ನವದೆಹಲಿ: ಮುಂದಿನ ವರ್ಷ ಜನವರಿ 22 ರಂದು ಅಯೋಧ್ಯೆಯ ನೂತನ ರಾಮ ಮಂದಿರದ (Ayodhya Ram Mandir) ಗರ್ಭಗುಡಿಯಲ್ಲಿ ರಾಮ್ ಲಲ್ಲಾ ನ ಮೂರ್ತಿ ಸ್ಥಾಪನೆಯಾಗಲಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಇಸ್ಕಾನ್ ಭಾಗಿಯಾಗಲಿದ್ದು, ಅದಕ್ಕಿಂತ ಮೊದಲು ವಿಶೇಷ ಯಾತ್ರೆಯೊಂದನ್ನು ಸಂಯೋಜಿಸಿದೆ. ಅಂದ ಹಾಗೆ ಈ ಯಾತ್ರೆ ಸಾಗುವುದು ಎತ್ತಿನಗಾಡಿಯಲ್ಲಿ. ಆದರೆ, ಇದಕ್ಕೊಂದು ಉದ್ದೇಶವಿದ್ದು ದೀರ್ಘ ಕಾಲದ ಯಾನದಲ್ಲಿ ರಾಮನ ಭಜನೆ ನಿರಂತರವಾಗಿ ನಡೆಯಲಿದೆ.
ಕೃಷ್ಣನ ಬೋಧನೆಗಳನ್ನು ಪ್ರಪಂಚದಾದ್ಯಂತ ಹರಡುವಲ್ಲಿ ಮುಂಚೂಣಿಯಲ್ಲಿರುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿರುವ ಇಸ್ಕಾನ್ ದೆಹಲಿಯಿಂದ (ಪುರಾಣಗಳ ಪ್ರಕಾರ ಇಂದ್ರಪ್ರಸ್ಥ) ಅಯೋಧ್ಯೆಗೆ 41 ದಿನಗಳ ಸುದೀರ್ಘ ರಥ ಯಾತ್ರೆ ಮಾಡಲಿದೆ. ಇಸ್ಕಾನ್ ಕೇಂದ್ರ ಇರುವ ದೆಹಲಿಯ ಕೈಲಾಶ್ ಕಾಲೊನಿಯಿಂದ ಭಾನುವಾರ (ಡಿಸೆಂಬರ್10) ಬೆಳಿಗ್ಗೆ ಪ್ರಾರಂಭವಾಗುವ ಪ್ರಯಾಣವು 2023ರ ಜನವರಿ 22 ರಂದು ಕೊನೆಗೊಳ್ಳಲಿದೆ.
ಈ 41 ದಿನಗಳಲ್ಲಿ, ಇಸ್ಕಾನ್ ಒಟ್ಟು 635 ಕಿಲೋಮೀಟರ್ ಯಾನ ಮಾಡಲಿದೆ. ವಿಶೇಷ ಎಂದರೆ ಈ ಯಾತ್ರೆಯು ಎತ್ತಿನ ಗಾಡಿ ಮೂಲಕ ಸಾಗಲಿದೆ. ದಾರಿಯದ್ದಕ್ಕೂ ಹಳ್ಳಿಗಳು ಮತ್ತು ಪಟ್ಟಣಗಳನ್ನು ತಲುಪಿ ಅಲ್ಲಿ ರಾಮನ ಬೋಧನೆಗಳನ್ನು ಪ್ರತಿ ಮನೆಗೂ ಹರಡಲಿದ್ದಾರೆ. ಭಾರತದ ಭಕ್ತರು ಮಾತ್ರವಲ್ಲದೆ ರಷ್ಯಾ ಮತ್ತು ಮಾರಿಷಸ್ ಸೇರಿದಂತೆ ಇತರ ರಾಷ್ಟ್ರಗಳ ಭಕ್ತರು ಈ ಪ್ರಯಾಣದಲ್ಲಿ ಸೇರಿಕೊಳ್ಳಲಿದ್ದಾರೆ.
ಇದನ್ನೂ ಓದಿ : Sonia Gandhi : ಸೋನಿಯಾ ಗಾಂಧಿಗೆ ವಿಶೇಷ ರೀತಿಯಲ್ಲಿ ಜನುಮ ದಿನದ ಶುಭಾಶಯ ತಿಳಿಸಿದ ಮೋದಿ
ಪ್ರಯಾಣದ ನಡುವೆ ಪ್ರತಿ ದಿನ ರಾತ್ರಿ ಶ್ರೀ ರಾಮ ಕಥಾ ನಡೆಯಲಿದೆ. ಭಕ್ತರು ಭಜನೆಗಳನ್ನು ಹಾಡಲಿದ್ದಾರೆ ಮತ್ತು ಕಾರ್ಯಕ್ರಮದ ನಂತರ ಭಗವಾನ್ ರಾಮನ ಹೆಸರಿನಲ್ಲಿ ಗ್ರಾಮದ ನಿವಾಸಿಗಳಿಗೆ ಪ್ರಸಾದವನ್ನು ವಿತರಿಸಲಿದ್ದಾರೆ.
ಕೇಂದ್ರ ಸಚಿವರಿಂದ ಯಾತ್ರೆಗೆ ಚಾಲನೆ
ಬಿಜೆಪಿ ನಾಯಕರಾದ ಮೀನಾಕ್ಷಿ ಲೇಖಿ ಮತ್ತು ಅಶ್ವಿನಿ ಚೌಬೆ ಅವರು ಕೃಷ್ಣ ಮತ್ತು ರಾಮ ಮಂತ್ರ ಘೋಷಗಳೊಂದಿಗೆ ದಕ್ಷಿಣ ದೆಹಲಿಯಿಂದ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಹಲವಾರು ಸಾಧುಗಳ ಸಮ್ಮುಖದಲ್ಲಿ ಯಾತ್ರೆ ಆರಂಭವಾಗಲಿದೆ. ರಾಮನ ಭೋಧನೆಯಾದ ಭಕ್ತಿ , ಸೇವೆ. ಮತ್ತು ದಯೆಯನ್ನು ಪ್ರತಿ ಮನೆಗೂ ತಲುಪಿಸಲು ಇಸ್ಕಾನ್ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಅಯೋಧ್ಯೆಯಲ್ಲಿ, ಜನವರಿ 20ರಿಂದ ಫೆಬ್ರವರಿ 26 ರವರೆಗೆ ನಾವು ಪ್ರತಿದಿನ 5,000 ಯಾತ್ರಾರ್ಥಿಗಳಿಗೆ ಉಚಿತ ಊಟವನ್ನು ನೀಡಲಿದ್ದೇವೆ. ನಮ್ಮ ಭಾರತೀಯ ಮತ್ತು ಅಂತಾರಾಷ್ಟ್ರೀಯ ಭಕ್ತರಿಂದ ಬೀದಿಗಳಲ್ಲಿ ಸಂಕೀರ್ತನೆ ನಡೆಯಲಿದೆ. ಭಕ್ತರಿಗೆ ಉಚಿತ ವೈದ್ಯಕೀಯ ಶಿಬಿರಗಳು ನಡೆಯಲಿವೆ ಎಂದು ಇಸ್ಕಾನ್ ನ ಭಾರತ ಸಂವಹನ ನಿರ್ದೇಶಕ ಯುಧಿಷ್ಠಿರ ಗೋವಿಂದ್ ದಾಸ್ ಹೇಳಿದರು.
ವಿಡಿಯೊ ಹಂಚಿಕೊಂಡ ರಾಮಮಂದಿರ
ಶುಕ್ರವಾರ ಅಯೋಧ್ಯೆಯಲ್ಲಿ ಕಲ್ಲಿನ ಕೆತ್ತನೆಗಳನ್ನು ಸ್ಥಾಪಿಸುವ ಸಣ್ಣ ವೀಡಿಯೊವನ್ನು ಪ್ರಕಟಗೊಂಡಿದೆ. ದೇವಾಲಯವನ್ನು ಉದ್ಘಾಟಿಸುವ ಜನವರಿ 22ರ ಗಡುವನ್ನು ಪೂರೈಸಲು ಯುದ್ಧೋಪಾದಿಯಲ್ಲಿ ಕೆಲಸವನ್ನು ಪೂರ್ಣಗೊಳಿಸಲಾಗುತ್ತಿರುವುದು ಈ ವಿಡಿಯೊದಲ್ಲಿ ಸ್ಪಷ್ಟವಾಗಿದೆ. ಭಗವಾನ್ ಶ್ರೀ ರಾಮ್ ಲಲ್ಲಾ ಸರ್ಕಾರ್ ಅವರ ಶ್ರೀ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯನ್ನು ಪ್ರಧಾನಿ ಮೋದಿ ಅವರು ಶ್ರೀ ರಾಮ್ ಜನ್ಮಭೂಮಿ ಮಂದಿರದಲ್ಲಿ ನಡೆಸಲಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ.
ಸುಮಾರು 2,000 ಸಂತರು ಮತ್ತು ವಿವಿಧ ಕ್ಷೇತ್ರಗಳ 5,000-6,000 ಅತಿಥಿಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇತ್ತೀಚೆಗೆ, ದೇವಾಲಯದ ನಿರ್ಮಾಣ ಸಮಿತಿಯ ಅಧ್ಯಕ್ಷರು ಮತ್ತು ಪ್ರಧಾನಿಯ ಮೋದಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ಈ ಕುರಿತು ಮಾಹಿತಿ ನೀಡಿದ್ದರು. ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಸುಮಾರು 1.5 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಜನವರಿ 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ, ರಾಮ್ ಲಲ್ಲಾ ದೇವತೆಯನ್ನು ಗರ್ಭಗುಡಿಯಲ್ಲಿ ಸ್ಥಾಪಿಸಲಾಗುವುದು. ಇದಲ್ಲದೆ, ಪ್ರಸ್ತುತ ಕೆತ್ತಲಾಗುತ್ತಿರುವ ಮತ್ತೊಂದು ವಿಗ್ರಹ ಮತ್ತು ಬನಾರಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ತಯಾರಿಸಿದ ಮೂರು ವಿಭಿನ್ನ ಶಿಲ್ಪಗಳನ್ನು ಸಹ ಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ.