ಬೆಂಗಳೂರು: ಭಾನುವಾರ ಸಂಭವಿಸಿದ ಮೋರ್ಬಿ ಸೇತುವೆ ಕುಸಿತಕ್ಕೆ (Morbi Bridge Collapse) ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ. ಈ ಹಿಂದೆ, ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಹೊತ್ತಿನಲ್ಲಿ ನಿರ್ಮಾಣದ ಹಂತದ ಓವರ್ ಬ್ರಿಡ್ಜ್ ಕುಸಿದಿತ್ತು. ಆಗ ಮೋದಿ ಅವರು ಇದು ದೇವರೇ ಕಳುಹಿಸಿದ ಸಂದೇಶವಾಗಿದೆ ಎಂದಿದ್ದರು. ಸೇತುವೆ ಕುಸಿತಕ್ಕೆ ಮಮತಾ ಸರ್ಕಾರದ ವೈಫಲ್ಯ ಕಾರಣ ಎಂಬಂತೆ ಮಾತನಾಡಿದ್ದರು.
ಸಿದ್ದರಾಮಯ್ಯ ಅವರು, ಪ್ರಧಾನಿ ಅವರ ಅಂದಿನ ಭಾಷಣ ವಿಡಿಯೋವನ್ನು ಬಳಸಿಕೊಂಡು, “ಚುನಾವಣಾ ಕಾಲದಲ್ಲಿ ಕೊಲ್ಕೊತಾದ ಮೇಲುಸೇತುವೆ ಕುಸಿದಿದ್ದು ಬಂಗಾಳಕ್ಕೆ ದೇವರು ಕಳಿಸಿದ್ದ ಸಂದೇಶ ಎನ್ನುವುದಾದರೆ, ಈಗ ಚುನಾವಣಾ ಕಾಲದಲ್ಲಿ ಗುಜರಾತ್ ತೂಗು ಸೇತುವೆ ಕುಸಿದಿರುವುದು ದೇವರು ಯಾರಿಗೆ ನೀಡಿರುವ ಸಂದೇಶ @narendramodi ಅವರೇ?’ ಎಂದು ಪ್ರಶ್ನಿಸಿದ್ದಾರೆ. ವರ್ಷಾಂತ್ಯಕ್ಕೆ ಗುಜರಾತ್‌ನಲ್ಲೂ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ಇಬ್ಬರು ಅಧಿಕಾರಿಗಳ ಬಂಧನ
ಮತ್ತೊಂದೆಡೆ, ಭಾನುವಾರ ಸಂಭವಿಸಿದ ಮೋರ್ಬಿ ಬ್ರಿಡ್ಜ್ ಕುಸಿತಕ್ಕೆ ಸಂಬಂಧಿಸಿದಂತೆ, ಸೇತುವೆ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಗುಜರಾತ್ ಮೂಲದ ಒರೆವಾ ಗ್ರೂಪ್‌ನ ಇಬ್ಬರು ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೇತುವೆ ಜೀರ್ಣೋದ್ಧಾರವನ್ನು ಒರೆವಾ ಕಂಪನಿಗೆ ವಹಿಸಲಾಗಿತ್ತು. ಈ ದುರ್ಘಟನೆಯಲ್ಲಿ 140ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಂಧಿತ ಇಬ್ಬರು ಅಧಿಕಾರಿಗಳು ಬ್ರಿಡ್ಜ್ ರಿಪೇರಿ ಜವಾಬ್ದಾರಿಯನ್ನು ಹೊತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ | Morbi Bridge Collapse | ಎಂಜಿನಿಯರಿಂಗ್ ಅದ್ಭುತ ಮೋರ್ಬಿ ಸೇತುವೆ ನಿರ್ಮಾಣ ಹಿಂದಿನ ಕತೆ ಕೌತುಕ