Site icon Vistara News

Chandrayaan 3: ಇತಿಹಾಸ ಸೃಷ್ಟಿಸಿ ಚಂದ್ರನ ಮಡಿಲಲ್ಲಿ ಮಲಗಿದ ವಿಕ್ರಮ್‌ ಲ್ಯಾಂಡರ್‌, ಪ್ರಜ್ಞಾನ್‌ ರೋವರ್; ಇಲ್ಲಿವೆ Photos

Chandrayaan 3

ISRO's latest images show Chandrayaan-3's Vikram lander, Pragyan rover resting on Moon

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಐತಿಹಾಸಿಕ ಚಂದ್ರಯಾನ 3 ಮಿಷನ್‌ಅನ್ನು (Chandrayaan 3) ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಅದರಲ್ಲೂ, ಚಂದ್ರನ ದಕ್ಷಿಣ ಧ್ರುವದಲ್ಲಿ ಮಿಷನ್‌ಅನ್ನು ಸಾಫ್ಟ್‌ ಲ್ಯಾಂಡ್‌ ಮಾಡಿದ ಜಗತ್ತಿನ ಮೊದಲ ದೇಶ ಎನಿಸಿದೆ. ಇದಾದ ಬಳಿಕ ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಛಾಪು ಮೂಡಿಸಿದೆ. ಇದರ ಬೆನ್ನಲ್ಲೇ, ಚಂದ್ರಯಾನ 3 ಮಿಷನ್‌ನ ವಿಕ್ರಮ್‌ ಲ್ಯಾಂಡರ್‌ (Vikram Lander) ಹಾಗೂ ಪ್ರಜ್ಞಾನ್‌ ರೋವರ್‌ಗಳು ಚಂದಿರನ ಅಂಗಳದಲ್ಲಿ ಹಾಯಾಗಿ ಮಲಗಿರುವ ಹೊಸ ಫೋಟೊಗಳನ್ನು ಇಸ್ರೋ ಬಿಡುಗಡೆಗೊಳಿಸಿದೆ.

2024ರ ಮಾರ್ಚ್‌ 15ರಂದೇ ಸಂಶೋಧಕ ಚಂಧ್ರ ತುಂಗತುರ್ತಿ ಅವರು ಫೋಟೊಗಳನ್ನು ಸೆರೆ ಹಿಡಿದಿದ್ದು, ಅವುಗಳನ್ನು ಪರಿಶೀಲಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಒಂದು ಪಿಕ್ಸೆಲ್‌ಗೆ 17 ಸೆಂಟಿಮೀಟರ್‌ನಂತೆ ಸುಮಾರು 65 ಕಿಲೋಮೀಟರ್‌ ದೂರದಿಂದ ಚಂದಿರನ ಅಂಗಳದಲ್ಲಿ ಲ್ಯಾಂಡರ್‌ ಹಾಗೂ ರೋವರ್‌ ಮಲಗಿರುವ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ. ಈ ಫೋಟೊಗಳು ಈಗ ವೈರಲ್‌ ಆಗಿವೆ.

2023ರ ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ LVM3 ರಾಕೆಟ್‌ನ ಮೂಲಕ ಉಡಾವಣೆಗೊಂಡ ಚಂದ್ರಯಾನ-3, ಒಂದು ತಿಂಗಳ ಕಾಲ ಬಾಹ್ಯಾಕಾಶ ಹಾರಾಟದ ನಂತರ ಆಗಸ್ಟ್ 23ರಂದು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯಿತು. ಆ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ ಲ್ಯಾಂಡ್‌ ಆದ ಜಗತ್ತಿನ ಮೊದಲ ಮಿಷನ್‌ ಎಂಬ ಖ್ಯಾತಿಗೆ ಭಾಜನವಾಯಿತು. ಇದರೊಂದಿಗೆ ಇಸ್ರೋ ಮೈಲುಗಲ್ಲು ಸ್ಥಾಪಿಸಿತು.

ಅಷ್ಟೇ ಅಲ್ಲ, ಚಂದ್ರಯಾನ 3 ಮಿಷನ್‌ ಲ್ಯಾಂಡ್‌ ಆದ ಪ್ರದೇಶವನ್ನು ಶಿವಶಕ್ತಿ ಎಂಬುದಾಗಿ ಕರೆಯಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟವು (International Astronomical Union) ಮಾರ್ಚ್‌ 19ರಂದು ಅನುಮತಿ ನೀಡಿದೆ. ಇದರೊಂದಿಗೆ ಬಾಹ್ಯಾಕಾಶ ನೌಕೆ ಇಳಿದ ಪ್ರದೇಶವೀಗ ಅಧಿಕೃತವಾಗಿ ಶಿವಶಕ್ತಿ ಪಾಯಿಂಟ್‌ ಎನಿಸಿದೆ.

2023ರ ಜುಲೈ 14ರಂದು ಚಂದ್ರಯಾನ 3 ಮಿಷನ್‌ ಉಡಾವಣೆಗೆ ಕೆಲವೇ ನಿಮಿಷಗಳು ಬಾಕಿ ಇದ್ದವು. ಇನ್ನೇನು ಉಡಾವಣೆ ಮಾಡಬೇಕು ಎನ್ನುವಷ್ಟರಲ್ಲಿಯೇ ಚಂದ್ರಯಾನ 3 ರಾಕೆಟ್‌ ಸಾಗುವ ಮಾರ್ಗದಲ್ಲಿ ಬಾಹ್ಯಾಕಾಶ ತ್ಯಾಜ್ಯವೊಂದು ಇಸ್ರೋ ವಿಜ್ಞಾನಿಗಳಿಗೆ ಕಾಣಿಸಿದೆ. ಇದರಿಂದಾಗಿ ಇಸ್ರೋ ವಿಜ್ಞಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಇನ್ನೇನು ಕೆಲವೇ ನಿಮಿಷಗಳಲ್ಲಿ ಉಡಾವಣೆ ಮಾಡಬೇಕಿದೆ. ಉಡಾವಣೆ ಮಾಡಿದರೆ ಬಾಹ್ಯಾಕಾಶ ತ್ಯಾಜ್ಯಕ್ಕೆ ಚಂದ್ರಯಾನ 3 ರಾಕೆಟ್‌ ಡಿಕ್ಕಿಯಾಗಿ, ಇಡೀ ಮಿಷನ್‌ ಹಾಳಾಗುತ್ತಿತ್ತು.

ಚಂದ್ರಯಾನ 3 ಉಡಾವಣೆ ಮಾಡಲೇಬೇಕಿತ್ತು. ಹಾಗಾಗಿ, ಇಸ್ರೋ ವಿಜ್ಞಾನಿಗಳು ಚಾಣಾಕ್ಷತನ ಮೆರೆದರು. ಕೊನೆಯ ಕ್ಷಣದಲ್ಲಿ ಉಡಾವಣೆಯನ್ನು 4 ಸೆಕೆಂಡ್‌ ವಿಳಂಬ ಮಾಡಿದರು. ಇದೇ ಅವಧಿಯಲ್ಲಿ ಬಾಹ್ಯಾಕಾಶ ತ್ಯಾಜ್ಯವು ಚಂದ್ರಯಾನ 3 ಮಿಷನ್‌ ಮಾರ್ಗದಿಂದ ಬೇರೆಡೆ ವಾಲಿತು. ಆಗ, ವಿಜ್ಞಾನಿಗಳು ಯಶಸ್ವಯಾಗಿ ಚಂದ್ರಯಾನ 3 ಮಿಷನ್‌ಅನ್ನು ಉಡಾವಣೆ ಮಾಡಿದರು. ನಿಗದಿತ ಸಮಯಕ್ಕೆ ಉಡಾವಣೆ ಮಾಡಿದ್ದರೆ ಇಡೀ ಮಿಷನ್‌ ವಿಫಲವಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: Chandrayaan 3: ಚಂದ್ರಯಾನ 3 ಆಗುತ್ತಿತ್ತು ಛಿದ್ರ; ಆ 4 ಸೆಕೆಂಡ್‌ಗಳಲ್ಲೇ ಮಿಷನ್‌ ಬಚಾವ್‌ ಆಗಿದ್ದು ಹೇಗೆ?

Exit mobile version