Site icon Vistara News

Israel Palestine War: ಇಸ್ರೇಲ್‌-ಪ್ಯಾಲೆಸ್ತೀನ್‌ ಬಿಕ್ಕಟ್ಟು; ಈಜಿಪ್ಟ್‌ ಅಧ್ಯಕ್ಷರ ಜತೆ ಮೋದಿ ಚರ್ಚೆ

pm

pm

ನವ ದೆಹಲಿ: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಅಲ್‌-ಸಿಸಿ (Abdel Fattah al-Sisi) ಶನಿವಾರ ಮಹತ್ವದ ಮಾತುಕತೆ ನಡೆಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಹದಗೆಡುತ್ತಿರುವ ಭದ್ರತೆ ಮತ್ತು ಪರಿಸ್ಥಿತಿಯ ಬಗ್ಗೆ ಎರಡೂ ದೇಶಗಳ ನಾಯಕರು ಚರ್ಚೆ ನಡೆಸಿದರು. ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಸಮರದಿಂದಾಗಿ (Israel Palestine War) ಹೆಚ್ಚುತ್ತಿರುವ ಭಯೋತ್ಪಾದನೆ, ಹಿಂಸೆ ಮತ್ತು ನಾಗರಿಕರ ಸಾವುನೋವುಗಳ ಬಗ್ಗೆ ಇಬ್ಬರೂ ಕಳವಳ ವ್ಯಕ್ತಪಡಿಸಿದರು.

ಶಾಂತಿ ಮತ್ತು ಸುವ್ಯವಸ್ಥೆಯನ್ನು ತ್ವರಿತವಾಗಿ ಪುನಃಸ್ಥಾಪಿಸುವ ಮತ್ತು ಸಂಘರ್ಷದಿಂದ ಬಾಧಿತರಾದವರಿಗೆ ಮಾನವೀಯ ನೆರವು ನೀಡುವ ಅಗತ್ಯವನ್ನು ಮೋದಿ ಮತ್ತು ಎಲ್-ಸಿಸಿ ಒತ್ತಿ ಹೇಳಿದರು. ʼʼಅಬ್ದೆಲ್‌ ಫತ್ತಾಹ್‌ ಅಲ್‌-ಸಿಸಿ ಜತೆ ಸಮಾಲೋಚನೆ ನಡೆಸಲಾಗಿದೆ. ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಭಯೋತ್ಪಾದನೆ, ಹಿಂಸೆ ಮತ್ತು ನಾಗರಿಕರ ಸಾವಿನ ಬಗ್ಗೆ ಮಾತನಾಡಿದ್ದೇವೆ. ಶಾಂತಿ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಪುನಃಸ್ಥಾಪಿಸುವ ಮತ್ತು ಮಾನವೀಯ ಸಹಾಯವನ್ನು ಸುಗಮಗೊಳಿಸುವ ಅಗತ್ಯವನ್ನು ಒಪ್ಪುತ್ತೇವೆʼʼ ಎಂದು ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಗಾಜಾ ಪಟ್ಟಿಯಲ್ಲಿನ ಇಸ್ರೇಲ್‌ ಮಿಲಿಟರಿ ಕಾರ್ಯಾಚರಣೆಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ಈಜಿಪ್ಟ್ ಅಧ್ಯಕ್ಷರ ವಕ್ತಾರರು ತಿಳಿಸಿದ್ದಾರೆ. ʼʼಫತಾಹ್ ಎಲ್-ಸಿಸಿ ಅವರಿಗೆ ಮೋದಿ ದೂರವಾಣಿ ಕರೆ ಮಾಡಿದರು. ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ ಮಿಲಿಟರಿ ಕಾರ್ಯಾಚರಣೆಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ನಾಗರಿಕರ ಜೀವನದ ಮೇಲೆ ಇದು ಬೀರುವ ಗಂಭೀರ ಪರಿಣಾಮಗಳ ಬಗ್ಗೆ ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು” ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Israel Palestine War: ಪ್ರತಿ ಉಗ್ರನ ಹೆಣ ಬೀಳುವುದು ನಿಶ್ಚಿತ ಎಂದ ಇಸ್ರೇಲ್;‌ 3,700 ಸಾವು

ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಕನಿಷ್ಠ 1,400 ಜನರು ಮೃತಪಟ್ಟಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಗಾಜಾದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 8,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಅರ್ಧದಷ್ಟು ಮಕ್ಕಳು ಸೇರಿದ್ದಾರೆ ಎಂದು ಹಮಾಸ್ ನಿಯಂತ್ರಿತ ಆರೋಗ್ಯ ಸಚಿವಾಲಯ ತಿಳಿಸಿದೆ.

ಮತದಾನದಿಂದ ದೂರ ಉಳಿದ ಭಾರತ

ಇಸ್ರೇಲ್-ಹಮಾಸ್ ಯುದ್ಧದಲ್ಲಿ ತಕ್ಷಣದ ಮಾನವೀಯ ಕದನ ವಿರಾಮಕ್ಕೆ ಕರೆ ನೀಡಿದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ಮತದಾನದಿಂದ ಭಾರತ ಶುಕ್ರವಾರ ದೂರ ಉಳಿದಿತ್ತು. ನಿರ್ಣಯವು ಹಮಾಸ್ ಅನ್ನು ಉಲ್ಲೇಖಿಸುವುದಿಲ್ಲ ಎಂದು ಭಾರತ ಇದಕ್ಕೆ ಕಾರಣ ತಿಳಿಸಿದೆ. ಯುಎನ್ ಭಯೋತ್ಪಾದನೆಯ ವಿರುದ್ಧ ಸ್ಪಷ್ಟ ಸಂದೇಶವನ್ನು ಕಳುಹಿಸುವ ಅಗತ್ಯವಿದೆ ಎಂದು ಹೇಳಿದೆ.

ಭಾರತದ ಪ್ರತಿನಿಧಿ ಯೋಜ್ನಾ ಪಟೇಲ್, “ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಆಘಾತಕಾರಿ ಮತ್ತು ಖಂಡನಾರ್ಹ. ಭಯೋತ್ಪಾದಕ ಕೃತ್ಯಗಳ ಯಾವುದೇ ಸಮರ್ಥನೆಯನ್ನು ಜಗತ್ತು ಅಂಗೀಕರಿಸಬಾರದು. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಒಗ್ಗೂಡೋಣ ಮತ್ತು ಭಯೋತ್ಪಾದಕರ ವಿರುದ್ಧ ಶೂನ್ಯ ಸಹಿಷ್ಣುತೆಯ ವಿಧಾನವನ್ನು ಅಳವಡಿಸಿಕೊಳ್ಳೋಣ” ಎಂದು ಅವರು ಹೇಳಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version