ಶ್ರೀಹರಿಕೋಟ: ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಮಿಷನ್ (Chandrayaan 3) ನೌಕೆಯನ್ನು ಸಾಫ್ಟ್ ಲ್ಯಾಂಡ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಇಸ್ರೋ ಈಗ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಸೂರ್ಯನ ಮೇಲ್ಮೈ ವಾತಾವರಣದ ಅಧ್ಯಯನಕ್ಕಾಗಿ ಕೈಗೊಂಡ ಆದಿತ್ಯ ಎಲ್ 1 ಮಿಷನ್ (Aditya L1 Launch) ಉಡಾವಣೆ ಯಶಸ್ವಿಯಾಗಿದೆ. ಭಾರತದ ಮೊದಲ ಸೂರ್ಯಯಾನ ಇದಾಗಿದ್ದು, ಉಡಾವಣೆ ಬಳಿಕ ಇಸ್ರೋ ವಿಜ್ಞಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಿಷನ್ ಹೊತ್ತುಕೊಂಡು ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್ ನಭಕ್ಕೆ ಹಾರಿದೆ. ಚಂದ್ರನ ಅಂಗಳಕ್ಕೆ ಇಳಿದು ಚಂದ್ರಯಾನ 3 ನೌಕೆಯು ಅಧ್ಯಯನ ನಡೆಸಿದಂತೆ ಆದಿತ್ಯ ಎಲ್ 1 ಮಿಷನ್ ಸೂರ್ಯನ ಅಂಗಳಕ್ಕೆ ಇಳಿಯುವುದಿಲ್ಲ ಹಾಗೂ ಸೂರ್ಯನಿಗೆ ತುಂಬ ಹತ್ತಿರದಲ್ಲಿ ಅಧ್ಯಯನ ನಡೆಸುವುದಿಲ್ಲ. ಸೂರ್ಯನ ಮೇಲ್ಮೈನಲ್ಲಿ ಮಾತ್ರ ಆದಿತ್ಯ ಎಲ್ 1 ಮಿಷನ್ ಅಧ್ಯಯನ ನಡೆಸಲಿದೆ. ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿ 15 ಲಕ್ಷ ಕಿಲೋಮೀಟರ್ ಸಂಚರಿಸಿ ಅಧ್ಯಯನ ನಡೆಸಲಿದೆ. ಭೂಮಿಯಿಂದ 15 ಲಕ್ಷ ಕಿಲೊಮೀಟರ್ ಅಂದರೆ, ಭೂಮಿಯಿಂದ ಸೂರ್ಯನಿಗಿರುವ ದೂರದಲ್ಲಿ ಶೇ.1ರಷ್ಟು ಮಾತ್ರ ಕ್ರಮಿಸಿದಂತೆ.
ಉಡಾವಣೆಯ ವಿಡಿಯೊ
ಆದಿತ್ಯ ಮಿಷನ್ ಉದ್ದೇಶ
ಆದಿತ್ಯ ಎಲ್ 1 ಮಿಷನ್ ಸೂರ್ಯನ ಕುರಿತು ಅಧ್ಯಯನ ಮಾಡಲಿರುವ ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್ ಆಗಿದೆ. ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿ ಇದು ಅಧ್ಯಯನ ಮಾಡಲಿದೆ. ಅಂದರೆ, ಚಂದ್ರನಿಗಿಂತ ನಾಲ್ಕು ಪಟ್ಟು ಹೆಚ್ಚು ದೂರದಲ್ಲಿ ಮಿಷನ್ ಕಾರ್ಯನಿರ್ವಹಿಸಲಿದೆ.
ಗ್ರಹಣ ಸೇರಿ ಯಾವುದೇ ಸಂದರ್ಭದಲ್ಲಿಯೂ ಮಿಷನ್ ಸೂರ್ಯನ ಕುರಿತು ಅಧ್ಯಯನ ನಡೆಸಲಿದೆ ಎಂಬುದಾಗಿ ಇಸ್ರೋ ಮಾಹಿತಿ ನೀಡಿದೆ. ಸೂರ್ಯನ ಮೇಲ್ಮೈ ವಾತಾವರಣ, ತಾಪಮಾನ, ಉಷ್ಣಗಾಳಿ, ಸೂರ್ಯನ ಪ್ರಭಾವಲಯದ ಭೌತವಿಜ್ಞಾನ (Physics Of Solar Corona), ಉಷ್ಣವಲಯದ ಪ್ರಭಾವ ಸೇರಿ ಹಲವು ಅಂಶಗಳ ಕುರಿತು ಉಪಗ್ರಹವು ಅಧ್ಯಯನ ನಡೆಸಲಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಆದಿತ್ಯನತ್ತ ಇಸ್ರೋ ದಾಪುಗಾಲು
ಸೂರ್ಯನ ಲ್ಯಾಗ್ರೇಂಜ್ ಪಾಯಿಂಟ್‌ನಲ್ಲಿ (L Point) ಆದಿತ್ಯ ಎಲ್ 1 ಮಿಷನ್‌ನ ಉಪಗ್ರಹವು ಅಧ್ಯಯನ ನಡೆಸಲಿದೆ. ಈ ಲ್ಯಾಗ್ರೇಂಜ್ ಪಾಯಿಂಟ್ ತಲುಪಲು ಉಪಗ್ರಹಕ್ಕೆ 4 ತಿಂಗಳು ಬೇಕಾಗುತ್ತದೆ ಎಂದು ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.