀದಿಸುವ ಸಲುವಾಗಿ ತನ್ನ ಅಧೀನ ಸಂಸ್ಥೆಯಾಗಿರುವ ಫಾಕ್ಸ್‌ಕಾನ್‌ ಹೋನ್‌ ಹೈ ಟೆಕ್ನಾಲಜಿಗೆ (Foxconn Honn Hai Technology India) 303 ಕೋಟಿ ರೂ.ಗಳನ್ನು ನೀಡಿತ್ತು. ಫಾಕ್ಸ್‌ಕಾನ್‌ನ ಮತ್ತೊಂದು ಘಟಕ 480,000 ಚದರ ಮೀಟರ್‌ ಪ್ರದೇಶವನ್ನು ವಿಯೆಟ್ನಾಂನಲ್ಲಿ ಖರೀದಿಸುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ಮಾರ್ಚ್‌ನಲ್ಲಿ, ಶೀಘ್ರದಲ್ಲಿ ಐಫೋನ್‌ ಉತ್ಪಾದನೆಯ ಹೊಸ ಘಟಕ ಸ್ಥಾಪನೆಯಾಗಲಿದೆ. 100,000 ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದ್ದರು. ಕರ್ನಾಟಕದಲ್ಲಿ ಹೊಸ ಕಾರ್ಖಾನೆಗೆ ಫಾಕ್ಸ್‌ ಕಾನ್‌ 5,740 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ವರದಿಯಾಗಿತ್ತು.

ಫಾಕ್ಸ್‌ಕಾನ್‌ ಅಧ್ಯಕ್ಷ ಯಂಗ್‌ ಲಿಯು ಅವರು ಸೆಮಿಕಂಡಕ್ಟರ್‌ ಅಭಿವೃದ್ಧಿ, ಎಲೆಕ್ಟ್ರಿಕ್‌ ವಾಹನ ಅಭಿವೃದ್ಧಿ ಸೇರಿದಂತೆ ಹೊಸ ಕ್ಷೇತ್ರಗಳಲ್ಲಿ ಉದ್ದಿಮೆ ಅಭಿವೃದ್ಧಿಗೆ ರಾಜ್ಯದ ಸಹಕಾರ ಕೋರಿದ್ದರು. ಫಾಕ್ಸ್‌ ಕಾನ್‌ 2019ರಿಂದ ಭಾರತದಲ್ಲಿ ಆ್ಯಪಲ್‌ ಉತ್ಪನ್ನಗಳನ್ನು ತಮಿಳುನಾಡಿನಲ್ಲಿನ ಘಟಕದಲ್ಲಿ ತಯಾರಿಸುತ್ತಿದೆ. ತೈವಾನ್‌ ಮೂಲದ ವಿಸ್ಟ್ರಾನ್‌ ಮತ್ತು ಪೆಗಟ್ರಾನ್‌ ಕೂಡ ಭಾರತದಲ್ಲಿ ಆ್ಯಪಲ್‌ ಉತ್ಪನ್ನಗಳನ್ನು ತಯಾರಿಸುತ್ತಿವೆ.

ಭಾರತದಿಂದ ಆ್ಯಪಲ್‌ ಐಫೋನ್‌ ದಾಖಲೆಯ ರಫ್ತು

ಭಾರತದಿಂದ ಮೊಟ್ಟ ಮೊದಲ ಬಾರಿಗೆ 5 ಶತಕೋಟಿ ಡಾಲರ್‌ ಮೌಲ್ಯದ (40,000 ಕೋಟಿ ರೂ.) ಆ್ಯಪಲ್ ಐಫೋನ್‌ ರಫ್ತಾಗಿದೆ. (5 ಶತಕೋಟಿ ಡಾಲರ್)‌ ಆ್ಯಪಲ್ ಕಂಪನಿಯು 2021-22ರಲ್ಲಿ 11,000 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿತ್ತು. ಕೇಂದ್ರ ಸರ್ಕಾರದ ಪಿಎಲ್‌ಐ ಯೋಜನೆ ಕೂಡ ಇದಕ್ಕೆ ಕಾರಣವಾಗಿದೆ ಎಂದು ಇಂಡಿಯಾ ಸೆಲ್ಯುಲಾರ್‌ & ಎಲೆಕ್ಟ್ರಾನಿಕ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಪಂಕಜ್‌ ಮೊಹಿಂದಾರೊ ತಿಳಿಸಿದ್ದಾರೆ.

ಸ್ಮಾರ್ಟ್‌ಫೋನ್‌ಗಳ ಒಟ್ಟು ರಫ್ತು 10 ಶತಕೋಟಿ ಡಾಲರ್‌ಗೆ (82,000 ಕೋಟಿ ರೂ.) ಏರಿದೆ. ಭಾರತದಲ್ಲಿ ಆ್ಯಪಲ್ ಕಂಪನಿಯು ತನ್ನ ಐಫೋನ್‌ ಉತ್ಪಾದನೆಯನ್ನು ಗಣನೀಯವಾಗಿ ಏರಿಸಿರುವುದು ಇದಕ್ಕೆ ಕಾರಣ. ಭಾರತವನ್ನು ಸ್ಮಾರ್ಟ್‌ಫೋನ್‌ ಉತ್ಪಾದನೆಯ ಪ್ರಮುಖ ತಾಣವನ್ನಾಗಿಸುವ ಮೇಕ್‌ ಇನ್‌ ಇಂಡಿಯಾ ಅಭಿಯಾನಕ್ಕೆ ಇದರಿಂದ ಪುಷ್ಟಿ ಸಿಗಲಿದೆ.‌

ಇದನ್ನೂ ಓದಿ: Apple Store: ಮುಂಬೈನಲ್ಲಿ ದೇಶದ ಮೊದಲ ಆ್ಯಪಲ್ ಸ್ಟೋರ್‌ ಆರಂಭ, ಹೇಗಿದೆ ಈ ಐಫೋನ್ ಮಳಿಗೆ?

ಆ್ಯಪಲ್ ಕಂಪನಿಯ ಭರ್ಜರಿ ಉತ್ಪಾದನೆಯ ಪರಿಣಾಮ ಭಾರತದಿಂದ 2022-23ರಲ್ಲಿ ಒಟ್ಟು 10 ಶತಕೋಟಿ ಡಾಲರ್‌ ಮೌಲ್ಯದ ಸ್ಮಾರ್ಟ್‌ಫೋನ್‌ಗಳು ರಫ್ತಾಗಿದೆ. (ಅಂದಾಜು 80,000 ಕೋಟಿ ರೂ.) ಸ್ಯಾಮ್‌ಸಂಗ್‌ 4 ಶತಕೋಟಿ ಡಾಲರ್‌ (32,000 ಕೋಟಿ ರೂ.) ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದೆ ಎಂದು ಉದ್ಯಮ ವಲಯದ ಅಂಕಿ ಅಂಶಗಳು ತಿಳಿಸಿವೆ.

ಭಾರತದಲ್ಲಿ ತಯಾರಾಗುವ ಆ್ಯಪಲ್ ಐಫೋನ್‌ಗಳು ಈಗ ಬ್ರಿಟನ್‌, ಇಟಲಿ, ಫ್ರಾನ್ಸ್‌, ಮಧ್ಯಪ್ರಾಚ್ಯ, ಜಪಾನ್‌, ಜರ್ಮನಿ, ರಷ್ಯಾಕ್ಕೆ ರಫ್ತಾಗುತ್ತಿವೆ. ಆ್ಯಪಲ್ ಕಂಪನಿಯ ಒಟ್ಟು ಐಫೋನ್‌ ಉತ್ಪಾದನೆಯಲ್ಲಿ 5% ಪಾಲು ಭಾರತದಲ್ಲಿ ಈಗ ತಯಾರಾಗುತ್ತಿದೆ. 2020ರಲ್ಲಿ 1%ಗಿಂತಲೂ ಕಡಿಮೆ ಇತ್ತು. ಭಾರತದ ಎಲೆಕ್ಟ್ರಾನಿಕ್ಸ್‌ ರಫ್ತಿನಲ್ಲಿ ಮೊಬೈಲ್‌ ಫೋನ್‌ ಗಣನೀಯ ಪಾತ್ರವನ್ನು ವಹಿಸುತ್ತಿದೆ. ಜೆಪಿ ಮೋರ್ಗಾನ್‌ ವರದಿಯ ಪ್ರಕಾರ ಆ್ಯಪಲ್ 2025ರೊಳಗೆ ತನ್ನ ಐಫೋನ್‌ ಉತ್ಪಾದನೆಯಲ್ಲಿ 25% ಪಾಲನ್ನು ಭಾರತದಲ್ಲಿ ತಯಾರಿಸಲಿದೆ.

ಟಾಟಾ ಗ್ರೂಪ್‌ ಬೆಂಗಳೂರಿಗೆ ಸಮೀಪದ ಕೋಲಾರದ ನರಸಾಪುರದಲ್ಲಿರುವ ವಿಸ್ಟ್ರಾನ್‌ ಐಫೋನ್‌ ಘಟಕವನ್ನು ಖರೀದಿಸಲು (Wistron iPhone plant) ಸಜ್ಜಾಗಿದೆ. ಇದು ಕಾರ್ಯಗತವಾದರೆ ಆ್ಯಪಲ್‌ ಐಫೋನ್‌ಗಳನ್ನು ತಯಾರಿಸುವ ಭಾರತದ ಮೊಟ್ಟ ಮೊದಲ ಕಂಪನಿಯಾಗಿ ಟಾಟಾ ಗ್ರೂಪ್‌ ಹೊರಹೊಮ್ಮಲಿದೆ. ಟಾಟಾ ಗ್ರೂಪ್‌ (Tata Group) ಈಗಾಗಲೇ ಇದಕ್ಕಾಗಿ ಪೂರ್ವ ತಯಾರಿ ನಡೆಸುತ್ತಿದೆ.

ಒಂದು ವೇಳೆ ಟಾಟಾ ಗ್ರೂಪ್‌, ವಿಸ್ಟ್ರಾನ್‌ ಘಟಕವನ್ನು ಖರೀದಿಸಿದರೆ 2,000 ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಮಧ್ಯಮ ಸ್ತರದಲ್ಲಿರುವ 400 ಸಿಬ್ಬಂದಿ ವಲಸೆ ಹೋಗುವ ಸಾಧ್ಯತೆಯೂ ಇದೆ. 4-5 ಹಿರಿಯ ಉದ್ಯೋಗಿಗಳಿಗೆ ಕಂಪನಿ ಬಿಡುವಂತೆ ತಿಳಿಸಲಾಗಿದೆ.

ಟಾಟಾ ಗ್ರೂಪ್‌, ತೈವಾನ್‌ ಮೂಲದ ವಿಸ್ಟ್ರಾನ್‌ನ ಘಟಕವನ್ನು ಖರೀದಿಸಿದರೆ, ಐಫೋನ್‌ 15 ಉತ್ಪಾದನೆಗೆ ಮುಂದಾಗುವ ಸಾಧ್ಯತೆಯೂ ಇದೆ. ಪ್ರಸ್ತುತ ಘಟಕವು ಐಫೋನ್‌ 12 ಮತ್ತು ಐಫೋನ್‌ 14 ಅನ್ನು ಉತ್ಪಾದಿಸುತ್ತಿದೆ. ಟಾಟಾ ಗ್ರೂಪ್‌ಗೆ ತನ್ನ ಘಟಕವನ್ನು ಮಾರಾಟ ಮಾಡಿದ ಬಳಿಕ ವಿಸ್ಟ್ರಾನ್‌ ಸಂಪೂರ್ಣವಾಗಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸಲಿದೆ. ಏಕೆಂದರೆ ಕಂಪನಿಯು ಭಾರತದಲ್ಲಿ ಇದೊಂದೇ ಘಟಕದಲ್ಲಿ ಉತ್ಪಾದಿಸುತ್ತಿದೆ. ಭಾರತದ ಆ್ಯಪಲ್‌ ಐಫೋನ್‌ ಮಾರುಕಟ್ಟೆ 600 ದಶಲಕ್ಷ ಡಾಲರ್‌ಗಳಾಗಿದೆ.( 4920 ಕೋಟಿ ರೂ.)

Exit mobile version