ತಿರುಪತಿ: ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಸೂರ್ಯಯಾನಕ್ಕೆ ಸಿದ್ಧಗೊಂಡಿದೆ. ಆದಿತ್ಯ ಎಲ್ 1 ಮಿಷನ್ (Aditya L1 Mission) ಉಡಾವಣೆಗೆ ಕೆಲವೇ ಗಂಟೆ ಬಾಕಿ ಇದ್ದು, ದೇಶವೇ ಕುತೂಹಲದಿಂದ ಕಾಯುತ್ತಿದೆ. ಇನ್ನು ಆದಿತ್ಯ ಎಲ್ 1 ಮಿಷನ್ ಯಶಸ್ವಿಗಾಗಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ತಿರುಪತಿಯಲ್ಲಿರುವ ಶ್ರೀ ಚೆಂಗಾಳಮ್ಮ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ.
ತಿರುಪತಿ ಜಿಲ್ಲೆಯ ಸುಲ್ಲೂರ್‌ಪೇಟದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದ ಅವರು ಸೂರ್ಯಯಾನದ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಇದಾದ ಬಳಿಕ ಮಾತನಾಡಿದ ಅವರು, “ಆದಿತ್ಯ ಎಲ್ 1 ಮಿಷನ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮಿಷನ್ ಉಡಾವಣೆಯಾದ 125 ದಿನಗಳ ಬಳಿಕ ಎಲ್ 1 ಪಾಯಿಂಟ್ ತಲುಪಲಿದೆ. ಇದು ಮಹತ್ವದ ಉಡಾವಣೆ ಆಗಲಿದೆ. ನಾವಿನ್ನೂ ಚಂದ್ರಯಾನ 4 ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಆದಿತ್ಯ ಎಲ್ 1 ಮಿಷನ್ ಬಳಿಕ ಗಗನಯಾನ ಉಡಾವಣೆ ಮಾಡಲಿದ್ದೇವೆ” ಎಂದು ತಿಳಿಸಿದರು.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (Satish Dhawan space center) ಇಂದು (ಸೆಪ್ಟೆಂಬರ್ 2) ಬೆಳಗ್ಗೆ 11.50ಕ್ಕೆ ಆದಿತ್ಯ ಎಲ್ 1 ಮಿಷನ್ ಉಡಾವಣೆ ಮಾಡಲಾಗುತ್ತದೆ. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿ ಎಲ್ 1 ಮಿಷನ್ ಸೂರ್ಯನ ಮೇಲ್ಮೈ ವಾತಾವರಣದ ಅಧ್ಯಯನ ಮಾಡಲಿದೆ.
ಈ ಉಡಾವಣೆಯನ್ನು ನೀವು ಇಲ್ಲಿ ವೀಕ್ಷಿಸಬಹುದು:
ISRO Website: ಇಸ್ರೊ
Facebook: https://facebook.com/ISRO
YouTube: https://youtube.com/watch?v=_IcgGYZTXQw
DD National TV channel
from 11:20 Hrs. IST
ಇದನ್ನೂ ಓದಿ: Chandrayaan 3: ದೇಗುಲ ಭೇಟಿ ಕುರಿತು ಇಸ್ರೋ ಅಧ್ಯಕ್ಷ ಸೋಮನಾಥ್ ಮೊದಲ ಪ್ರತಿಕ್ರಿಯೆ; ಕುಹಕಿಗಳಿಗೆ ಕುಟುಕಿದ್ದು ಹೀಗೆ…
ಮಿಷನ್ ಉದ್ದೇಶ
ಆದಿತ್ಯ ಎಲ್ 1 ಮಿಷನ್ ಸೂರ್ಯನ ಕುರಿತು ಅಧ್ಯಯನ ಮಾಡಲಿರುವ ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್ ಆಗಿದೆ. ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿ ಇದು ಅಧ್ಯಯನ ಮಾಡಲಿದೆ. ಅಂದರೆ, ಚಂದ್ರನಿಗಿಂತ ನಾಲ್ಕು ಪಟ್ಟು ಹೆಚ್ಚು ದೂರದಲ್ಲಿ ಮಿಷನ್ ಕಾರ್ಯನಿರ್ವಹಿಸಲಿದೆ. ಗ್ರಹಣ ಸೇರಿ ಯಾವುದೇ ಸಂದರ್ಭದಲ್ಲಿಯೂ ಮಿಷನ್ ಸೂರ್ಯನ ಕುರಿತು ಅಧ್ಯಯನ ನಡೆಸಲಿದೆ ಎಂಬುದಾಗಿ ಇಸ್ರೋ ಮಾಹಿತಿ ನೀಡಿದೆ. ಸೂರ್ಯನ ಮೇಲ್ಮೈ ವಾತಾವರಣ, ತಾಪಮಾನ, ಉಷ್ಣಗಾಳಿ, ಸೂರ್ಯನ ಪ್ರಭಾವಲಯದ ಭೌತವಿಜ್ಞಾನ (Physics Of Solar Corona), ಉಷ್ಣವಲಯದ ಪ್ರಭಾವ ಸೇರಿ ಹಲವು ಅಂಶಗಳ ಕುರಿತು ಉಪಗ್ರಹವು ಅಧ್ಯಯನ ನಡೆಸಲಿದೆ.