ಚೆನ್ನೈ: ಚಂದ್ರಯಾನ 3 ಮಿಷನ್ (Chandrayaan 3) ವೇಳೆ 10, 9, 8, 7, 6, 5, 4, 3, 2, 1 ಎಂದು ಕೌಂಟ್‌ಡೌನ್‌ಗೆ ಧ್ವನಿಯಾಗಿದ್ದ ಇಸ್ರೋ ವಿಜ್ಞಾನಿ ವಲರ್ಮತಿ (Valarmathi) ಅವರು ನಿಧನರಾಗಿದ್ದಾರೆ. ಹೃದಯಾಘಾತದಿಂದ ಅವರು ಚೆನ್ನೈನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಚಂದ್ರಯಾನ 3 ಉಡಾವಣೆಗೆ ಇಸ್ರೋ ನೇರಪ್ರಸಾರದ ವ್ಯವಸ್ಥೆ ಮಾಡಿತ್ತು. ಕೋಟ್ಯಂತರ ಜನ ಲೈವ್ ವೀಕ್ಷಣೆ ಮಾಡಿದ್ದರು. ಆಗ ವಲರ್ಮತಿ ಅವರು ಕೌಂಟ್ ಡೌನ್ ಮಾಡುವ ಧ್ವನಿಯನ್ನು ಭಾರತೀಯರು ಕೇಳಿ ಖುಷಿಪಟ್ಟಿದ್ದರು. ಆದರೆ, ಇಸ್ರೋ ವಿಜ್ಞಾನಿಯೂ ಆಗಿದ್ದ ವಲರ್ಮತಿ ಅವರು ಶನಿವಾರ (ಸೆಪ್ಟೆಂಬರ್ 4) ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ವಲರ್ಮತಿ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ವಲರ್ಮತಿ ಅವರು ಇಸ್ರೋದ ಹಲವು ಉಡಾವಣೆಗಳ ಕೌಂಟ್‌ಡೌನ್‌ಗಳಿಗೆ ಧ್ವನಿಯಾಗಿದ್ದರು. ಚಂದ್ರಯಾನ 3 ಮಿಷನ್‌ಗೇ ಅವರು ಕೊನೆಯ ಬಾರಿ ಕೌಂಟ್‌ಡೌನ್‌ಗೆ ಧ್ವನಿಯಾಗಿದ್ದರು ಎಂದು ಇಸ್ರೋ ಮಾಜಿ ವಿಜ್ಞಾನಿ ಡಾ.ವೆಂಕಟಕೃಷ್ಣನ್ ತಿಳಿಸಿದ್ದಾರೆ.
ಇದನ್ನೂ ಓದಿ: Chandrayaan- 3 : ಚಂದ್ರನ ಮೇಲೆ ಶೀಘ್ರ ನಿದ್ದೆಗೆ ಜಾರಲಿದೆ ಲ್ಯಾಂಡರ್, ರೋವರ್; ಕಾರಣ ಕೊಟ್ಟ ಇಸ್ರೊ
ಜುಲೈ 14ರಂದು ಇಸ್ರೋ ಚಂದ್ರಯಾನ 3 ಮಿಷನ್ ಉಡಾವಣೆ ಮಾಡಿದೆ. ಮಿಷನ್‌ನ ನೌಕೆಯು ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ಲ್ಯಾಂಡ್ ಆಗಿದೆ. ಇದರೊಂದಿಗೆ ಜಗತ್ತಿನಲ್ಲೇ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಮಾಡಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾಗಿ, ಇಸ್ರೋ ವಿಜ್ಞಾನಿಗಳಿಗೆ ಭಾರತ ಸೇರಿ ಜಗತ್ತಿನಾದ್ಯಂತ ಅಭಿನಂದನೆ, ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ. ಇದರ ಬೆನ್ನಲ್ಲೇ ವಲರ್ಮತಿ ಅವರ ಅಗಲಿಕೆಯು ಅಚ್ಚರಿ ಮೂಡಿಸಿದೆ.