Site icon Vistara News

Rahul Gandhi: ರಾಹುಲ್‌ ಗಾಂಧಿ ಶಿಕ್ಷೆಗೆ ಸುಪ್ರೀಂ ತಡೆ; ಅವರೀಗ ಸಂಸತ್ತಿಗೆ ತೆರಳಬಹುದೆ?

Rahul Gandhi

Notification out, Rahul Gandhi returns as MP after Supreme Court relief

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಇದರಿಂದ ಕಾಂಗ್ರೆಸ್‌ ನಾಯಕ ನಿರಾಳರಾಗಿದ್ದಾರೆ. ಮೋದಿ ಉಪನಾಮ ಕುರಿತು ಅವರು ನೀಡಿದ ಹೇಳಿಕೆ ಉಲ್ಲೇಖಿಸಿ ದಾಖಲಾದ ಮಾನಹಾನಿ ಪ್ರಕರಣದಲ್ಲಿ ಸೂರತ್‌ ನ್ಯಾಯಾಲಯದ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ ಕಾರಣ ಕಾಂಗ್ರೆಸ್‌ ಪಾಳಯದಲ್ಲಿ ಎಲ್ಲಿಲ್ಲದ ಸಂತಸ ಮೂಡಿದೆ. ಇದರ ಬೆನ್ನಲ್ಲೇ, ರಾಹುಲ್‌ ಗಾಂಧಿ (Rahul Gandhi) ಅವರು ಯಾವಾಗಿನಿಂದ ಸಂಸತ್‌ಗೆ ತೆರಳುತ್ತಾರೆ ಎಂಬ ಪ್ರಶ್ನೆ ಮೂಡಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸೋಮವಾರದಿಂದಲೇ (ಆಗಸ್ಟ್‌ 7) ಸಂಸತ್‌ ಅಧಿವೇಶನಕ್ಕೆ ತೆರಳಬಹುದು ಎಂದು ತಜ್ಞರು ಹೇಳಿದ್ದಾರೆ. ಸೂರತ್‌ ನ್ಯಾಯಾಲಯವು ತೀರ್ಪು ನೀಡಿದ ಬಳಿಕ ರಾಹುಲ್‌ ಗಾಂಧಿ ಅವರನ್ನು ಅನರ್ಹಗೊಳಿಸಿದ ಲೋಕಸಭೆ ಸಚಿವಾಲಯವು ಈಗ ಅನರ್ಹಗೊಳಿಸಿದ ನೋಟಿಸ್‌ಅನ್ನು ರದ್ದುಗೊಳಿಸಿ ಮತ್ತೊಂದು ನೋಟಿಸ್‌ ಹೊರಡಿಸಬೇಕು. ಇದಾದ ಬಳಿಕ ರಾಹುಲ್‌ ಗಾಂಧಿ ಅವರ ಅನರ್ಹತೆ ರದ್ದಾಗಲಿದ್ದು, ಅವರು ಸಂಸತ್‌ ಪ್ರವೇಶಿಸಬಹುದು ಎಂದು ತಿಳಿದುಬಂದಿದೆ. ಇನ್ನು ಕಾಂಗ್ರೆಸ್‌ ನಾಯಕರು ಕೂಡ ಕೂಡಲೇ ಅನರ್ಹತೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಸತ್ಯಮೇವ ಜಯತೆ ಎಂದ ಪ್ರಿಯಾಂಕಾ ವಾದ್ರಾ

ರಾಹುಲ್‌ ಗಾಂಧಿ ಅವರಿಗೆ ನೀಡಿದ ಶಿಕ್ಷೆಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಪ್ರತಿಕ್ರಿಯಿಸಿದ್ದು, ಸತ್ಯಮೇವ ಜಯತೆ ಎಂದಿದ್ದಾರೆ. ಅಲ್ಲದೆ ಅವರು ಗೌತಮ ಬುದ್ಧನ ಹೇಳಿಕೆಯೊಂದನ್ನು ಉಲ್ಲೇಖಿಸಿದ್ದಾರೆ. “ಮೂರು ವಸ್ತುಗಳನ್ನು ಮಾತ್ರ ಬಚ್ಚಿಡಲು ಸಾಧ್ಯವಿಲ್ಲ. ಸೂರ್ಯ, ಚಂದ್ರ ಹಾಗೂ ಸತ್ಯವೇ ಆ ಮೂರು ವಸ್ತುಗಳು” ಎಂಬ ಬುದ್ಧನ ಹೇಳಿಕೆಯನ್ನು ಪ್ರಿಯಾಂಕಾ ವಾದ್ರಾ ಟ್ವೀಟ್‌ ಮಾಡಿದ್ದಾರೆ. ಹಾಗೆಯೇ, ಕಾಂಗ್ರೆಸ್‌ ನಾಯಕರಾದ ಅಧೀರ್‌ ರಂಜನ್‌ ಚೌಧರಿ ಸೇರಿ ಹಲವರು ಕೋರ್ಟ್‌ ತೀರ್ಪನ್ನು ಸ್ವಾಗತಿಸಿದ್ದಾರೆ.

ಮಾನಹಾನಿ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಅವರನ್ನು ದೋಷಿ ಎಂಬುದಾಗಿ ಘೋಷಿಸಿದ ಸೂರತ್‌ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿದ್ದ ಗುಜರಾತ್‌ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ರಾಹುಲ್‌ ಗಾಂಧಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಶಿಕ್ಷೆಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. “ರಾಹುಲ್‌ ಗಾಂಧಿ ಅವರಿಗೆ ಗರಿಷ್ಠ ಶಿಕ್ಷೆ ವಿಧಿಸಲು ಅಧೀನ ನ್ಯಾಯಾಲಯವು ಸರಿಯಾದ ಕಾರಣ ನೀಡಿಲ್ಲ. ಹಾಗಾಗಿ, ಶಿಕ್ಷೆಗೆ ತಡೆಯಾಜ್ಞೆ ನೀಡಲಾಗುತ್ತಿದೆ” ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತು.

ಇದನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್;‌ ಮಾನಹಾನಿ ಕೇಸ್‌ ಶಿಕ್ಷೆಗೆ ತಡೆ, ಕೈ ನಾಯಕನಿಗೆ ಮರಳಿದ ಸಂಸದ ಸ್ಥಾನ

ಕರ್ನಾಟಕದ ಕೋಲಾರದಲ್ಲಿ 2019ರಲ್ಲಿ ಚುನಾವಣೆ ರ‍್ಯಾಲಿ ನಡೆಸಿದ್ದ ರಾಹುಲ್‌ ಗಾಂಧಿ, ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ, “ಮೋದಿ ಉಪನಾಮ ಹೊಂದಿರುವ ಎಲ್ಲರೂ ಏಕೆ ಕಳ್ಳರಾಗಿದ್ದಾರೆ” ಎಂದು ಹೇಳಿದ್ದರು. ರಾಹುಲ್‌ ಗಾಂಧಿ ಅವರು ಮೋದಿ ಉಪನಾಮ ಹೊಂದಿರುವ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಗುಜರಾತ್‌ ಬಿಜೆಪಿ ನಾಯಕ ಪೂರ್ಣೇಶ್‌ ಮೋದಿ ಅವರು ಮಾನಹಾನಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ಬಳಿಕ ಸೂರತ್‌ ನ್ಯಾಯಾಲಯವು, ರಾಹುಲ್‌ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿ, ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

Exit mobile version