Site icon Vistara News

West Bengal: ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ‘ಐಎಸ್ಎಫ್’ ಹೊಸ ತಲೆನೋವು!

Mamata Banerjee

Who knows if this government will last even 15 days; Says Mamata Banerjee

ನವದೆಹಲಿ: ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು (Trinamool Congress Party) ಮೂರು ಹಂತದ ಗ್ರಾಮೀಣ ಪಂಚಾಯ್ತಿ ಚುನಾವಣೆಯಲ್ಲಿ (West Bengal rural polls) ಅಭೂತಪೂರ್ವ ಗೆಲುವು ಸಾಧಿಸಿದೆ. ಅದರಲ್ಲೇನೂ ಅನುಮಾನವಿಲ್ಲ. ಹಾಗಿದ್ದೂ, ಟಿಎಂಸಿ (TMC) ಹೊಸ ತಲೆನೋವು ಶುರುವಾಗಿದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಇಂಡಿಯನ್ ಸೆಕ್ಯುಲರ್ ಫ್ರಂಟ್(Indian Secular Front – ISF) ಟಿಎಂಸಿ ಮತಗಳಿಗೆ ಕನ್ನ ಹಾಕಿದೆ.

2021ರ ಪಶ್ಚಿಮ ಬಂಗಾಳ ವಿಧಾಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಐಎಸ್ಎಫ್ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈಗ ಹಿಂಸಾಚಾರ ಪೀಡಿತ ಮತ್ತು ಸಂಘರ್ಷ ಸಾಮಾನ್ಯವಾಗಿರುವ ದಕ್ಷಿಣ 24 ಪರಗಣ ಜಿಲ್ಲೆಯ ತನ್ನ ಭದ್ರಕೋಟೆಯಾದ ಭಂಗಾರ್‌ನಲ್ಲಿ ಗ್ರಾಮ ಪಂಚಾಯ್ತಿ ಸ್ಥಾನಗಳನ್ನು ಗೆದ್ದುಕೊಂಡಿದೆ. ಜತೆಗೆ ಉತ್ತರ 24 ಪರಗಣಗಳು, ಹೌರಾ ಮತ್ತು ಇತರ ಸಮೀಪದ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯ್ತಿ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಹಾಗೆ ನೋಡಿದರೆ, ಪಂಚಾಯ್ತಿ ಇಲೆಕ್ಷನ್ ಫಲಿತಾಂಶಗಳ ಸಂಪೂರ್ಣ ಮಾಹಿತಿಯನ್ನು ಇನ್ನಷ್ಟೇ ರಾಜ್ಯ ಚುನಾವಣ ಆಯೋಗವು ಪ್ರಕಟಿಸಬೇಕಿದೆ. ಇದೇ ಮೊದಲ ಬಾರಿಗೆ ಗ್ರಾಮೀಣ ಪಂಚಾಯ್ತಿಗಳಲ್ಲಿ ಸ್ಪರ್ಧಿಸಿದ್ದೇವೆ. ಸುಮಾರು 1300 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳಿದ್ದರು. ರಾಜ್ಯದ ವಿವಿಧೆಡೆ ನಾವು ಚುನಾವಣೆ ಗೆದ್ದಿದ್ದೇವೆ ಎಂದು ಐಎಸ್ಎಫ್ ಹೇಳಿಕೊಂಡಿದೆ.

ಪಂಚಾಯ್ತಿ ಚುನಾವಣೆಗೆ ನಾಮಿನೇಷನ್ ಶುರುವಾದ ಕೂಡಲೇ ಭಂಗಾರ್‌ನಲ್ಲಿ ಟಿಎಂಸಿ ಮತ್ತು ಐಎಸ್ಎಫ್ ಮಧ್ಯೆ ಸಂಘರ್ಷ ಶುರುವಾಯಿತು. ಹಿಂಸಾತ್ಮಾಕ ಘಟನೆಗಳು ಸಂಭವಿಸಿದವು. ಇದು ಟಿಎಂಸಿಯ ಆತಂಕಕ್ಕೆ ಕಾರಣವಾದರೆ, ಐಎಸ್ಎಫ್ ಏಳಿಗೆಯನ್ನು ಪ್ರತಿನಿಧಿಸುತ್ತದೆ. ಚುನಾವಣೆಯ ಹೊತ್ತಿಗೆ ಭಂಗಾರ್‌ನಲ್ಲಿ ಚುನಾವಣಾ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 6ಕ್ಕೆ ಏರಿಕೆಯಾಗಿತ್ತು.

ಈ ಸುದ್ದಿಯನ್ನೂ ಓದಿ: ಪಶ್ಚಿಮ ಬಂಗಾಳ ಪಂಚಾಯ್ತಿ ಎಲೆಕ್ಷನ್‌ನಲ್ಲಿ ಟಿಎಂಸಿಗೆ ಭರ್ಜರಿ ಜಯ! ಆದ್ರೆ ಕಂಡಿಷನ್ಸ್ ಅಪ್ಲೈ ಎಂದ ಹೈಕೋರ್ಟ್

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಮುಸ್ಲಿಮರ ಸಂಪೂರ್ಣ ಬೆಂಬಲವಿದೆ. ಕೋಲ್ಕೊತಾದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಭಂಗಾರ್‌ ಮುಸ್ಲಿಮ್ ಬಾಹುಳ್ಯದ ಪ್ರದೇಶವಾಗಿದೆ. ಹಾಗಾಗಿ, ಭಂಗಾರ್ ಯಾವಾಗಲೂ ಟಿಎಂಸಿಗೆ ಮೊದಲ ಆದ್ಯತೆಯಾಗಿರುತ್ತದೆ. ಆದರೀಗ ಟಿಎಂಸಿಗೆ ಐಎಸ್ಎಫ್ ಹೊಡೆತ ನೀಡಲಾರಂಭಿಸಿದೆ.

2021ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಫರ್ಫುರಾ ಷರೀಫ್ ಕ್ಷೇತ್ರದ ಗುರು ಪೀರ್ಜಾದ್ ಅಬ್ಬಾಸ್ ಸಿದ್ದಿಕಿ ಅವರು ಇಂಡಿಯನ್ ಸೆಕ್ಯುಲರ್ ಫ್ರಂಟ್ ಶುರು ಮಾಡಿದರು. ಪಶ್ಚಿಮ ಬಂಗಾಳದಲ್ಲಿನ ಮುಸ್ಲಿಮರು ಮತ್ತು ದಲಿತರಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದಾಗಿ ಐಎಸ್ಎಫ್ ಶುರು ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಐಎಸ್ಎಫ್ ಪಕ್ಷದ ಮುಖ್ಯಸ್ಥರಾಗಿರುವ ಸಿದ್ದಿಕ್ಕಿ ಅವರ ತಮ್ಮ ನೌಷಾದ್ ಅವರು ಭಂಗಾರ್ ಕ್ಷೇತ್ರದ ಶಾಸಕರಾಗಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version