ಬೆಂಗಳೂರು: ಚಂದ್ರಯಾನ 3 ಮಿಷನ್‌ನ (Chandrayaan 3) ಅಭೂತಪೂರ್ವ ಯಶಸ್ಸು, ಆದಿತ್ಯ ಎಲ್ 1 ಮಿಷನ್ (Aditya L1 Mission) ಮಹತ್ವದ ಮುನ್ನಡೆಯ ಸಂತಸದಲ್ಲಿರುವ ಇಸ್ರೋ ಈಗ ಸಾಲು ಸಾಲು ಉಡಾವಣೆಗೆ ಸಿದ್ಧತೆ ನಡೆಸುತ್ತಿದೆ. ಸಮುದ್ರಯಾನ, ಶುಕ್ರಯಾನಕ್ಕೆ ಸಿದ್ಧತೆ ನಡೆದಿರುವ ಬೆನ್ನಲ್ಲೇ ಮಂಗಳಯಾನ 2 (Mangalyaan 2) ಮಿಷನ್ ಉಡಾವಣೆಗೂ ಸಿದ್ಧತೆ ಆರಂಭಿಸಿದೆ. ಈ ಕುರಿತು ಹೆಸರು ಹೇಳಲು ಇಚ್ಛಿಸದ ಇಸ್ರೋ (ISRO) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
“ಎರಡನೇ ಮಾರ್ಸ್ ಮಿಷನ್‌ಗೆ ಇಸ್ರೋ ಸಿದ್ಧತೆ ಆರಂಭಿಸಿದೆ. ಉಪಗ್ರಹದ ಪೇಲೋಡ್‌ಗಳ ಅಭಿವೃದ್ಧಿಯು ಹಲವು ಹಂತದಲ್ಲಿದೆ. ಮಂಗಳನ ಅಂಗಳದಲ್ಲಿ ಮೊದಲ ಮಿಷನ್ ಇತಿಹಾಸ ಸೃಷ್ಟಿಸಿದ 9 ವರ್ಷದ ಬಳಿಕ ಇಸ್ರೋ ಮತ್ತೊಂದು ಮಂಗಳಯಾನಕ್ಕೆ ಸಿದ್ಧತೆ ಆರಂಭಿಸಿದೆ. ಮಂಗಳನ ಅಧ್ಯಯನ, ಹವಾಮಾನ ವಿಶ್ಲೇಷಣೆ ಸೇರಿ ಹಲವು ರೀತಿಯ ಉದ್ದೇಶಕ್ಕಾಗಿ ಎರಡನೇ ಮಿಷನ್‌ಗೆ ತಯಾರಿ ನಡೆದಿದೆ” ಎಂದು ಮಾಹಿತಿ ನೀಡಿದ್ದಾರೆ. ಈ ಕುರಿತು ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ISRO begins preparation for India’s 2nd mission to Mars, 9 years after its successful 1st attempt.
— BufferZone (@WorldBufferZone) October 2, 2023
The Mars Orbiter Mission-2, informally known as Mangalyaan-2, would carry four payloads
Report by @htTweets pic.twitter.com/Cv44ATBoME
ಇಸ್ರೋ ವಿಜ್ಞಾನಿಗಳು 2013ರ ನವೆಂಬರ್ 5ರಂದು ಮೊದಲ ಮಂಗಳಯಾನ (Mars Orbiter Mission-MOM) ಕೈಗೊಂಡಿತ್ತು. ಶ್ರೀಹರಿಕೋಟದಲ್ಲಿ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಉಡಾವಣೆ ಮಾಡಲಾಗಿತ್ತು. 2014ರ ಸೆಪ್ಟೆಂಬರ್ 24ರಂದು ಮಿಷನ್ ಮಾರ್ಸ್ ಅರ್ಬಿಟರ್ ಮಂಗಳನ ಕಕ್ಷೆ ಸೇರಿತ್ತು. ಇಂಧನ ಹಾಗೂ ಬ್ಯಾಟರಿ ಖಾಲಿಯಾದ ಕಾರಣ ಆರ್ಬಿಟರ್ ಮಿಷನ್ 2022ರಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
ಇದನ್ನೂ ಓದಿ: Aditya L1 Mission: 9.2 ಲಕ್ಷ ಕಿ.ಮೀ ಕ್ರಮಿಸಿದ ಆದಿತ್ಯ ಎಲ್ 1; ಗುರಿ ತಲುಪಲು ಇನ್ನೆಷ್ಟು ಕಿ.ಮೀ ಬಾಕಿ?
ಶುಕ್ರ ಗ್ರಹದ ಅಧ್ಯಯನಕ್ಕೆ ಮಿಷನ್
ಶುಕ್ರಗ್ರಹದ ಅಧ್ಯಯನಕ್ಕೆಂದು ಇಸ್ರೋ ಈಗಾಗಲೇ ಮಿಷನ್ ಜಾರಿಯಲ್ಲಿ ನಿರತವಾಗಿದೆ. ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಸ್.ಸೋಮನಾಥ್, “ಇಸ್ರೋ ಹಲವು ಮಿಷನ್‌ಗಳನ್ನು ಕೈಗೊಳ್ಳುತ್ತಿದೆ. ಈಗ ಸೌರವ್ಯೂಹದಲ್ಲಿ ಅತಿ ಹೆಚ್ಚು ಪ್ರಕಾಶಮಾನವಾದ ಗ್ರಹ ಎಂದೇ ಖ್ಯಾತಿಯಾದ ಶುಕ್ರ ಗ್ರಹದ ಅಧ್ಯಯನಕ್ಕೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಶುಕ್ರಯಾನದ ಪೇಲೋಡ್‌ಗಳನ್ನೂ ಅಭಿವೃದ್ಧಿಪಡಿಸಲಾಗಿದೆ. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಶುಕ್ರ ಗ್ರಹ ನೆರವಾಗಿದೆ. ಹಾಗಾಗಿ ಶುಕ್ರಯಾನವು ತುಂಬ ಆಸಕ್ತಿದಾಯಕ ಮಿಷನ್ ಆಗಿರಲಿದೆ” ಎಂದು ತಿಳಿಸಿದ್ದರು.