Site icon Vistara News

Aditya L1 Mission: ಮೊದಲ ಕಕ್ಷೆ ಬದಲಿಸಿ ಯಶಸ್ವಿಯಾಗಿ ಮುನ್ನುಗ್ಗಿದ ಆದಿತ್ಯ ಎಲ್‌ 1; ಇಸ್ರೋ ಸಂತಸ

Aditya L 1 Mission

ISRO Successfully Performs First Earth Bound Manoeuvre Of Aditya L1 Mission

ಬೆಂಗಳೂರು: ಸೂರ್ಯನ ಮೇಲ್ಮೈ ವಾತಾವರಣದ ಅಧ್ಯಯನಕ್ಕಾಗಿ ಇಸ್ರೋ ಕೈಗೊಂಡಿರುವ ಆದಿತ್ಯ ಎಲ್‌ 1 ಮಿಷನ್‌ (Aditya L1 Mission) ಉಡಾವಣೆಯಾದ ಒಂದು ದಿನದಲ್ಲೇ ಮಹತ್ವದ ಮುನ್ನಡೆ ಸಾಧಿಸಿದೆ. ಭಾನುವಾರ ಆದಿತ್ಯ ಎಲ್‌ 1 ಮಿಷನ್‌ ಯಶಸ್ವಿಯಾಗಿ ಮೊದಲ ಕಕ್ಷೆಯನ್ನು ಬದಲಾಯಿಸಿದ್ದು (Burn Or Manoeuvre, ಸೂರ್ಯನತ್ತ ಮುನ್ನುಗ್ಗುತ್ತಿದೆ.

ಮೊದಲ ಕಕ್ಷೆ ಬದಲಾವಣೆ ಕುರಿತು ಇಸ್ರೋ ಫೋಟೊ ಸಮೇತ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. “ಆದಿತ್ಯ ಎಲ್‌ 1 ಮಿಷನ್‌ ಉಪಗ್ರಹವು ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ. ಸೂರ್ಯನ ಮೇಲ್ಮೈನತ್ತ ಹೊರಟಿರುವ ಮಿಷನ್‌ ಯಶಸ್ವಿಯಾಗಿ ಮೊದಲ ಕಕ್ಷೆ ಬದಲಿಸಿದೆ. ಬೆಂಗಳೂರಿನಲ್ಲಿರುವ ISTRAC ಸಂಸ್ಥೆ ಮೂಲಕ ಕಕ್ಷೆ ಬದಲಾವಣೆ ಮಾಡಲಾಗಿದೆ. ಸೆಪ್ಟೆಂಬರ್‌ 5ರಂದು ಮಧ್ಯಾಹ್ನ 3 ಗಂಟೆಗೆ ಮತ್ತೊಮ್ಮೆ ಕಕ್ಷೆ ಬದಲಾವಣೆ ಮಾಡಲಾಗುತ್ತದೆ” ಎಂದು ಇಸ್ರೋ ತಿಳಿಸಿದೆ.

ಇಸ್ರೋ ಮಾಹಿತಿ

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಮಿಷನ್‌ ಹೊತ್ತುಕೊಂಡು ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್‌ ಶನಿವಾರ (ಸೆಪ್ಟೆಂಬರ್‌ 2) ನಭಕ್ಕೆ ಹಾರಿತು. ನಭಕ್ಕೆ ನೆಗೆದ ಕೆಲವೇ ನಿಮಿಷಗಳಲ್ಲಿ ರಾಕೆಟ್‌ನಿಂದ ಆದಿತ್ಯ ಎಲ್‌ 1 ಮಿಷನ್‌ ಬೇರ್ಪಟ್ಟಿದೆ. ಸೂರ್ಯನ ಮೇಲ್ಮೈನಲ್ಲಿ ಮಾತ್ರ ಆದಿತ್ಯ ಎಲ್‌ 1 ಮಿಷನ್‌ ಅಧ್ಯಯನ ನಡೆಸಲಿದೆ. ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿ 15 ಲಕ್ಷ ಕಿಲೋಮೀಟರ್‌ ಸಂಚರಿಸಿ ಅಧ್ಯಯನ ನಡೆಸಲಿದೆ. ಭೂಮಿಯಿಂದ 15 ಲಕ್ಷ ಕಿಲೊಮೀಟರ್‌ ಅಂದರೆ, ಭೂಮಿಯಿಂದ ಸೂರ್ಯನಿಗಿರುವ ದೂರದಲ್ಲಿ ಶೇ.1ರಷ್ಟು ಮಾತ್ರ ಕ್ರಮಿಸಿದಂತೆ.

ಇದನ್ನೂ ಓದಿ: Aditya L1 Launch: ರಾಕೆಟ್‌ನಿಂದ ಬೇರ್ಪಟ್ಟ ಆದಿತ್ಯ ಎಲ್‌ 1 ಮಿಷನ್;‌ ಇಸ್ರೋಗೆ ಶಹಬ್ಬಾಶ್‌ ಎಂದ ಮೋದಿ

ಆದಿತ್ಯ ಎಲ್‌ 1 ಮಿಷನ್‌ ಸೂರ್ಯನ ಕುರಿತು ಅಧ್ಯಯನ ಮಾಡಲಿರುವ ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್‌ ಆಗಿದೆ. ಚಂದ್ರನಿಗಿಂತ ನಾಲ್ಕು ಪಟ್ಟು ಹೆಚ್ಚು ದೂರದಲ್ಲಿ ಮಿಷನ್‌ ಕಾರ್ಯನಿರ್ವಹಿಸಲಿದೆ. ಗ್ರಹಣ ಸೇರಿ ಯಾವುದೇ ಸಂದರ್ಭದಲ್ಲಿಯೂ ಮಿಷನ್‌ ಸೂರ್ಯನ ಕುರಿತು ಅಧ್ಯಯನ ನಡೆಸಲಿದೆ ಎಂಬುದಾಗಿ ಇಸ್ರೋ ಮಾಹಿತಿ ನೀಡಿದೆ. ಸೂರ್ಯನ ಮೇಲ್ಮೈ ವಾತಾವರಣ, ತಾಪಮಾನ, ಉಷ್ಣಗಾಳಿ, ಸೂರ್ಯನ ಪ್ರಭಾವಲಯದ ಭೌತವಿಜ್ಞಾನ (Physics Of Solar Corona), ಉಷ್ಣವಲಯದ ಪ್ರಭಾವ ಸೇರಿ ಹಲವು ಅಂಶಗಳ ಕುರಿತು ಉಪಗ್ರಹವು ಅಧ್ಯಯನ ನಡೆಸಲಿದೆ.

Exit mobile version