Site icon Vistara News

ಸೇನೆಗೆ ಸೇರಲು ಬಯಸುವವರು ದೇಶದ ಸಾರ್ವಜನಿಕ ಆಸ್ತಿಗಳನ್ನು ನಾಶಪಡಿಸುವುದು ಸರಿಯೇ?

protest

ನವದೆಹಲಿ: ಸೇನೆಯಲ್ಲಿ ಯೋಧರಾಗಿ ಸೇರಿಕೊಳ್ಳಬೇಕು ಎಂದು ಬಯಸುವವರು ಅಗ್ನಿಪಥ್‌ ನೇಮಕಾತಿ ಯೋಜನೆಯನ್ನು ವಿರೋಧಿಸಿ, ದೇಶದ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸುವ ಹಿಂಸಾಚಾರ ನಡೆಸುವುದು ಎಷ್ಟು ಸರಿ ಎಂಬ ಬಿಸಿಬಿಸಿ ಚರ್ಚೆ ಇದೀಗ ಜಾಲತಾಣಗಳಲ್ಲಿ, ಸಾಮಾಜಿಕ, ರಾಜಕೀಯ ಮತ್ತು ಚಿಂತಕರ ಚಾವಡಿಯಲ್ಲಿ ನಡೆಯುತ್ತಿದೆ.

ಸೇನೆಯಲ್ಲಿ ಶಿಸ್ತಿಗೆ ಎಲ್ಲಿಲ್ಲದ ಮಹತ್ವ ಇರುತ್ತದೆ. ಸೇನೆಯ ಕರ್ತವ್ಯ ಎಂದರೆ ದೇಶ ಭಕ್ತಿ, ಶಿಸ್ತು ಸಂಯಮದ ಸಂಸ್ಕಾರ, ಶಿಷ್ಟಾಚಾರಕ್ಕೆ ಮೊದಲ ಮಣೆ. ಅಂಥ ಸ್ವಭಾವ ಇರದಿದ್ದರೆ ಸೇನೆಯಲ್ಲಿ ಇರಲು ಸಾಧ್ಯವೇ ಇಲ್ಲ. ಹೀಗಿರುವಾಗ, ತಮ್ಮ ಬೇಡಿಕೆಗೋಸ್ಕರ ಕಾನೂನು ಕೈಗೆತ್ತಿಕೊಂಡು ರೈಲ್ವೆ, ರಸ್ತೆ, ಸರ್ಕಾರಿ ಕಚೇರಿ, ವಾಹನಗಳಿಗೆ ಬೆಂಕಿ ಇಡುವ ಗಲಭೆಕೋರರು, ಇಂಥ ಮನಸ್ಥಿತಿಯ ಮಂದಿ ಸೇನೆಯಲ್ಲಿ ಸೇರ್ಪಡೆಯಾಗಲು ಬಯಸಿದರೆ ಹೇಗೆ? ಎಲ್ಲದಕ್ಕೂ ಹಿಂಸಾಚಾರವೇ ಪರಿಹಾರವೇ? ಎನ್ನುತ್ತಾರೆ ಚಿಂತಕರು.

ಕೆಲ ರಾಜ್ಯಗಳಲ್ಲಿ ಯಾರೂ ನಿರೀಕ್ಷಿಸದಷ್ಟು ದೊಡ್ಡ ಪ್ರಮಾಣದಲ್ಲಿ ಅಗ್ನಿಪಥ್‌ ಯೋಜನೆ ವಿರೋಧಿಸಿ ಹಿಂಸಾಚಾರ ಸಂಭವಿಸಿದೆ. ಬಿಹಾರದಲ್ಲಿ ರೈಲು ಬೋಗಿಗಳಿಗೆ ಬೆಂಕಿ ಹಚ್ಚಲಾಗಿದೆ. ಸರ್ಕಾರಿ ವಾಹನಗಳನ್ನು ಧ್ವಂಸ ಮಾಡಲಾಗಿದೆ. ರಸ್ತೆ, ರೈಲ್ವೆ ಹಳಿ ಇತ್ಯಾದಿ ಸಾರ್ವಜನಿಕ ಪ್ರದೇಶಗಳಲ್ಲಿ ಟೈರ್‌ ಸುಡಲಾಗಿದೆ. ಬಿಹಾರ, ಪಂಜಾಬ್‌, ಉತ್ತರಪ್ರದೇಶ. ತೆಲಂಗಾಣದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ.

ಕೆಲವರು ಅಗ್ನಿಪಥ್‌ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯನ್ನು ಬೆಂಬಲಿಸಿದರೆ, ಹಲವಾರು ಮಂದಿ ಇದನ್ನು ತಪ್ಪು ಎಂದು ದನಿ ಎತ್ತಿದ್ದಾರೆ.

” ನೀವು ಸಾರ್ವಜನಿಕ ಆಸ್ತಿಗಳನ್ನು ನಾಶಪಡಿಸುವ ಮುನ್ನ, ನೀವು ಸೇನೆಗೆ ಸೇರಲು ಬಯಸುತ್ತಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿʼʼ ಎಂದು ರೋಹನ್‌ ಪಾಂಡ್ಯ ಎಂಬುವರು ಟ್ವೀಟ್‌ ಮಾಡಿದ್ದಾರೆ. ಆದರೆ ಸರ್ಕಾರಕ್ಕೆ ಸಮಸ್ಯೆ ಏನು ಎಂಬುದು ಅರ್ಥವಾಗಬೇಕಿದ್ದರೆ ಹಿಂಸಾತ್ಮಕ ಪ್ರತಿಭಟನೆಯ ಕಾವು ಅಗತ್ಯ ಎನ್ನುತ್ತಾರೆ ಮತ್ತೊಬ್ಬರು. ಅದಕ್ಕೆ ಪ್ರತಿಯಾಗಿ ಇನ್ನೊಬ್ಬರು ” ಪ್ರತಿಭಟನೆಯಲ್ಲಿ ಹಿಂಸೆಗೆ ಇಳಿದವರು ನಿಜಕ್ಕೂ ಸೇನೆಗೆ ಸೇರಲು ಬಯಸುತ್ತಿರುವವರಲ್ಲʼʼ ಎನ್ನುತ್ತಾರೆ.

ಗಲಭೆಕೋರರಿಗೆ ಎಚ್ಚರಿಕೆ

“ಯಾವುದೇ ಅಭ್ಯರ್ಥಿ ಸೇನೆಯನ್ನು ಸೇರಬೇಕು ಎಂದರೆ ಪೊಲೀಸ್‌ ಕ್ಲಿಯರೆನ್ಸ್‌ ಅಗತ್ಯವಾಗುತ್ತದೆ. ಈಗ ದೊಂಬಿಯಲ್ಲಿ ಭಾಗವಹಿಸಿದವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿದ್ದರೆ ಅವರಿಗೆ ಕ್ಲಿಯರೆನ್ಸ್‌ ಕೊಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರಿಗೆ ನೇಮಕಾತಿಯಲ್ಲಿ ಅವಕಾಶ ದೊರೆಯದೆ ಹೋಗಬಹುದು” ಎಂದು  ವಾಯು ಸೇನಾ ಮುಖ್ಯಸ್ಥ ವಿ.ಆರ್ ಚೌಧರಿ ಹೇಳಿದ್ದಾರೆ.

Exit mobile version