ದಿಸ್ಪುರ: ಮನುಷ್ಯ ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ಎಷ್ಟೇ ಖಡಕ್ ಆಗಿರಲಿ, ಧೈರ್ಯವಂತನಾಗಿರಲಿ, ತನ್ನವರನ್ನು ಕಳೆದುಕೊಂಡಾಗ, ತಾನು ಪ್ರೀತಿಸುತ್ತಿದ್ದವರು ಕಣ್ಣೆದುರೇ ನಿಧನರಾದಾಗ ಅಧೀರನಾಗುತ್ತಾನೆ. ಇನ್ನೇಕೆ ಬದುಕಬೇಕು ಎಂದು ಹತಾಶನಾಗುತ್ತಾನೆ. ಇದೇ ಆತನನ್ನು ಆತ್ಮಹತ್ಯೆಗೆ ದಾರಿಮಾಡಿಕೊಡುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಅಸ್ಸಾಂನಲ್ಲಿ (Assam) ಐಪಿಎಸ್ ಅಧಿಕಾರಿಯೊಬ್ಬರು (IPS Officer) ಪತ್ನಿ ಕ್ಯಾನ್ಸರ್‌ನಿಂದ ನಿಧನರಾದ ಕೆಲವೇ ನಿಮಿಷಗಳಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ, ಅಸ್ಸಾಂ ಸರ್ಕಾರದ ಗೃಹ ಮತ್ತು ರಾಜಕೀಯ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶೀಲಾದಿತ್ಯ ಚೇಟಿಯಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಪತ್ನಿ ಅಗೋಮೊನಿ ಬರ್ಬರುವಾ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರು ಗುವಾಹಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ (ಜೂನ್ 18) ಆಸ್ಪತ್ರೆಯಲ್ಲಿಯೇ ನಿಧನರಾದರು. ಶೀಲಾದಿತ್ಯ ಚೇಟಿಯಾ ಅವರು ಆಸ್ಪತ್ರೆಗೆ ತೆರಳುವ ಮೊದಲೇ ಅವರ ಪತ್ನಿ ನಿಧನರಾಗಿದ್ದರು ಎಂದು ತಿಳಿದುಬಂದಿದೆ.
ಅಗೋಮೊನಿ ಬರ್ಬರುವಾ ಅವರು ಅಗಲಿದ್ದಾರೆ ಎಂಬ ಸುದ್ದಿಯು ಶೀಲಾದಿತ್ಯ ಚೇಟಿಯಾ ಅವರಿಗೆ ಬರಸಿಡಿಲು ಬಡಿದಂತೆ ಭಾಸವಾಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಅವರು ತಮ್ಮ ಸೇವಾ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಡಿಐಜಿ ರ‍್ಯಾಂಕ್ ಆಫೀಸರ್ ಆಗಿದ್ದ ಶೀಲಾದಿತ್ಯ ಚೇಟಿಯಾ ಅವರು ಪತ್ನಿಯ ಅನಾರೋಗ್ಯದಿಂದಾಗಿ ಕಳೆದ ನಾಲ್ಕು ತಿಂಗಳಿಂದ ಸುದೀರ್ಘ ರಜೆಯಲ್ಲಿದ್ದರು ಎಂದು ತಿಳಿದುಬಂದಿದೆ.
”2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಶೀಲಾದಿತ್ಯ ಚೇಟಿಯಾ ಅವರು ನಿಧನರಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ. ಶೀಲಾದಿತ್ಯ ಚೇಟಿಯಾ ಪತ್ನಿ ನಿಧನರಾದ ಕೆಲವೇ ನಿಮಿಷಗಳಲ್ಲಿ ಅಧಿಕಾರಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅಸ್ಸಾಂ ಪೊಲೀಸ್ ಇಲಾಖೆಗೆ ಶಾಕಿಂಗ್ ವಿಚಾರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದಾಗಿ ಪ್ರಾರ್ಥಿಸುತ್ತೇವೆ” ಎಂದು ಅಸ್ಸಾಂ ಪೊಲೀಸ್ ಮಹಾನಿರ್ದೇಶಕ ಜಿ.ಪಿ. ಸಿಂಗ್ ಅವರು ಸಂತಾಪ ಸೂಚಿಸಿದ್ದಾರೆ.