ನವದೆಹಲಿ: ಐಪಿಎಸ್ ಅಧಿಕಾರಿ ಪ್ರವೀಣ್ ಮಧುಕರ್ ಪವಾರ್ ಅವರನ್ನು ಕೇಂದ್ರೀಯ ತನಿಖಾ ದಳದ (CBI) ಜಂಟಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಪ್ರವೀಣ್ ಮಧುಕರ್ ಪವಾರ್ (Pravin Madhukar Pawar) ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಐದು ವರ್ಷದವರೆಗೆ ಅಥವಾ ಕೇಂದ್ರ ಸರ್ಕಾರದ (Central Government) ಮುಂದಿನ ಆದೇಶದವರೆಗೆ ಅವರು ಸಿಬಿಐ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಹಾಗೂ ಪಿಂಚಣಿಗಳ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.
“ಸಿಬಿಐ ಜಂಟಿ ನಿರ್ದೇಶಕರನ್ನಾಗಿ ಪ್ರವೀಣ್ ಮಧುಕರ್ ಪವಾರ್ ಅವರನ್ನು ನೇಮಿಸುವ ಕುರಿತು ನೇಮಕಾತಿ ಕುರಿತ ಸಂಪುಟ ಸಮಿತಿಯು ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ. ಮುಂದಿನ ಐದು ವರ್ಷ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವರು ಸಿಬಿಐ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ” ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
IPS officer Pravin Madhukar Pawar appointed as Joint Director of CBI for a period of five years from the date of assumption of charge of the post or until further orders, whichever is earlier: Govt of India pic.twitter.com/PYD2gXz2Xg
— ANI (@ANI) November 3, 2023
ಕರ್ನಾಟಕದಲ್ಲಿ ಕಾರ್ಯನಿರ್ವಹಣೆ
ಪ್ರವೀಣ್ ಮಧುಕರ್ ಪವಾರ್ ಅವರು ಇದುವರೆಗೆ ಸೌತರ್ನ್ ರೇಂಜ್ ಐಜಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮೈಸೂರಿನಲ್ಲಿ ಇದರ ಮುಖ್ಯ ಕಚೇರಿ ಇದ್ದು, ಮೈಸೂರು (ಗ್ರಾಮೀಣ), ಮಂಡ್ಯ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳು ಇವರ ಕಾರ್ಯವ್ಯಾಪ್ತಿಗೆ ಬರುತ್ತಿದ್ದವು. ಈಗ ಅವರಿಗೆ ಕೇಂದ್ರ ಸರ್ಕಾರವು ಹೊಸ ಜವಾಬ್ದಾರಿ ನೀಡಿದೆ.
ಇದನ್ನೂ ಓದಿ: Rahul Navin: ರಾಹುಲ್ ನವೀನ್ ಜಾರಿ ನಿರ್ದೇಶನಾಲಯದ ಹೊಸ ಪ್ರಭಾರಿ ಡೈರೆಕ್ಟರ್
ಇದೇ ವರ್ಷದ ಮೇ ತಿಂಗಳಲ್ಲಿ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾಗಿದ್ದ (DGP) ಪ್ರವೀಣ್ ಸೂದ್ ಅವರನ್ನು ಕೇಂದ್ರ ಸರ್ಕಾರವು ಸಿಬಿಐ ನಿರ್ದೇಶಕರನ್ನಾಗಿ ನೇಮಿಸಿದೆ. ಪ್ರವೀಣ್ ಸೂದ್ ಅವರು ಎರಡು ವರ್ಷದ ಅವಧಿಗೆ ಸಿಬಿಐ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇವರ ಅಧಿಕಾರದ ಅವಧಿಯನ್ನು ಕೇಂದ್ರ ಸರ್ಕಾರವು ಗರಿಷ್ಠ ಐದು ವರ್ಷದವರೆಗೆ ವಿಸ್ತರಣೆ ಮಾಡಬಹುದಾಗಿದೆ. ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡುವ ಉನ್ನತ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ಇರುತ್ತಾರೆ.