ನವದೆಹಲಿ: ನೀವು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡುತ್ತಿದ್ದರೆ, ಖಂಡಿತವಾಗಿಯೂ ಈ ಸುದ್ದಿ ಓದಬೇಕು. ಸೈಬರ್ ಅಪರಾಧಿಗಳು ಐಆರ್‌ಸಿಟಿಸಿ ಆ್ಯಪ್ ಹೆಸರಿನಲ್ಲಿ ನಕಲಿ ಅಥವಾ ವಂಚನೆಯ ಉದ್ದೇಶಕ್ಕಾಗಿ ಐಆರ್‌ಸಿಟಿಸಿಕನೆಕ್ಟ್.ಎಪಿಕೆ (irctcconnect.apk) ಎಂಬ ಆ್ಯಪ್ ಅಭಿವೃದ್ಧಿಪಡಿಸಿದ್ದು, ಯಾವುದೇ ಕಾರಣಕ್ಕೂ ಈ ಆ್ಯಪ್ಅನ್ನು ಇನ್‌ಸ್ಟಾಲ್ ಮಾಡಬಾರದು ಎಂದು ಐಆರ್‌ಸಿಟಿಸಿ ಎಚ್ಚರಿಕೆ (IRCTC Warning) ನೀಡಿದೆ.
“ವಾಟ್ಸ್‌ಆ್ಯಪ್ ಹಾಗೂ ಟೆಲಿಗ್ರಾಂ ಮೂಲಕ ಅಪಾಯಕಾರಿ ಸಾಫ್ಟ್‌ವೇರ್‌ಗಳನ್ನು ರವಾನಿಸಲಾಗುತ್ತಿದೆ. ನಕಲಿ ಆ್ಯಪ್ ಬಗ್ಗೆಯೂ ಮಾಹಿತಿ ಹಂಚಿಕೆ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಲು irctcconnect.apk ಆ್ಯಪ್ ಬಳಸಿದರೆ ನಿಮ್ಮ ಮೊಬೈಲ್‌ಗೆ ಹಾನಿಯಾಗುತ್ತದೆ. ಬ್ಯಾಂಕ್ ವಹಿವಾಟಿನ ಯುಪಿಐ ಐಡಿ ಸೇರಿ ಯಾವುದೇ ವೈಯಕ್ತಿಕ ಮಾಹಿತಿ ಕದಿಯುವ ಭೀತಿ ಇದೆ” ಎಂದು ಐಆರ್‌ಸಿಟಿಸಿ ಪ್ರಕಟಣೆ ತಿಳಿಸಿದೆ.
ಆನ್‌ಲೈನ್ ವಂಚಕರು ಇಂತಹ ಕೃತ್ಯ ಎಸಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಯೇ ಜನರ ದಾರಿ ತಪ್ಪಿಸುತ್ತಿದ್ದಾರೆ. ಹಾಗಾಗಿ, ಮೊಬೈಲ್‌ಗೆ ಬರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬಾರದು. irctcconnect.apk ಆ್ಯಪ್ಅನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಾರದು. ಹಣದ ವಂಚನೆಗಾಗಿ ವಂಚಕರು ಇಂತಹ ಜಾಲ ರೂಪಿಸಿದ್ದಾರೆ. ಹಾಗಾಗಿ, ಯಾರೂ ಇಂತಹ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು ಮೋಸ ಹೋಗಬಾರದು. ಬ್ಯಾಂಕ್‌ನ ಎಲ್ಲ ಮಾಹಿತಿ ಸೇರಿ ಮೊಬೈಲ್‌ನಲ್ಲಿರುವ ಯಾವುದೇ ವೈಯಕ್ತಿಕ ಮಾಹಿತಿಯನ್ನು ಇವರು ಕದಿಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಯಾವ ಆ್ಯಪ್ ಬಳಸಬೇಕು?
ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡುವವರು ಯಾವುದೇ ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳು ಅಥವಾ ಆ್ಯಪ್ ಬದಲು, ಐಆರ್‌ಸಿಟಿಸಿಯ ಅಧಿಕೃತ ‘IRCTC Rail Connect’ ಅನ್ನೇ ಬಳಸಬೇಕು ಎಂದು ಸೂಚಿಸಿದೆ. ಇದು ಆ್ಯಂಡ್ರಾಯ್ಡ್ ಹಾಗೂ ಐಒಎಸ್ (iOS)ನಲ್ಲಿಯೂ ಲಭ್ಯವಿದೆ ಎಂದು ಮಾಹಿತಿ ನೀಡಿದೆ.
ಈ ವೆಬ್‌ಸೈಟ್ ಬಗ್ಗೆಯೂ ಇರಲಿ ಎಚ್ಚರಿಕೆ
ಆನ್‌ಲೈನ್ ವಂಚಕರು https://irctc.creditmobile.site ಎಂಬ ವೆಬ್‌ಸೈಟ್‌ಅನ್ನು ಕೂಡ ಹೊಂದಿದ್ದು, ಇದಕ್ಕೂ ಯಾರೂ ಭೇಟಿ ನೀಡಬಾರದು. ವಾಟ್ಸ್‌ಆ್ಯಪ್, ಟೆಲಿಗ್ರಾಂ, ಇ-ಮೇಲ್ ಸೇರಿ ಯಾವುದೇ ರೀತಿಯಾಗಿಯೂ ಲಿಂಕ್ ಕಳುಹಿಸಿದರೆ ಅದರ ಮೇಲೆ ಕ್ಲಿಕ್ ಮಾಡಬಾರದು. ಇದು ಮೊಬೈಲ್‌ಅನ್ನು ಕೂಡ ಹಾಳು ಮಾಡಬಹುದು ಎಂದು ತಿಳಿಸಿದೆ. ಇದಕ್ಕೂ ಮೊದಲು ಐಆರ್‌ಸಿಟಿಸಿಯ ವೆಬ್‌ಸೈಟ್ ಮೂಲಕ ಕೋಟ್ಯಂತರ ಜನರ ಮಾಹಿತಿಯನ್ನು ಸೈಬರ್ ಕ್ರಿಮಿನಲ್‌ಗಳು ಕದ್ದಿದ್ದಾರೆ ಎಂಬ ವದಂತಿ ಹರಡಿತ್ತು. ಆದರೆ, ಇದು ಸುಳ್ಳು ಎಂಬುದು ಬಳಿಕ ಬಹಿರಂಗವಾಗಿತ್ತು.
ಇದನ್ನೂ ಓದಿ: ಕರ್ನಾಟಕದಲ್ಲಿ ನೀತಿ ಸಂಹಿತೆ ಹಿನ್ನೆಲೆ ಕಾಶಿ ವಿಶೇಷ ರೈಲುಗಳ ಸಂಚಾರ ರದ್ದು, ರಾಜ್ಯ ಸರ್ಕಾರಕ್ಕೆ ಹಿನ್ನಡೆ