Site icon Vistara News

Israel Palestine War: ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ; 20 ಸಾವು

Israeli Forces

ಟೆಲ್ ಅವೀವ್: ಹಮಾಸ್(Hamas) ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ(Gaza Hospital) ಮೇಲೆ ಇಸ್ರೇಲ್‌ ಪಡೆಗಳು ದಾಳಿ ನಡೆಸಿದ ವೇಳೆ 20 ಪ್ಯಾಲೆಸ್ತೀನ್(Israel Palestine War) ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್‌ನ ಮಿಲಿಟರಿ ತಿಳಿಸಿದೆ.

ಯುದ್ಧ ಟ್ಯಾಂಕರ್‌ಗಳು, ಫಿರಂಗಿಗಳೊಂದಿಗೆ ಆಸ್ಪತ್ರೆಯನ್ನು ಸುತ್ತುವರಿದಿರುವ ಇಸ್ರೇಲ್‌ ಪಡೆಗಳು, ಗುಂಡಿನ ದಾಳಿ ನಡೆಸಿವೆ ಎಂದು ಆಸ್ಪತ್ರೆಯೊಳಗೆ ಆಶ್ರಯ ಪಡೆದಿರುವವರು ಹೇಳಿದ್ದಾರೆ. ಸೇನಾ ಪಡೆಗಳು ಕಟ್ಟಡಗಳ ಮೇಲೆಯೂ ದಾಳಿ ನಡೆಸಿದ್ದು, ಹಲವರನ್ನು ಬಂಧಿಸಿವೆ ಎಂದಿದ್ದಾರೆ.

“ಕಾರ್ಯಾಚರಣೆಯ ಸಮಯದಲ್ಲಿ ನಾವು 200 ಕ್ಕೂ ಹೆಚ್ಚು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದೇವೆ ಮತ್ತು ಅವರು ಪ್ರಸ್ತುತ ತನಿಖೆಯಲ್ಲಿದ್ದಾರೆ. ಆಸ್ಪತ್ರೆಯ ಸಂಕೀರ್ಣದಲ್ಲಿ 20 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದೇವೆ” ಎಂದು ಇಸ್ರೇಲ್‌ನ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ದೂರದರ್ಶನದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಲ್-ಶಿಫಾ ಆಸ್ಪತ್ರೆಯ ಕೆಳಭಾಗದಲ್ಲಿ ಹಲವು ಸೌಕರ್ಯಗಳೊಂದಿಗೆ ಹಮಾಸ್ ಬಂಡುಕೋರರು ಕಮಾಂಡಿಂಗ್‌ ಸೆಂಟರ್ ಹೊಂದಿದ್ದಾರೆ ಎಂದು ಆರೋಪಿಸಿದ್ದ ಇಸ್ರೇಲ್‌ ಪಡೆಯು, ವ್ಯಾಪಕ ದಾಳಿ ನಡೆಸುವ ಮೂಲಕ ಬಂಡುಕೋರರ ಅಡಗುದಾಣವನ್ನು ಕಳೆದ ನವೆಂಬರ್‌ನಲ್ಲೇ ನಾಶಪಡಿಸಿತ್ತು. ದಾಳಿಯ ವೇಳೆ ಬಂಡುಕೋರರು ಹೊಂದಿದ್ದ ಬಂಕರ್‌, ಶಸ್ತ್ರಾಸ್ತ್ರಗಳು ಹಾಗೂ ಸುರಂಗ ಮಾರ್ಗದ ವಿಡಿಯೊವನ್ನು ಬಿಡುಗಡೆ ಮಾಡಿತ್ತು. ಆಸ್ಪತ್ರೆಯು ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಆದರೆ ಈ ಬಾರಿ ದಾಳಿ ನಡೆಸಿ 20ಕ್ಕೂ ಹೆಚ್ಚು ಬಂಡುಕೋರರನ್ನು ಹತ್ಯೆಗೈದಿದೆ.

ಇದನ್ನೂ ಓದಿ Israel Palestine War: ಜೀವಕ್ಕೆ ಕುತ್ತಾದ ನೆರವಿನ ತುತ್ತು: ವಿಮಾನದಿಂದ ಎಸೆದ ಪ್ಯಾಕ್‌ 5 ಜನರನ್ನು ಕೊಂದಿತು

ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಫಾಯ್ಕ್ ಅಲ್-ಮಭೌಹ್ ಕೂಡ ಸೇರಿದ್ದಾರೆ. ಅವರು ಹಮಾಸ್ ಆಂತರಿಕ ಭದ್ರತಾ ಸಂಸ್ಥೆಯಲ್ಲಿ ವಿಶೇಷ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದರು. ಗಾಜಾ ಪೋಲೀಸ್ ಮೂಲವು ಅವರ ಸಾವನ್ನು ದೃಢಪಡಿಸಿದೆ.

“ಉತ್ತರ ಗಾಜಾದ ಅಲ್-ಶಿಫಾ ಆಸ್ಪತ್ರೆಯ ಪರಿಸ್ಥಿತಿಯ ಬಗ್ಗೆ ನಾವು ಭಯಭೀತರಾಗಿದ್ದೇವೆ. ಆಸ್ಪತ್ರೆಗಳು ಎಂದಿಗೂ ಯುದ್ಧಭೂಮಿಯಾಗಬಾರದು” ಎಂದು ಡಬ್ಲ್ಯುಹೆಚ್ ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಎಕ್ಸ್‌ನಲ್ಲಿ ಬರೆದಿದ್ದಾರೆ. ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ಮಾಡಿದ ದಾಳಿಗೆ ಇದುವರೆಗೆ 1,400 ಜನ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಗಾಜಾ ನಗರದ ಮೇಲೆ ಇಸ್ರೇಲ್‌ ಸೇನೆ ನಡೆಸಿದ ಪ್ರತಿದಾಳಿಗೆ 21,500 ಮಂದಿ ಹತರಾಗಿದ್ದಾರೆ.‌

Exit mobile version