Site icon Vistara News

Ram Mandir: ರಾಮಮಂದಿರ ಉದ್ಘಾಟನೆಯನ್ನು ತಿಥಿಗೆ ಹೋಲಿಸಿದ ಜೆಡಿಯು ನಾಯಕ!

Kaushalendra Kumar

Is It A Shraddh? Asks JDU MP Kaushalendra Kumar On Ram Mandir Inauguration

ಪಟನಾ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರ (Ram Mandir) ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಪ್ರತಿಪಕ್ಷಗಳ ನಾಯಕರು ನೀಡುತ್ತಿರುವ ಹೇಳಿಕೆಗಳು ಭಾರಿ ವಿವಾದಕ್ಕೆ ಕಾರಣವಾಗುತ್ತಿವೆ. ರಾಮಮಂದಿರ ಲೋಕಾರ್ಪಣೆ ದಿನ ಕರ್ನಾಟಕದಲ್ಲಿ ಗೋದ್ರಾ ಮಾದರಿ ದಾಳಿಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಕಾಂಗ್ರೆಸ್‌ ನಾಯಕ ಬಿ.ಕೆ. ಹರಿಪ್ರಸಾದ್‌ ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಇನ್ನು ರಾಮ ಮಾಂಸಾಹಾರಿಯಾಗಿದ್ದ ಎಂದು ಹೇಳಿದ್ದ ಎನ್‌ಸಿಪಿ ನಾಯಕ (ಶರದ್‌ ಪವಾರ್‌ ಬಣ) ನಾಯಕ ಜಿತೇಂದ್ರ ಅವ್ಹಾದ್‌ (Jitendra Awhad) ಬಳಿಕ ಕ್ಷಮೆಯಾಚಿಸಿದ್ದಾರೆ. ಇದರ ಬೆನ್ನಲ್ಲೇ ಜೆಡಿಯು ಸಂಸದ ಕೌಶಲೇಂದ್ರ ಕುಮಾರ್‌ (Kaushalendra Kumar) ಅವರು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ತಿಥಿಗೆ ಹೋಲಿಸುವ ಮೂಲಕ ಟೀಕೆಗಳಿಗೆ ಗುರಿಯಾಗಿದ್ದಾರೆ.

ರಾಮಮಂದಿರ ಉದ್ಘಾಟನೆಗೆ ದೇಶಾದ್ಯಂತ ರಾಜಕೀಯ ನಾಯಕರು, ಗಣ್ಯರು, ಸೆಲೆಬ್ರಿಟಿಗಳಿಗೆ ಆಹ್ವಾನ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸುವ ವೇಳೆ ನಳಂದಾ ಸಂಸದ ಕೌಶಲೇಂದ್ರ ಕುಮಾರ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಏಕೆ ಆಮಂತ್ರಣ ಪತ್ರ ನೀಡಬೇಕು? ಆಮಂತ್ರಣ ಪತ್ರ ನೀಡಲು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವೇನೂ, ಯಾರದ್ದಾದರೂ ತಂದೆಯ ಶ್ರಾದ್ಧವೇ? ಇಲ್ಲ, ಯಾರದ್ದಾದರೂ ಮಗನ ಮದುವೆಯೇ” ಎಂದು ಕೌಶಲೇಂದ್ರ ಕುಮಾರ್‌ ಪ್ರಶ್ನಿಸಿದ್ದಾರೆ.

“ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡುವ ಅವಶ್ಯಕತೆಯೇ ಇಲ್ಲ. ನನಗೆ ಆಹ್ವಾನ ನೀಡದಿದ್ದರೆ ನಾನು ರಾಮಮಂದಿರಕ್ಕೆ ಭೇಟಿ ನೀಡುವುದಿಲ್ಲವೇ? ಯಾರು ಆಹ್ವಾನ ನೀಡುತ್ತಿದ್ದಾರೋ, ಅವರು ಮೂರ್ಖರು. ಅಯೋಧ್ಯೆ ಎಲ್ಲರಿಗೂ ಸಂಬಂಧಿಸಿದೆ. ಯಾರಾದರೂ ಅಯೋಧ್ಯೆಯನ್ನು ಸ್ವಂತ ಮಾಡಿಕೊಳ್ಳಬೇಕು ಎಂದು ಯತ್ನಿಸಿದರೆ ಅದು ಆಗದು. ರಾಮಮಂದಿರಕ್ಕೆ ಗಂಡ-ಹೆಂಡತಿ ಹೋಗಿ ರಾಮ-ಸೀತೆಯ ಆಶೀರ್ವಾದ ಪಡೆಯಬೇಕು. ಯಾರು ಸೀತೆಯ ಜತೆ (ಪತ್ನಿ) ಹೋಗುವುದಿಲ್ಲವೋ, ಅವರು 2024ರಲ್ಲಿ ಲಾಭ ಪಡೆಯುವುದಿಲ್ಲ” ಎಂದು ಪರೋಕ್ಷವಾಗಿ ನರೇಂದ್ರ ಮೋದಿ ಅವರನ್ನು ಟೀಕಿಸಿದರು.

ಇದನ್ನೂ ಓದಿ: ವಿಸ್ತಾರ ಅಂಕಣ: ಕೇವಲ ದರೋಡೆಕೋರರಾಗಿದ್ದರೆ ಅಯೋಧ್ಯೆ ಮೇಲೆ ಏಕೆ 76 ಬಾರಿ ದಾಳಿ ಮಾಡುತ್ತಿದ್ದರು?

ಜಿತೇಂದ್ರ ಅವ್ಹಾದ್‌ ಹೇಳಿದ್ದೇನು?

“ರಾಮ ನಮ್ಮವನು, ನಮ್ಮ ಬಹುಜನ ಸಮುದಾಯಕ್ಕೆ ಸೇರಿದವನು. ರಾಮ ಬೇಟೆಯಾಡಿ ಮಾಂಸ ತಿನ್ನುತ್ತಿದ್ದ. ಎಲ್ಲರನ್ನೂ ಸಸ್ಯಾಹಾರಿಗಳನ್ನಾಗಿ ಬದಲಾಯಿಸುತ್ತಿರುವ ಹೊತ್ತಿನಲ್ಲಿ ನಾವು ಮಟನ್‌ ತಿಂದು ರಾಮನ ಆದರ್ಶಗಳನ್ನು ಪಾಲಿಸೋಣ. ಅಷ್ಟಕ್ಕೂ ರಾಮ ಮಾಂಸಾಹಾರಿಯಾಗಿದ್ದ. ಸುಮಾರು 14 ವರ್ಷ ಕಾಡಿನಲ್ಲಿ ಕಳೆದ ರಾಮನಿಗೆ ಸಸ್ಯಾಹಾರ ಸಿಗುವುದಾದರೂ ಹೇಗೆ? ನಾನು ನಿಜ ಹೇಳುತ್ತಿದ್ದೇನೋ ಇಲ್ಲವೋ ನೀವೇ ಹೇಳಿ” ಎಂದು ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಿತೇಂದ್ರ ಅವ್ಹಾದ್‌ ಹೇಳಿದ್ದರು. ಆಕ್ರೋಶ ವ್ಯಕ್ತವಾದ ಬಳಿಕ ಅವರು ಕ್ಷಮೆಯಾಚಿಸಿದ್ದರು.

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಇದಕ್ಕಾಗಿ ರಾಮಮಂದಿರ ಟ್ರಸ್ಟ್‌ ದೇಶದ ಹಲವು ಗಣ್ಯರಿಗೆ ಆಹ್ವಾನ ನೀಡಿದೆ. ಕನ್ನಡದ ಯಶ್‌, ರಿಷಬ್‌ ಶೆಟ್ಟಿ ಸೇರಿ ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌, ರಣಬೀರ್‌ ಕಪೂರ್‌, ಮಾಧುರಿ ದೀಕ್ಷಿತ್‌, ಅಕ್ಷಯ್‌ ಕುಮಾರ್‌, ಆಲಿಯಾ ಭಟ್‌, ಆಯುಷ್ಮಾನ್‌ ಕುರಾನ, ಅಜಯ್‌ ದೇವಗನ್‌, ಅನುಪಮ್‌ ಖೇರ್‌, ಸಂಜಯ್‌ ಲೀಲಾ ಬನ್ಸಾಲಿ ಸೇರಿ ಹಲವು ನಟ-ನಟಿಯರು, ನಿರ್ದೇಶಕರಿಗೆ ಆಹ್ವಾನಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version