ನವದೆಹಲಿ: ಬಿಜೆಪಿ ಸಂಸದ ವರುಣ್ ಗಾಂಧಿ (Varun Gandhi) ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ಬಿಜೆಪಿ ಸರ್ಕಾರದ ನೀತಿಗಳನ್ನು ಮೇಲಿಂದ ಮೇಲೆ ಅವರು ಟೀಕಿಸುತ್ತಲೇ ಬಂದಿದ್ದಾರೆ. ಆದರೆ, ಅವರು ಇತ್ತೀಚೆಗೆ ಸಾರ್ವಜನಿಕ ಸಮಾರಂಭದಲ್ಲಿ ಆಡಿದ ಮಾತುಗಳು, ಕಾಂಗ್ರೆಸ್ ಸೇರುವ ಸುದ್ದಿಗೆ ಬಲ ನೀಡುತ್ತಿವೆ.
ಎರಡು ವರ್ಷಗಳಿಂದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಅವರ ಲೇಖನಗಳಲ್ಲಿ ಬಿಜೆಪಿಯೊಂದಿಗಿನ ಅವರ ಭ್ರಮನಿರಸನವು ಸ್ಪಷ್ಟವಾಗಿ ಕಾಣುತ್ತಿದೆ. ಇತ್ತೀಚೆಗೆ ಸಾರ್ವಜನಿಕ ಸಭೆಯೊಂದರಲ್ಲಿ ಅವರಾಡಿದ ಮಾತುಗಳು, ಅವರು ಕಾಂಗ್ರೆಸ್ ಕಡೆಗೆ ವಾಲುತ್ತಿರುವುದು ಸ್ಪಷ್ಟವಾಗುತ್ತಿದೆ.
ನಾನು ನೆಹರು ಅಥವಾ ಕಾಂಗ್ರೆಸ್ ವಿರೋಧಿಯಲ್ಲ. ನಮ್ಮ ರಾಜಕಾರಣವು ದ್ವೇಷವನ್ನು ಪ್ರಚೋದಿಸುವ ಬದಲು ಜನರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿರಬೇಕು. ಇಂದು, ಕೇವಲ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಮತಗಳನ್ನು ಗಳಿಸುತ್ತಿರುವ ಜನರು ಉದ್ಯೋಗ, ಶಿಕ್ಷಣ ಅಥವಾ ಆರೋಗ್ಯದಂತಹ ಗಂಭೀರ ವಿಷಯಗಳಲ್ಲಿ ಏನು ಮಾಡುತ್ತಿದ್ದಾರೆ ಎಂದು ಕೇಳಬೇಕಾಗಿದೆ. ಜನರನ್ನು ತುಳಿಯುವ ಅಥವಾ ದಮನ ಮಾಡುವ ರಾಜಕೀಯವನ್ನು ನಾವು ಮಾಡಬಾರದು. ನಾವು ಜನರನ್ನು ಮೇಲಕ್ಕೆತ್ತುವ ರಾಜಕೀಯವನ್ನು ಮಾಡಬೇಕಾಗಿದೆ ಎಂದು ಹೇಳಿದ್ದರು.
ಅವರ ಈ ಮಾತುಗಳು ಬಹುಶಃ ಅವರು ಕಾಂಗ್ರೆಸ್ ಪಕ್ಷವನ್ನು ಸೇರಬಹುದು ಎಂದು ಚರ್ಚೆಗಳಿಗೆ ಕಾರಣವಾಗಿದೆ. ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದಿಂದ ಅವರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಇವರ ತಾಯಿ ಮನೇಕಾ ಗಾಂಧಿ ಅವರು ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ | ಉಚಿತ ಆಮಿಷ ನೀಡಿದವರು ಯಾರು? ಪ್ರಧಾನಿಯ ಕಾಲೆಳೆದ ಬಿಜೆಪಿ ಸಂಸದ ವರುಣ್ ಗಾಂಧಿ