Site icon Vistara News

Cong Prez Poll | ಸ್ನೇಕ್​ ಬೋಟ್​ ರೇಸ್​​ನಲ್ಲಿ ರಾಹುಲ್ ಗಾಂಧಿ ಮಸ್ತಿ; ಕಾಂಗ್ರೆಸ್​ ಅಧ್ಯಕ್ಷ ಗಾದಿಗ್ಯಾರು ಅಭ್ಯರ್ಥಿ?

Rahul Gandhi Congress

ನವ ದೆಹಲಿ: ಕಾಂಗ್ರೆಸ್​ ಅಧ್ಯಕ್ಷ ಗಾದಿಗೆ ಚುನಾವಣೆ ಸಮೀಪಿಸುತ್ತಿದೆ. ಸೆಪ್ಟೆಂಬರ್​ 24ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅಕ್ಟೋಬರ್ 17ರಂದು ಚುನಾವಣೆ ನಡೆದು, ಅಕ್ಟೋಬರ್​ 19ಕ್ಕೆ ಅಧ್ಯಕ್ಷ ಯಾರೆಂಬುದು ಗೊತ್ತಾಗಲಿದೆ. ರಾಹುಲ್ ಗಾಂಧಿಯನ್ನೇ ಮತ್ತೊಮ್ಮೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಬೇಕು ಎಂದು ಈಗಾಗಲೇ ಏಳು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ನಿರ್ಣಯವನ್ನೂ ಅಂಗೀಕರಿಸಿದೆ. ಇಷ್ಟೆಲ್ಲದರ ಮಧ್ಯೆ ಕಾಂಗ್ರೆಸ್​ಗೆ ಮುಂದಿನ ಅಧ್ಯಕ್ಷರನ್ನಾಗಿ ಶಶಿ ತರೂರ್​ ಅವರನ್ನು ನೇಮಕ ಮಾಡಲು ತೆರೆಮರೆಯಲ್ಲಿ ಸಿದ್ಧತೆ ನಡೆದಿದೆ. ಸೋನಿಯಾ ಗಾಂಧಿಯೂ ಇದಕ್ಕೆ ಅಸ್ತು ಎಂದಿದ್ದಾರೆ ಎಂಬುದೊಂದು ಮಾಹಿತಿಯೂ ಲಭ್ಯವಾಗಿದೆ.

ಸ್ನೇಕ್​ ಬೋಟ್​ ರೇಸ್​
‘ನೀವು ಈ ಸಲ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೀರಾ?’ ಎಂದು ಪ್ರಶ್ನಿಸಿದ್ದಕ್ಕೆ ರಾಹುಲ್ ಗಾಂಧಿ ಸರಿಯಾಗಿ ಉತ್ತರ ನೀಡಿಲ್ಲ. ಚುನಾವಣೆ ದಿನ ಗೊತ್ತಾಗುತ್ತದೆ ನಾನು ಸ್ಪರ್ಧಿಸಿದ್ದೇನಾ? ಇಲ್ಲವಾ? ಎಂಬುದು ಎಂದಷ್ಟೇ ಹೇಳಿದ್ದರು. ಅವರು ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ರೇಸ್​​ನಲ್ಲಿದ್ದಾರೋ, ಇಲ್ಲವೋ ಗೊತ್ತಿಲ್ಲ, ಆದರೆ ಕೇರಳದಲ್ಲಿ ಸ್ನೇಕ್​ ಬೋಟ್​ ರೇಸ್​ನಲ್ಲಂತೂ ಭಾಗವಹಿಸಿ ಭರ್ಜರಿಯಾಗಿ ಆಟವಾಗಿದ್ದಾರೆ. ಭಾರತ್ ಜೋಡೋ ಯಾತ್ರೆಯ ಕಾಲ್ನಡಿಗೆಯಲ್ಲಿ ತೊಡಗಿರುವ ರಾಹುಲ್​ ಗಾಂಧಿ ಸೆ.19ರಂದು ಕೇರಳದ ಅಲಪ್ಪುಳದಲ್ಲಿರುವ ವಡಕಲ್​ ಬೀಚ್​​ನಲ್ಲಿ ಹಾವು ದೋಣಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ‘ನಾವೆಲ್ಲರೂ ಸಾಮರಸ್ಯದಿಂದ ಒಟ್ಟಾಗಿ ಕೆಲಸ ಮಾಡಿದರೆ, ಏನನ್ನು ಬೇಕಾದರೂ ಸಾಧಿಸಬಹುದು’ ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಕಾಂಗ್ರೆಸ್​ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯ ಬಗ್ಗೆ ಬಿಸಿಬಿಸಿ ಬೆಳವಣಿಗೆಗಳು ಆಗುತ್ತಿರುವ ಹೊತ್ತಲ್ಲಿ, ರಾಹುಲ್ ಗಾಂಧಿ ತಣ್ಣನೆಯ ನೀರಲ್ಲಿ ದೋಣಿಯಾಟ ಆಡಿದ್ದಾರೆ ಎಂಬ ಟೀಕೆಗಳೂ ವ್ಯಕ್ತವಾಗುತ್ತಿವೆ.

ಒಂದೆಡೆ ಶಶಿ ತರೂರ್​ರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಮೇಡಂ ಸೋನಿಯಾ ‘ಒಕೆ’ ಎಂದಿದ್ದರೆ, ಇತ್ತ ಭಾರತ್​ ಜೋಡೋ ಯಾತ್ರೆಯಲ್ಲಿ ತೊಡಗಿರುವ ಕಾಂಗ್ರೆಸ್​ ನಾಯಕರೆಲ್ಲ ರಾಜಸ್ಥಾನ ಮುಖ್ಯಮಂತ್ರಿ ಆಶೋಕ್​ ಗೆಹ್ಲೋಟ್​ಗೆ ಮಣೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಅಶೋಕ್​ ಗೆಹ್ಲೋಟ್​ ಕಾಂಗ್ರೆಸ್​​ ಮುಖ್ಯಸ್ಥನ ಸ್ಥಾನಕ್ಕೆ ಏರಲಿ ಎಂಬುದು ಅವರ ಅಭಿಪ್ರಾಯ. ಆದರೆ ಸ್ವತಃ ಅಶೋಕ್​ ಗೆಹ್ಲೋಟ್​ ‘ರಾಹುಲ್​ ಗಾಂಧಿಯೇ ಮತ್ತೆ ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ಏರಲಿ’ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಾಮಪತ್ರ ಸಲ್ಲಿಕೆಗೆ ಇನ್ನು ನಾಲ್ಕೇ ದಿನ ಬಾಕಿ ಇದ್ದರೂ ಯಾರೆಲ್ಲ ಸ್ಪರ್ಧಿಸಬಹುದು ಎಂಬುದು ಇನ್ನೂ ಸ್ಪಷ್ಟವಾದಂತಿಲ್ಲ.

ಅವಿರೋಧ ಆಯ್ಕೆ ಸಾಧ್ಯವಾಗುವಂತಿಲ್ಲ
ಕಾಂಗ್ರೆಸ್​ ಪಕ್ಷದಲ್ಲಿ ಪರಿಸ್ಥಿತಿಯೇ ಸರಿಯಿಲ್ಲ. ಇಷ್ಟು ವರ್ಷ ಕಾಂಗ್ರೆಸ್​ ಅಧ್ಯಕ್ಷರು ಎಂದರೆ ಗಾಂಧಿ ಕುಟುಂಬದವರೇ ಎಂದಾಗುತ್ತಿತ್ತು. ಹೀಗಾಗಿ ಅದೇ ಕುಟುಂಬದ ಒಬ್ಬರು ಆ ಸ್ಥಾನಕ್ಕೆ ಏರುತ್ತಿದ್ದರು. ಆದರೆ ಈ ಸಲ ಗಾಂಧಿ ಕುಟುಂಬದ ಹೊರತಾದ ಮುಖಂಡನೊಬ್ಬ ಅಧ್ಯಕ್ಷ ಸ್ಥಾನಕ್ಕೆ ಏರುವ ಸಾಧ್ಯತೆಯೂ ನಿಚ್ಛಳವಾಗಿದೆ. ಆದರೆ ಅಷ್ಟೇ ಗೊಂದಲವೂ ಇದೆ. ಇಡೀ ಪಕ್ಷ ಒಬ್ಬ ನಾಯಕನನ್ನು ಒಪ್ಪಿ, ಅಧ್ಯಕ್ಷ ಸ್ಥಾನಕ್ಕೆ ಏರಿಸುವ ಲಕ್ಷಣವೇ ಇಲ್ಲ.

ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಿಗೆ ಸಿಗಲಿದೆ ಮತದಾರರ ಪಟ್ಟಿ; 5 ಎಂಪಿಗಳ ಪತ್ರದ ಬೆನ್ನಲ್ಲೇ ಬದಲಾವಣೆ​

Exit mobile version