ನವದೆಹಲಿ: ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ (Rahul Gandhi) ಅವರ ಶೂ ಲೇಸ್ ಮಾಜಿ ಕೇಂದ್ರ ಸಚಿವರೊಬ್ಬರು ಕಟ್ಟಿದ್ದಾರೆಂದು ಆರೋಪಿಸಿ, ಅದಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದನ್ನು ಬಿಜೆಪಿ ಐಟಿ ಹೆಡ್ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವಿವಾದಕ್ಕೆ ಕಾರಣವಾಗಿದ್ದು, ”ನನ್ನ ಶೂ ಲೇಸ್ ಕಟ್ಟಿಕೊಳ್ಳುತ್ತಿದ್ದೆ. ಒಂದು ವೇಳೆ, ರಾಹುಲ್ ಗಾಂಧಿ ಅವರಿಗೆ ಕ್ಷಮೆ ಕೇಳದಿದ್ದರೆ ಕಾನೂನು ಕ್ರಮ ಎದುರಿಸಿ,” ಎಂದು ಮಾಜಿ ಸಚಿವ ಜಿತೇಂದ್ರ ಸಿಂಗ್ ಎಚ್ಚರಿಸಿದ್ದಾರೆ.
ಮಾಳವೀಯ ಟ್ವೀಟ್ ಮಾಡಿರುವ ವಿಡಿಯೋದಲ್ಲಿ, ಯಾತ್ರೆ ವೇಳೆ ಮಾಜಿ ಸಚಿವ ಜಿತೇಂದ್ರ ಸಿಂಗ್ ಅವರು, ರಾಹುಲ್ ಗಾಂಧಿ ಎದುರಾಗಿ ಕೆಳಗೆ ಬಗ್ಗೆ ಏನೋ ಕಟ್ಟುತ್ತಿರುವಂತಿದೆ. ಮಾಳವೀಯ ಮಾತ್ರ, ರಾಹುಲ್ ಗಾಂಧಿ ಅವರ ಶೂ ಲೇಸ್ ಅನ್ನು ಮಾಜಿ ಸಚಿವರು ಕಟ್ಟುತ್ತಿದ್ದಾರೆಂದು ಆರೋಪಿಸಿದ್ದಾರೆ.
”ಮಾಜಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ರಾಹುಲ್ ಗಾಂಧಿ ಮುಂದೆ ಬಗ್ಗಿ ಅವರ ಶೂ ಲೇಸ್ ಕಟ್ಟಿದ್ದಾರೆ. ದುರಹಂಕಾರಿ ಎಂಬ ಬಿರುದು ಹೊತ್ತಿರುವ ವ್ಯಕ್ತಿ(ರಾಹುಲ್ ಗಾಂಧಿ) ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದರ ಬದಲಿಗೆ ಮೊತ್ತಬ್ಬರಿಂದ ಮಾಡಿಸುತ್ತಿದ್ದಾರೆ. ಈ ಪದ್ಧತಿಯ ಕುರಿತೇ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿದ್ದದ್ದು? ತಲೆಮಾರುಗಳು ಕಳೆದರೂ ಕಾಂಗ್ರೆಸ್‌ನಲ್ಲಿ ಇಂಥದ್ದಕ್ಕೆ ಕೊರತೆ ಇಲ್ಲ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅಮಿತ್ ಮಾಳವೀಯ ಟ್ವೀಟ್ ಮಾಡುತ್ತಿದ್ದಂತೆ ಹಲವರು ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಜಿತೇಂದ್ರ ಸಿಂಗ್ ಅವರ ಶೂ ಲೇಸ್ ಬಿಚ್ಚಿರುವ ಮತ್ತು ಅವರು ತಮ್ಮದೇ ಶೂ ಲೇಸ್ ಕಟ್ಟಿಕೊಳ್ಳುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ಕೆಲವರಂತೂ ಬಿಜೆಪಿಯ ಫೇಕ್ ನ್ಯೂಸ್ ಫ್ಯಾಕ್ಟರಿಯ ಪಿತಾಮಹ ಎಂದು ಜರೆದಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಸ್ವತಃ ಜಿತೇಂದ್ರ ಸಿಂಗ್ ಅವರು ಮಾಳವೀಯ ಟ್ವೀಟ್‌ಗೆ ಪ್ರತಿಕ್ರಿಯಿಸಿ, ”ಆಡಳಿತ ಪಕ್ಷ ಬಿಜೆಪಿಯ ಐಟಿ ಹೆಡ್ ಆಗಿ ನೀವು ಮಾಡಿರುವ ಟ್ವೀಟ್ ಸಂಪೂರ್ಣವಾಗಿ ಸುಳ್ಳು ಮತ್ತು ಅವಮಾನಕಾರಿಯಾಗಿದೆ. ಸತ್ಯ ಏನೆಂದರೆ, ನನ್ನ ಮನವಿ ಮೇರೆಗೆ ರಾಹುಲ್ ಅವರು ಯಾತ್ರೆಯನ್ನು ಸ್ವಲ್ಪ ಸ್ಥಗಿತ ಮಾಡಿ, ನನ್ನ ಶೂ ಲೇಸ್ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಹಾಗಾಗಿ, ಕೂಡಲೇ ಟ್ವೀಟ್ ಡಿಲೀಟ್ ಮಾಡಿ, ರಾಹುಲ್ ಗಾಂಧಿ ಅವರಿಗೆ ಕ್ಷಮೆ ಕೇಳಬೇಕು. ಇಲ್ಲವೇ ಕಾನೂನು ಕ್ರಮ ಎದುರಿಸಿ,” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | Rahul Gandhi | ʼಇದು ನೆಹರು ಕಾಲದ ಭಾರತವಲ್ಲʼ, ಚೀನಾ, ಸೇನೆ ಬಗ್ಗೆ ರಾಹುಲ್ ಹೇಳಿಕೆಗೆ ಬಿಜೆಪಿ ನಾಯಕರ ತಿರುಗೇಟು