ಹೋಶಿಯಾರಪುರ್: ಬಿಜೆಪಿಯ ಸಂಸದ ವರುಣ್ ಗಾಂಧಿ ಅವರು ಕಾಂಗ್ರೆಸ್ ಸೇರಲಿದ್ದಾರೆಂಬ ಊಹಾಪೋಹಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi), ”ವರುಣ್(ಗಾಂಧಿ) ಪ್ರತಿಪಾದಿಸುವ ಸಿದ್ಧಾಂತವು ನಮ್ಮ ಸಿದ್ಧಾಂತದೊಂದಿಗೆ ಹೊಂದಿಕೆಯಾಗುವುದಿಲ್ಲ,” ಎಂದು ಹೇಳಿದರು. ಇದರೊಂದಿಗೆ ವರುಣ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದರು. ಮತ್ತೊಂದೆಡೆ, ಸಂಘ ಪರಿವಾರದ ವಿರುದ್ದ ತಮ್ಮ ವಾಗ್ದಾಳಿ ಮುಂದುವರಿಸಿರುವ ರಾಹುಲ್, ಆರ್‌ಎಸ್ಎಸ್ ಕಚೇರಿಗೆ ಕಾಲಿಡುವುದಕ್ಕಿಂತ ತಮ್ಮ ತಲೆಯನ್ನು ಕತ್ತರಿಸಿಕೊಳ್ಳುವುದೇ ಲೇಸು ಎಂದು ಕಟುವಾಗಿ ಹೇಳಿದ್ದಾರೆ.
ವರುಣ್ ಗಾಂಧಿ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬಂದರೆ ಅವರಿಗೆ ಸಮಸ್ಯೆಯಾಗಬಹುದು. ನನ್ನ ಸಿದ್ಧಾಂತ ಅವರ ಸಿದ್ಧಾಂತಕ್ಕೆ ಹೊಂದಿಕೆಯಾಗುವುದಿಲ್ಲ. ನಾನು ಆರ್‌ಎಸ್‌ಎಸ್ ಕಚೇರಿಗೆ ಹೋಗಲಾರೆ, ಒಂದೊಮ್ಮೆ ಹೋಗಲೇಬೇಕಾದರೆ ಅದಕ್ಕೂ ಮೊದಲು ನನ್ನ ತಲೆ ಕಡಿಯಬೇಕಾಗುತ್ತದೆ. ನಮ್ಮ ಕುಟುಂಬವು ಒಂದು ಸಿದ್ಧಾಂತವನ್ನು ಹೊಂದಿದೆ. ವರುಣ್ ಇನ್ನೊಂದು ಸಿದ್ಧಾಂತವನ್ನು ಅಳವಡಿಸಿಕೊಂಡರು. ನಾನು ಆ ಸಿದ್ಧಾಂತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ನಾನು ವರುಣ್ ಅವರನ್ನು ಭೇಟಿಯಾಗಬಹುದು, ಅಪ್ಪಿಕೊಳ್ಳಬಹುದು. ಆದರೆ, ಅವರ ಸಿದ್ಧಾಂತವನ್ನು ಅಪ್ಪಿಕೊಳ್ಳಲಾರೆ ಎಂದು ಹೇಳಿದ ರಾಹುಲ್ ಗಾಂಧಿ ಅವರು, ಮುಂಬರುವ ಚುನಾವಣೆಯಲ್ಲಿ ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳಿಂದಾಗಿ ಬಿಜೆಪಿ ಭಾರೀ ಸಮಸ್ಯೆಯನ್ನು ಎದುರಿಸಲಿದೆ ಎಂದು ಹೇಳಿದರು. ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಪಂಜಾಬ್‌ನ ಹೋಶಿಯಾರಪುರದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಇದನ್ನೂ ಓದಿ | Varun Gandhi | ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆಯೇ ವರುಣ್ ಗಾಂಧಿ?