Site icon Vistara News

S Somanath: ಆದಿತ್ಯ ಎಲ್‌ 1 ಮಿಷನ್‌ ದಿನವೇ ಎಸ್‌.ಸೋಮನಾಥ್‌ಗೆ ಕ್ಯಾನ್ಸರ್‌; ಈಗ ಹೇಗಿದ್ದಾರೆ?

S Somanath

Want To Continue Chandrayaan Series Till An Indian Lands On Moon: Says ISRO Chief S Somanath

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿ, ಚಂದ್ರಯಾನ 3 ಮಿಷನ್‌ (Chandrayaan 3 Mission) ಸೇರಿ ಹಲವು ಮಿಷನ್‌ಗಳ ರೂವಾರಿ ಎಸ್‌. ಸೋಮನಾಥ್‌ (S Somanath) ಅವರಿಗೆ ಆದಿತ್ಯ ಎಲ್‌ 1 ಮಿಷನ್‌ ಉಡಾವಣೆ ಮಾಡಲಾದ ಕಳೆದ ವರ್ಷದ ಸೆಪ್ಟೆಂಬರ್‌ 2ರಂದೇ ಕ್ಯಾನ್ಸರ್‌ (Cancer) ಇರುವುದು ದೃಢವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಎಸ್.‌ ಸೋಮನಾಥ್‌ ಅವರೇ ಇತ್ತೀಚೆಗೆ ಮಾಧ್ಯಮವೊಂದರ ಜತೆ ಮಾತನಾಡುವಾಗ ತಿಳಿಸಿದ್ದಾರೆ. “ಆದಿತ್ಯ ಎಲ್‌ 1 ಮಿಷನ್‌ (Aditya L 1 Mission) ಉಡಾವಣೆ ದಿನವೇ ನನಗೆ ಕ್ಯಾನ್ಸರ್‌ ಇರುವುದು ಪತ್ತೆಯಾಯಿತು. ಇದಾದ ಬಳಿಕ ನಾನು ಸತತವಾಗಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ” ಎಂದು ತಿಳಿಸಿದ್ದಾರೆ.

“ಚಂದ್ರಯಾನ 3 ಮಿಷನ್‌ ಉಡಾವಣೆ ವೇಳೆಯೇ ನನಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಹೊಟ್ಟೆಯಲ್ಲಿ ಏನೋ ಸಮಸ್ಯೆಯಾಗುತ್ತಿದೆ ಎಂದು ಅನ್ನಿಸಿತ್ತು. ಆದರೆ, ಆ ಸಂದರ್ಭದಲ್ಲಿ ನನಗೆ ಯಾವುದೂ ಗೊತ್ತಿರಲಿಲ್ಲ. ಆದಿತ್ಯ ಎಲ್‌ 1 ಮಿಷನ್‌ ಉಡಾವಣೆ ದಿನವೇ ನಾನು ತಪಾಸಣೆ ಮಾಡಿಸಿಕೊಂಡೆ. ಆಗ ನನಗೆ ಕ್ಯಾನ್ಸರ್‌ ಇರುವುದು ಗೊತ್ತಾಯಿತು. ಇದು ನನ್ನ ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳಿಗೆ ಆಘಾತ ಮೂಡಿಸಿತು” ಎಂದು ಸಂದರ್ಶನದ ವೇಳೆ ಎಸ್‌. ಸೋಮನಾಥ್‌ ಹೇಳಿದ್ದಾರೆ.

“ನಾನು ಬಳಿಕ ಚೆನ್ನೈನಲ್ಲಿ ಹೆಚ್ಚಿನ ಸ್ಕ್ಯಾನ್‌ ಮಾಡಿಸಿದೆ. ನನಗೆ ವಂಶವಾಹಿ ಕಾಯಿಲೆ ಇದೆ ಎಂಬುದಾಗಿ ವೈದ್ಯರು ದೃಢಪಡಿಸಿದರು. ಆಗ, ವೃತ್ತಿ ಜೀವನದ ಪ್ರಮುಖ ಜವಾಬ್ದಾರಿಗಳು ಹಾಗೂ ಆರೋಗ್ಯದ ಸಮಸ್ಯೆಯನ್ನು ನಿಭಾಯಿಸುವುದು ನನಗೆ ಕಷ್ಟವಾಯಿತು. ನನಗೆ ಕ್ಯಾನ್ಸರ್‌ ಇದೆ ಎಂಬುದನ್ನು ತಿಳಿದು ನನ್ನ ಕುಟುಂಬಸ್ಥರೂ ಆಘಾತಕ್ಕೊಳಗಾಗಿದ್ದರು. ಆದರೆ, ಸತತ ಚಿಕಿತ್ಸೆ ಹಾಗೂ ಮಾನಸಿಕ ಸ್ಥೈರ್ಯದಿಂದ ಕಾಯಿಲೆ ವಿರುದ್ಧ ಗೆದ್ದಿದ್ದೇನೆ. ನಾನೀಗ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ” ಎಂದು ಎಸ್‌. ಸೋಮನಾಥ್‌ ತಿಳಿಸಿದರು.

ಇದನ್ನೂ ಓದಿ: Karnataka Rajyotsava : ಇಸ್ರೋ ಮುಖ್ಯಸ್ಥ ಸೋಮನಾಥ್‌ ಸೇರಿ 68 ಮಂದಿ, 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ

ಭಾರತದ ಚೊಚ್ಚಲ ಬಾಹ್ಯಾಕಾಶ ಆಧಾರಿತ ಸೌರ ಮಿಷನ್ ಆಗಿರುವ ಆದಿತ್ಯ ಎಲ್‌1 ಬಾಹ್ಯಾಕಾಶ ನೌಕೆಯು ಕೆಲ ದಿನಗಳ ಹಿಂದಷ್ಟೇ ಕಕ್ಷೆ ಸೇರಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಮಿಷನ್‌ ಹೊತ್ತುಕೊಂಡು ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್‌ ಕಳೆದ ವರ್ಷದ ಸೆಪ್ಟೆಂಬರ್‌ 2ರಂದು ನಭಕ್ಕೆ ಹಾರಿತು. ನಭಕ್ಕೆ ನೆಗೆದ ಕೆಲವೇ ನಿಮಿಷಗಳಲ್ಲಿ ರಾಕೆಟ್‌ನಿಂದ ಆದಿತ್ಯ ಎಲ್‌ 1 ಮಿಷನ್‌ ಬೇರ್ಪಟ್ಟಿತ್ತು. ಸೂರ್ಯನ ಮೇಲ್ಮೈನಲ್ಲಿ ಮಾತ್ರ ಆದಿತ್ಯ ಎಲ್‌ 1 ಮಿಷನ್‌ ಅಧ್ಯಯನ ನಡೆಸಲಿದೆ. ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿ 15 ಲಕ್ಷ ಕಿಲೋಮೀಟರ್‌ ಸಂಚರಿಸಿ ಅಧ್ಯಯನ ನಡೆಸುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version