Site icon Vistara News

ಭರ್ಜರಿ ಬೇಟೆ; ದೇಶದ ಹಲವೆಡೆ ಬಾಂಬಿಟ್ಟ ಐಸಿಸ್‌ ಇಂಡಿಯಾ ಮುಖ್ಯಸ್ಥ ಸೇರಿ ಇಬ್ಬರ ಬಂಧನ

ISIS Terror

ISIS India Head, Key Aide Arrested In Major Operation In Assam's Dhubri

ದಿಸ್ಪುರ: ಭಾರತದಲ್ಲಿ ಐಸಿಸ್‌ ಉಗ್ರ ಸಂಘಟನೆಯನ್ನು ಮಟ್ಟಹಾಕುವ ದಿಸೆಯಲ್ಲಿ ಅಸ್ಸಾಂ ಪೊಲೀಸ್‌ ಇಲಾಖೆಯು (Assam Police) ವಿಶೇಷ ಕಾರ್ಯಪಡೆಯು (Assam STF) ಮಹತ್ವದ ಮುನ್ನಡೆ ಸಾಧಿಸಿದೆ. ಅಸ್ಸಾಂನಲ್ಲಿ ಐಸಿಸ್‌ ಹೆಡೆಮುರಿಕಟ್ಟುವ ದಿಸೆಯಲ್ಲಿ ಎಟಿಎಫ್‌ ಕೈಗೊಂಡ ಪ್ರಮುಖ ಕಾರ್ಯಾಚರಣೆಯಲ್ಲಿ ಐಸಿಸ್‌ ಇಂಡಿಯಾ ಮುಖ್ಯಸ್ಥ (ISIS India Head) ಹ್ಯಾರಿಸ್‌ ಫಾರೂಕಿ (Haris Farooqi) ಸೇರಿ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. ಅಸ್ಸಾಂನ ಧುಬ್ರಿಯಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ.

ಹ್ಯಾರಿಸ್‌ ಫಾರೂಕಿ ಐಸಿಸ್‌ ಇಂಡಿಯಾದ ಮುಖ್ಯಸ್ಥನಾಗಿದ್ದರೆ, ಈತನ ಸಹಚರನಾದ ರೆಹಾನ್ ಅಕ್ರಮವಾಗಿ ಶಸ್ತ್ರಾಸ್ತ್ರಗಳ ಕಳ್ಳ ಸಾಗಣೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಶಸ್ತ್ರಾಸ್ತ್ರಗಳ ಕಳ್ಳ ಸಾಗಣೆ, ಉಗ್ರ ಚಟುವಟಿಕೆ ಸೇರಿ ಹಲವು ಪ್ರಕರಣಗಳಲ್ಲಿ ಇಬ್ಬರೂ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಮೋಸ್ಟ್‌ ವಾಂಟೆಡ್‌ ಲಿಸ್ಟ್‌ನಲ್ಲಿದ್ದಾರೆ ಎಂದು ಎಸ್‌ಟಿಎಫ್‌ ಮೂಲಗಳು ತಿಳಿಸಿವೆ. ಇವರಿಬ್ಬರೂ ಧುಬ್ರಿಯಲ್ಲಿ ಅಡಗಿದ್ದಾರೆ ಎಂಬ ಕುರಿತು ನಿಖರ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿ, ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಇವರಿಬ್ಬರಿಂದ ಭೀಕರ ಕೃತ್ಯ, ಸಂಚು

ಐಸಿಸ್‌ ಇಂಡಿಯಾ ಮುಖ್ಯಸ್ಥನಾಗಿರುವ ಹ್ಯಾರಿಸ್‌ ಫಾರೂಕಿಯು ಭಾರತದಲ್ಲಿ ಹಲವು ಕೃತ್ಯಗಳಿಗೆ ಕಾರಣನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿ ಐಸಿಸ್‌ ಉಗ್ರ ಸಂಘಟನೆಗೆ ಯುವಕರ ನೇಮಕ, ಉಗ್ರರಿಗೆ ಹಣಕಾಸು ನೆರವು, ಯುವಕರಲ್ಲಿ ಮೂಲಭೂತವಾದ ಬಿತ್ತುವುದು, ದೇಶದ ಹಲವೆಡೆ ಸುಧಾರಿತ ಸ್ಫೋಟಕ ಸಾಧನಗಳ (IED) ಸ್ಫೋಟಕ್ಕೆ ಸಂಚು ಸೇರಿ ಹಲವು ಕೃತ್ಯಗಳಲ್ಲಿ ತೊಡಗಿದ್ದಾನೆ. ಈತನ ವಿರುದ್ಧ ಎನ್‌ಐಎ, ದೆಹಲಿ, ಎಟಿಎಸ್‌, ಲಖನೌ ಸೇರಿ ಹಲವೆಡೆ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ISIS Threat: ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ಹಿಂದುಗಳ ಹತ್ಯೆಗೆ ಐಸಿಸ್‌ ಸ್ಕೆಚ್!

ಮುಂದಿನ ಪ್ರಕ್ರಿಯೆ ಏನು?

ಹ್ಯಾರಿಸ್‌ ಫಾರೂಕಿ ಹಾಗೂ ರೆಹಾನ್‌ನನ್ನು ಅಸ್ಸಾಂ ಎಸ್‌ಟಿಎಫ್‌ ಅಧಿಕಾರಿಗಳು ಎನ್‌ಐಎ ಅಧಿಕಾರಿಗಳ ಸುಪರ್ದಿಗೆ ನೀಡುತ್ತಾರೆ. ಇವರಿಬ್ಬರನ್ನೂ ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿ, ಇನ್ನಷ್ಟು ಸ್ಫೋಟಕ ಮಾಹಿತಿಯನ್ನು ಹೊರತೆಗೆಯಲಿದ್ದಾರೆ ಎಂದು ತಿಳಿದುಬಂದಿದೆ. ರೆಹಾನ್‌ನ ಮೂಲ ಹೆಸರು ಅನುರಾಗ್‌ ಸಿಂಗ್‌ ಆಗಿದೆ. ಆತನು, ಇಸ್ಲಾಂಗೆ ಮತಾಂತರವಾದ ಬಳಿಕ ಉಗ್ರ ಸಂಘಟನೆ ಸೇರಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇಷ್ಟೆಲ್ಲ ಕಾರಣಗಳಿಂದಾಗಿ ಇವರಿಬ್ಬರ ಬಂಧನವು ಮಹತ್ವದ ಮುನ್ನಡೆ ಎಂದು ಹೇಳಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version