Site icon Vistara News

Chandrayaan 3: ಚಂದ್ರಯಾನ ಯಶಸ್ಸಿಗಾಗಿ ತಿರುಪತಿ ದೇಗುಲಕ್ಕೆ ತೆರಳಿ ಪ್ರಾರ್ಥಿಸಿದ ಇಸ್ರೊ ವಿಜ್ಞಾನಿಗಳು

ISRO Scientists Pray At Tirupati

ISRO Scientists Visit at Tirupati Temple ahead of Chandrayaan-3 launch, Pray For Success Of Mission

ಹೈದರಾಬಾದ್:‌ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಬಹುನಿರೀಕ್ಷಿತ ಚಂದ್ರಯಾನ-3 (Chandrayaan 3) ಮಿಷನ್‌ ಲಾಂಚ್‌ಗೆ ದಿನ ಗಣನೆ ಆರಂಭವಾಗಿದೆ. ಶುಕ್ರವಾರ (ಜುಲೈ 14) ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಹೊತ್ತ ಎಲ್‌ವಿಎಂ3-4ಎಂ ರಾಕೆಟ್‍‌ ಉಡಾವಣೆ ಮಾಡಲಾಗುತ್ತದೆ. ಇನ್ನು ಚಂದ್ರಯಾನ-3 ಮಿಷನ್‌ ಹಿನ್ನೆಲೆಯಲ್ಲಿ ಇಸ್ರೊ ವಿಜ್ಞಾನಿಗಳು ಆಂಧ್ರಪ್ರದೇಶದ ತಿರುಪತಿ ದೇವಾಲಯಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ. ಗುರುವಾರ ಮಧ್ಯಾಹ್ನ 1 ಗಂಟೆಯಿಂದಲೇ ಚಂದ್ರಯಾನ 3ಗೆ ಕೌಂಟ್‌ಡೌನ್‌ ಶುರುವಾಗಿದೆ.

ಚಂದ್ರಯಾನ 3 ಉಡಾವಣೆ ಹಿನ್ನೆಲೆಯಲ್ಲಿ ಇಸ್ರೊ ವಿಜ್ಞಾನಿಗಳ ಮೇಲೆ ದೇಶವೇ ಹೆಚ್ಚಿನ ನಿರೀಕ್ಷೆ ಇರಿಸಿದೆ. ಇಸ್ರೊ ವಿಜ್ಞಾನಿಗಳು ಕೂಡ ಮಿಷನ್‌ಗಾಗಿ ಅಷ್ಟೇ ಶ್ರಮವಹಿಸಿದ್ದಾರೆ. ಹಾಗಾಗಿ, ವಿಜ್ಞಾನಿಗಳ ತಂಡವು ತಿರುಪತಿಯಲ್ಲಿರುವ ವೆಂಕಟಚಲಾಪತಿಯ ದರ್ಶನ ಪಡೆದು, ಮಿಷನ್‌ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ. “ಚಂದ್ರಯಾನ 3 ಮಿಷನ್‌ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದ್ದೇವೆ, ಶುಕ್ರವಾರ ಚಂದ್ರನ ಅಂಗಳಕ್ಕೆ ನಾವು ಕಾಲಿಡುತ್ತೇವೆ” ಎಂದು ಪ್ರಾರ್ಥನೆ ಬಳಿಕ ವಿಜ್ಞಾನಿಯೊಬ್ಬರು ತಿಳಿಸಿದರು.

Chandrayaan 3 ಲಾಂಚ್ ಎಲ್ಲಿ ಮತ್ತು ಹೇಗೆ ನೋಡುವುದು?

ಶ್ರೀಹರಿಕೋಟದ ಎಸ್‌ಡಿಎಸ್‌ಸಿ-ಎಸ್‌ಎಚ್‌ಎಆರ್‌ನ ಲಾಂಚ್ ವ್ಯೂ ಗ್ಯಾಲರಿ ಮೂಲಕ ಚಂದ್ರಯಾನ-3 ಲಾಂಚ್ ಕ್ಷಣದಗಳನ್ನು ವೀಕ್ಷಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾರ್ವಜನಿಕರಿಗೆ ಆಹ್ವಾನಿಸಿದೆ. ಚಂದ್ರಯಾನ-3 ಲಾಂಚ್ ವೀಕ್ಷಣೆಗೆ ನೋಂದಣಿ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ. ಆಧಾರ್, ಡಿಎಲ್ ಅಥವಾ ಸರ್ಕಾರ ನೀಡಿದ ಯಾವುದೇ ಐಡಿ ಕಾರ್ಡ್, ಮೊಬೈಲ್, ಇಮೇಲ್ ಐಡಿ ಹೊಂದಿರಬೇಕು. ಹಾಗೆಯೇ, ಕೋವಿಡ್ ಎರಡು ಡೋಸ್‌ಗಳನ್ನು ಹಾಕಿಸಿಕೊಂಡಿರಬೇಕು. ಅಂಥವರಿಗೆ ಮಾತ್ರವೇ ಅವಕಾಶ ಇರಲಿದೆ.

ಇದನ್ನೂ ಓದಿ: ವಿಸ್ತಾರ Explainer: Chandrayaan- 3; ಚಂದ್ರಯಾನ- 3ರ ವಿಶೇಷತೆಗಳು ಏನೇನು? ಏನಿದರ ಉದ್ದೇಶ?

ಆನ್‌ಲೈನ್‌ನಲ್ಲಿ ಚಂದ್ರಯಾನ-3 ಲಾಂಚ್ ವೀಕ್ಷಿಸಿ

ಒಂದೊಮ್ಮೆ ಇಸ್ರೋ ಲಾಂಚಿಂಗ್‌ ಸೆಂಟರ್‌ನಲ್ಲಿ ವೀಕ್ಷಿಸಲು ಸಾಧ್ಯವಾಗದೇ ಹೋದರೆ ಸಾರ್ವಜನಿಕರು ಆನ್‌ಲೈನ್ ಮೂಲಕ ಈ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇಸ್ರೋ ಆಫಿಷಿಯಲ್ ಯುಟ್ಯೂಬ್ ಚಾನೆಲ್ ಮೂಲಕ ವೀಕ್ಷಣೆ ಮಾಡಬಹುದಾಗಿದೆ. ಚಂದ್ರಯಾನ-3 ಲಾಂಚ್ ಆನ್ ಲೈನ್ ವೀಕ್ಷಣೆಗೆ ಇಲ್ಲಿ ಕ್ಲಿಕ್ ಮಾಡಿ. ಅಷ್ಟೇ ಅಲ್ಲದೇ, ಇಸ್ರೋ ಅಧಿಕೃತ ಜಾಲತಾಣ ಮೂಲಕ ವೀಕ್ಷಣೆ ಮಾಡಬಹುದಾಗಿದೆ.

ಚಂದ್ರಯಾನ-3ರ ಮೂಲಕ ಆ ಉಪಗ್ರಹದ ನೆಲದ ಮೇಲೆ ಇಳಿಯುವ ವೈಜ್ಞಾನಿಕ ಉಪಕರಣಗಳು ಅಲ್ಲಿ 14 ಭೂಗ್ರಹ ದಿನಗಳ ಕಾಲ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿವೆ. ಚಂದ್ರನ ಮೇಲಿನ ಒಂದು ದಿನ ಭೂಗ್ರಹದ ಮೇಲಿನ 14 ದಿನಗಳಿಗೆ ಸಮಾನ. ಈ ಚಂದ್ರಯಾನದ ತಂತ್ರಜ್ಞಾನ ಸೇರಿದಂತೆ ಇವೆಲ್ಲವೂ ಮುಂದೊಂದು ದಿನ ಇತರ ಗ್ರಹಗಳ ನಡುವಿನ ಸಂಪರ್ಕ ಸಾಹಸಗಳಿಗೆ ಹೇತುವಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.

Exit mobile version