Site icon Vistara News

Maneka Gandhi: ಕಟುಕರಿಗೆ ಇಸ್ಕಾನ್‌ ಗೋವುಗಳನ್ನು ಮಾರುತ್ತಿದೆ ಎಂದ ಮನೇಕಾ ಗಾಂಧಿ; ಇಸ್ಕಾನ್‌ ಪ್ರತಿಕ್ರಿಯೆ ಏನು?

Maneka Gandhi

ISKCON Biggest Cheat, Sells Cows To Butchers: Says BJP MP Maneka Gandhi

ನವದೆಹಲಿ: ದೇಶದ ಪ್ರಮುಖ ಧಾರ್ಮಿಕ ಸಂಸ್ಥೆಯಾಗಿರುವ, ವಿದೇಶದಲ್ಲೂ ಕೃಷ್ಣನ ಆರಾಧನೆಯಲ್ಲಿ ಖ್ಯಾತಿಯಾಗಿರುವ ಇಸ್ಕಾನ್‌ (The International Society for Krishna Consciousness) ವಿರುದ್ಧ ಬಿಜೆಪಿ ಸಂಸದೆ ಮನೇಕಾ ಗಾಂಧಿ (Maneka Gandhi) ಅವರು ಗಂಭೀರ ಆರೋಪ ಮಾಡಿದ್ದಾರೆ. “ದೇಶದಲ್ಲಿ ಇಸ್ಕಾನ್‌ ಧಾರ್ಮಿಕ ಸಂಸ್ಥೆಯು ಬಹುದೊಡ್ಡ ಮೋಸ ಮಾಡುವ ಸಂಸ್ಥೆಯಾಗಿದೆ. ಅದು ಕಟುಕರಿಗೆ (ಮಾಂಸ ಮಾರಾಟ ಮಾಡುವವರು ಅಥವಾ ಕಸಾಯಿಖಾನೆಗಳು) ಗೋವುಗಳನ್ನು ಮಾರಾಟ ಮಾಡುತ್ತದೆ” ಎಂದು ಹೇಳಿರುವುದು ಈಗ ಸಂಚಲನ ಮೂಡಿಸಿದೆ. ಆದರೆ ಈ ಆರೋಪವನ್ನು ಇಸ್ಕಾನ್‌ ನಿರಾಕರಿಸಿದೆ. ನಾವು ಗೋವುಗಳನ್ನು ರಕ್ಷಿಸುತ್ತಿದ್ದೇವೆ ಎಂದು ಹೇಳಿದೆ.

“ದೇಶದಲ್ಲಿ ಇಸ್ಕಾನ್‌ ಬಹುದೊಡ್ಡ ಮೋಸಗಾರ ಧಾರ್ಮಿಕ ಸಂಸ್ಥೆಯಾಗಿದೆ. ಇಸ್ಕಾನ್‌ನ ಗೋಶಾಲೆಗಳಲ್ಲಿರುವ ಗೋವುಗಳನ್ನು ಮಾರಾಟ ಮಾಡಿದಷ್ಟು ದೇಶದಲ್ಲಿ ಯಾರೂ ಮಾರಾಟ ಮಾಡಿಲ್ಲ. ಗೋವುಗಳ ರಕ್ಷಣೆ ಹೆಸರಲ್ಲಿ ಗೋಶಾಲೆಗಳನ್ನು ನಿರ್ಮಿಸಿ, ಸರ್ಕಾರದಿಂದ ಹೆಚ್ಚಿನ ಪ್ರಮಾಣದ ಜಾಗ ಸೇರಿ ಹಲವು ಅನುಕೂಲ ಪಡೆಯುವ ಇಸ್ಕಾನ್‌ ಸಂಸ್ಥೆಯು ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುತ್ತದೆ” ಎಂದು ಹೇಳಿದ್ದಾರೆ. ಮನೇಕಾ ಗಾಂಧಿ ಹೀಗೆ ಹೇಳಿದ ವಿಡಿಯೊವನ್ನು ಆರ್‌ಜೆಡಿ ನಾಯಕ ಪ್ರಶಾಂತ್‌ ಕನೋಜಿಯಾ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್‌ ಆಗಿದೆ.

ವೈರಲ್‌ ಆಗಿರುವ ವಿಡಿಯೊ

ಹಾಲು ಕೊಡದ ಹಸುಗಳ ಮಾರಾಟ

“ಆಂಧ್ರಪ್ರದೇಶದ ಅನಂತಪುರದಲ್ಲಿರುವ ಇಸ್ಕಾನ್‌ ಗೋಶಾಲೆಯೊಂದಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಹಾಲು ನೀಡದಿರುವ ಒಂದೇ ಒಂದು ಹಸು ಕೂಡ ಇರಲಿಲ್ಲ. ಕರುಗಳು ಕೂಡ ಇರಲಿಲ್ಲ. ಹಾಲು ಕೊಡದ ಎಲ್ಲ ಹಸುಗಳನ್ನು ಇಸ್ಕಾನ್‌ ಕಟುಕರಿಗೆ ಮಾರಾಟ ಮಾಡಿದೆ ಎಂದೇ ಅರ್ಥ. ಇಸ್ಕಾನ್‌ನವರು ಬೀದಿ ಬೀದಿಯಲ್ಲಿ “ಹರೇ ರಾಮ ಹರೇ ಕೃಷ್ಣ” ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಅವರ ಜೀವನವೇ ಹಾಲಿನ ಮೇಲೆ ಅವಲಂಬಿತವಾಗಿದೆ ಎಂದು ಹೇಳುತ್ತಾರೆ. ಆದರೆ, ಕಟುಕರಿಗೆ ಇವರಷ್ಟು ಮಾರಾಟ ಮಾಡಿದಷ್ಟು ಗೋವುಗಳನ್ನು ಯಾರೂ ಮಾರಾಟ ಮಾಡಿರಲಿಕ್ಕಿಲ್ಲ” ಎಂದಿದ್ದಾರೆ.

ಆರೋಪ ಅಲ್ಲಗಳೆದ ಇಸ್ಕಾನ್‌

ಮನೇಕಾ ಗಾಂಧಿ ಅವರು ಮಾಡಿದ ಆರೋಪವನ್ನು ಇಸ್ಕಾನ್‌ ಸಂಸ್ಥೆಯು ಅಲ್ಲಗಳೆದಿದೆ. “ಇಸ್ಕಾನ್‌ ಗೋವುಗಳನ್ನು ಮಾರಾಟ ಮಾಡುತ್ತದೆ ಎಂಬುದು ಸತ್ಯಕ್ಕೆ ದೂರವಾದುದು. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಇಸ್ಕಾನ್‌ ಗೋವುಗಳನ್ನು ರಕ್ಷಣೆ ಮಾಡುತ್ತದೆ” ಎಂದು ಇಸ್ಕಾನ್‌ ರಾಷ್ಟ್ರೀಯ ವಕ್ತಾರ ಯುದಿಷ್ಟಿರ ಗೋವಿಂದ ದಾಸ್‌ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Dalit Woman: ದಲಿತ ಮಹಿಳೆ ಮೇಲೆ ಇಬ್ಬರು ಮುಸ್ಲಿಮರಿಂದ ಅತ್ಯಾಚಾರ; ಗೋಮಾಂಸ ತಿನ್ನಿಸಿ ವಿಕೃತಿ

“ನಾವು ಗೋವುಗಳನ್ನು ರಕ್ಷಣೆ ಮಾಡಲು ಗೋಶಾಲೆಗಳನ್ನು ನಿರ್ಮಿಸಿದ್ದೇವೆಯೇ ಹೊರತು, ಅವುಗಳನ್ನು ಮಾರಾಟ ಮಾಡಲು ಅಲ್ಲ. ದೇಶದಲ್ಲಿ ಇಸ್ಕಾನ್‌ 60 ಗೋಶಾಲೆಗಳನ್ನು ನಿರ್ಮಿಸಿದೆ. ಗೋವುಗಳು ಜೀವಂತವಾಗಿರುವತನಕ ಅವುಗಳ ಪಾಲನೆ, ಪೋಷಣೆ ಮಾಡಲಾಗುತ್ತದೆ. ಗೋವುಗಳ ರಕ್ಷಣೆ ಕುರಿತು ರೈತರಿಗೆ ಹಾಗೂ ಗ್ರಾಮೀಣ ಜನರಿಗೆ ತರಬೇತಿ ನೀಡುವ ಕಾರ್ಯಕ್ರಮಗಳನ್ನೂ ನಾವು ಆಯೋಜಿಸುತ್ತೇವೆ” ಎಂದು ಹೇಳಿದ್ದಾರೆ.

Exit mobile version